ಹೊಸದಿಗಂತ ವರದಿ, ಶಿವಮೊಗ್ಗ:
ಏಷಿಯಾ ಖಂಡದ ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಗೆ ಮಲೆನಾಡಿನ ಅಡಿಕೆ ಟೀ ಸಂಶೋಧಕ ನಿವೇದನ್ ನೆಂಪೆ ಆಯ್ಕೆ ಆಗಿದ್ದಾರೆ.
ಏಷಿಯಾ ಖಂಡದ ಪ್ರಭಾವಿ ಮ್ಯಾಗಝೀನ್ ಎನಿಸಿಕೊಂಡಿರುವ ಏಷಿಯಾ ಒನ್ ಮ್ಯಾಗಝೀನ್ ಈ ಆಯ್ಕೆ ಮಾಡಿದೆ. ಏಷಿಯಾದ ಅತ್ಯಂತ ಪ್ರಭಾವಿ 40 ವರ್ಷದೊಳಗಣ 40 ವ್ಯಕ್ತಿಗಳ ಪೈಕಿ ನಿವೇದನ್ ನೆಂಪೆ ಒಬ್ಬರಾಗಿದ್ದಾರೆ.
ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿಯನ್ನು ಪೋರ್ಬ್ಸ್ ನಿಯತಕಾಲಿಕ ಪ್ರಕಟಿಸುತ್ತದೆ. ಅದೇ ಮಾದರಿಯಲ್ಲಿ ಏಷಿಯಾ ಖಂಡದ ಪ್ರಭಾವಿ ವ್ಯಕ್ತಿಗಳ ಆಯ್ಕೆಯನ್ನು ಏಷಿಯಾ ಒನ್ ನಿಯತಕಾಲಿಕ ಮಾಡುತ್ತದೆ. ಅದಕ್ಕೆ ಯುವ ಸಂಶೋಧಕ ನಿವೇದನ್ ಆಯ್ಕೆಯಾಗಿದ್ದಾರೆ.
ಎರಡು ವರ್ಷಗಳ ಹಿಂದೆಯೇ ನಿವೇದನ್ ಅಡಿಕೆ ಟೀ ಸಂಶೋಧಿಸಿ ದೇಶದ ಗಮನ ಸೆಳೆದಿದ್ದರು. ಆ ಮೂಲಕ ಅಡಿಮೆ ವೌಲ್ಯವರ್ಧನೆ ಹೆಚ್ಚಿಸಿದ್ದರು. ಇದನ್ನು ಗಮನಿಸಿದ ಕೇಂದ್ರ ಸರ್ಕಾರ ನಿವೇದನ್ ಅವರಿಗೆ ಮೇಕ್ ಇನ್ ಇಂಡಿಯಾ ಅವಾರ್ಡ್ ಕೂಡಾ ಘೋಷಣೆ ಮಾಡಿತ್ತು. ಬಳಿಕ ಅಡಿಕೆಯಿಂದ ಜ್ಯೂಸ್ ಸಿದ್ಧಪಡಿಸಿದ್ದರು. ಇದೀಗ ಅಡಿಕೆ ಶಾಂಪೂ ಕೂಡ ಮಾರುಕಟ್ಟೆಗೆ ಬರಲು ಸಿದ್ಧವಾಗುತ್ತಿದೆ. ಇದನ್ನೆಲ್ಲಾ ಗಮನಿಸಿ ಏಷಿಯಾ ಒನ್ ನಿಯತಕಾಲಿಕ ಆಯ್ಕೆ ಮಾಡಿದೆ.