ಪಿರಿಯಾಪಟ್ಟಣದಲ್ಲಿ ಪಶು ಆಹಾರ ಉತ್ಪಾದನಾ ಘಟಕ ಆರಂಭಕ್ಕೆ ಒತ್ತು: ಸಚಿವ ಎಸ್.ಟಿ. ಸೋಮಶೇಖರ್

ಹೊಸದಿಗಂತ ವರದಿ, ಮೈಸೂರು:

ಸಹಕಾರ ಇಲಾಖೆಯಲ್ಲಿ ಯುವಕರಿಗೆ ಒತ್ತು ನೀಡಲಾಗುತ್ತಿದೆ. 5 ಸಾವಿರ ಜನರಿಗೆ ಉದ್ಯೋಗ ಕಲ್ಪಿಸುವ ಘೋಷಣೆ ಮಾಡಲಾಗಿದ್ದು, ಈಗಾಗಲೇ 3 ಸಾವಿರ ಹುದ್ದೆಗಳ ಭರ್ತಿಗೆ ನೋಟಿಫಿಕೇಷನ್ ಹೊರಡಿಸಲಾಗಿದೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಶುಕ್ರವಾರ ಮೈಸೂರು ಜಿಲ್ಲೆಯಪಿರಿಯಾಪಟ್ಟಣದಲ್ಲಿ ಡಿಸಿಸಿ ಬ್ಯಾಂಕ್ ಶಾಖೆಯ ಕಟ್ಟಡ ನಿರ್ಮಾಣ ಹಾಗೂ ನಂದಿನಿ ಮಿಲ್ಕ್ ಗ್ಯಾಲಕ್ಸಿ ಹಾಗೂ ನಂದಿನಿ ಕೆಫೆ ಶಂಕುಸ್ಥಾಪನೆ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಭಾಗದಲ್ಲಿ ಪಶು ಆಹಾರ ಉತ್ಪಾದನಾ ಘಟಕ ಆರಂಭಕ್ಕೆ ಸಂಬಂಧಿಸಿದಂತೆ ಕೆಎಂಎಫ್ ವ್ಯವಸ್ಥಾಪಕರಿಗೆ ಮಾತನಾಡಲಾಗಿದೆ ಎಂದರು.

ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಡಿಸಿಸಿ ಬ್ಯಾಂಕ್, ರೈತರಿಗೆ ಸೂಕ್ತ ರೀತಿಯಲ್ಲಿ ಸಾಲ ಸೌಲಭ್ಯಗಳನ್ನು ನೀಡುವ ಮೂಲಕ ರಾಜ್ಯದಲ್ಲಿ ನಂಬರ್ ಒನ್ ಸ್ಥಾನಕ್ಕೇರಿದೆ. ಮೈಸೂರು ಡಿಸಿಸಿ ಬ್ಯಾಂಕ್ ನಷ್ಟದಲ್ಲಿತ್ತು. ಎಲ್ಲಾ ನಿರ್ದೇಶಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ರೈತರ ಕಷ್ಟಸುಖಗಳಿಗೆ ಸ್ಪಂದಿಸಬೇಕೆಂಬ ಪ್ರಾಮಾಣಿಕ ಪ್ರಯತ್ನದ ಫಲವಾಗಿ ಮೈಸೂರು ಡಿಸಿಸಿ ಬ್ಯಾಂಕ್ ರಾಜ್ಯದಲ್ಲಿ ನಂಬರ್ ಒನ್ ಸ್ಥಾನಕ್ಕೇರುವಂತಾಗಿದೆ ಎಂದು ಹೇಳಿದರು.

ಮೈಸೂರು ಡಿಸಿಸಿ ಬ್ಯಾಂಕ್ ನಿಗದಿತ ಗುರಿಯಲ್ಲಿ 80% ಸಾಲ ನೀಡಿದೆ. ಮಾರ್ಚ್ ಗೆ ನೂರರಷ್ಟು ಗುರಿ ತಲುಪಲಿದೆ. ಹಾಲು ಉತ್ಪಾದಕರ ಸಹಕಾರ ಸಂಘಗಳು ಉತ್ತಮ ಕಾರ್ಯನಿರ್ವಹಿಸುತ್ತಿವೆ. ದೇಶ-ವಿದೇಶಗಳ ನಾನಾ ಭಾಗಗಳಿಗೆ ನಂದಿನಿ ತುಪ್ಪ ಪೂರೈಕೆಯಾಗುತ್ತದೆ. ನಂದಿನಿ ಹಾಲು ಕೂಡ ಅನ್ಯ ರಾಜ್ಯಗಳಿಗೆ ಹೋಗುತ್ತದೆ. ಹೀಗಾಗಿ ನಂದಿನಿ ಬ್ರ್ಯಾಂಡ್ ಗೆ ಕಳಂಕ ತರುವವರು, ನಕಲಿ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳುವಂತೆ ಸೂಚಿಸಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಸಕ ಮಹದೇವಪ್ಪ, ಮೈಸೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹರೀಶ್ ಗೌಡ, ಮೈಮೂಲ್ ಅಧ್ಯಕ್ಷ ಪ್ರಸನ್ನ ಸೇರಿದಂತೆ ನಾನಾ ಮುಖಂಡರು ಹಾಗೂ ಆಡಳಿತ ಮಂಡಳಿ ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!