ಹೊಸದಿಗಂತ ವರದಿ, ಹುಬ್ಬಳ್ಳಿ:
ರಾಷ್ಟ್ರ ಭಾಷೆ ಹಿಂದಿ ಜೊತೆಗೆ ಸ್ಥಳೀಯ ಭಾಷೆ ಹಾಗೂ ಇಂಗ್ಲಿಷ್ ಕಲಿಕೆಗೂ ನೂತನ ಶಿಕ್ಷಣ ನೀತಿಯಲ್ಲಿ ಆದ್ಯತೆಯ ನೀಡಲಾಗಿದ್ದು,ರಾಷ್ಟ್ರ ಮಟ್ಟದಲ್ಲಿ ಅನುಷ್ಠಾನ ತರಲಾಗುತ್ತಿದೆ ಎಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.
ಇಲ್ಲಿಯ ನವನಗರದ ಕರ್ನಾಟಕ ರಾಜ್ಯ ಕಾನೂನು ವಿಶ್ವ ವಿದ್ಯಾಲಯಕ್ಕೆ ಭೇಟಿ ನೀಡಿದ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಮಾತನಾಡಿದರು.
ದೇಶದ ಸಂವಿಧಾನ ಹಾಗೂ ಕಾನೂನು ವ್ಯವಸ್ಥೆ ಜಗತ್ತಿನಲ್ಲಿಯೇ ಶ್ರೇಷ್ಠವಾದದು. ಇದನ್ನು ಶ್ರೇಷ್ಠವಾಗಿಸುವಲ್ಲಿ ನಮ್ಮೆಲ್ಲರ ಕೊಡುಗೆ ಮುಖ್ಯ. ರಾಜ್ಯಪಾಲನಾಗಿ ಅಧಿಕಾರ ಸ್ವೀಕರಿಸಿದ ನಂತರ ಎರಡನೇ ಬಾರಿಗೆ ಹುಬ್ಬಳ್ಳಿ ಧಾರವಾಡಕ್ಕೆ ಭೇಟಿ ನೀಡುತ್ತಿದ್ದೇನೆ. ಕರ್ನಾಟಕ, ಕೃಷಿ ಹಾಗೂ ಕಾನೂನು ವಿಶ್ವವಿದ್ಯಾಲಯಗಳು ರಾಷ್ಟ್ರ ಮಟ್ಟದ ಉನ್ನತ ಶಿಕ್ಷಣ ಕೇಂದ್ರಗಳಾಗಿವೆ. ಕಾನೂನು ವಿಶ್ವ ವಿದ್ಯಾಲಯದಲ್ಲಿ ಓದಿದವರು ದೇಶದ ಸರ್ವೋಚ್ಚ ನ್ಯಾಯಾಲಯ ಹಾಗೂ ಉಚ್ಛ ನ್ಯಾಯಾಲಯಗಳಲ್ಲಿ ಕೆಲಸ ನಿರ್ವಹಸಿ ಹೆಸರುಗಳಿಸಿದ್ದಾರೆ. ನ್ಯಾಯಮೂರ್ತಿಗಳಾಗಿಯೂ ಸಹ ಸೇವೆ ಸಲ್ಲಿಸಿದ್ದಾರೆ. ಕಾನೂನು ವಿಶ್ವ ವಿದ್ಯಾಲಯದ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಲು ಸರ್ಕಾರ ಸಿದ್ಧವಿದೆ. ವಿಶ್ವ ವಿದ್ಯಾಲಯ ಸುಧಾರಣೆ ಕುರಿತು ಸಿಂಡಿಕೇಟ್ ಸದಸ್ಯರು, ಅಧ್ಯಾಪಕರು, ವಿದ್ಯಾರ್ಥಿಗಳು ಮುಕ್ತವಾಗಿ ತಮ್ಮ ಅಭಿಪ್ರಾಯ ಗಳನ್ನು ಹಂಚಿಕೊಳ್ಳಬಹುದು. ಇವುಗಳ ಕುರಿತು ಸರ್ಕಾರಕ್ಕೆ ಲಿಖಿತವಾಗಿ ಬರೆದು ಬಗೆಹರಿಸುವ ಪ್ರಯತ್ನ ಮಾಡುವುದಾಗಿ ಅವರು ಆಶ್ವಾಸನೆ ನೀಡಿದರು.
ಸಂವಾದದಲ್ಲಿ ಮಾತನಾಡಿದ ವಿದ್ಯಾರ್ಥಿ ಪ್ರೋಭಯ್ಯನ್ ಚಕ್ರಭೋರ್ತಿ ವಿಶ್ವ ವಿದ್ವಾಯಲಯದಲ್ಲಿನ ಅಣಕು ನ್ಯಾಯಾಲಯ ಕಲ್ಪನೆ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉನ್ನತ ಕಾನೂನು ಜ್ಞಾನ ಲಭಿಸುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವಿದ್ಯಾರ್ಥಿನಿ ಸಿದ್ಧಿ ನಾಗವೇಕರಿ ನೂತನ ಶಿಕ್ಷಣ ನೀತಿಯಲ್ಲಿನ ತ್ರಿಭಾಷ ಕಲಿಕೆಯ ಅನುಷ್ಠಾನದ ಕುರಿತು ಸಂವಾದಿಸಿದರು.
ರಾಜ್ಯಪಾಲರ ಕನ್ನಡ ಕಲಿಕೆ ಪ್ರೀತಿ:
ಸಂವಾದದ ಆರಂಭದಲ್ಲಿ ಮಾತನಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನಾನು ಮಧ್ಯಪ್ರದೇಶದವನು. ಹಿಂದಿ ಭಾಷಿಕ. ಇಂಗ್ಲಿಷ್ನಲ್ಲಿ ಸಭೆ ಉದ್ದೇಶಿಸಿ ಮಾತನಾಡುವುದು ಕಡಿಮೆ. ಕರ್ನಾಟಕ ಆಗಮಿಸಿದ ಮೇಲೆ ಕನ್ನಡ ಕಲಿಯಲು ಪ್ರಯತ್ನಿಸುತ್ತಿದ್ದೇನೆ ಎಂದು ಕನ್ನಡ ಭಾಷೆಯ ಕುರಿತಾದ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ರಾಜ್ಯಪಾಲರು ವಿಶ್ವ ವಿದ್ಯಾಲಯದ ಗ್ರಂಥಾಲಯ ಹಾಗೂ ಮುಖ್ಯ ಸಮುಚ್ಚಯ ಕಟ್ಟಡ, ಅಣುಕು ನ್ಯಾಯಲಯಗಳನ್ನು ವೀಕ್ಷಿಸಿದರು.
ಕಾನೂನು ವಿ.ವಿ.ಉಪಕುಲಪತಿ ಫ್ರೋ.ಪಿ.ಈಶ್ವರ ಭಟ್, ರಿಜಿಸ್ಟಾರ್ ಮಹಮದ್ ಜುಬೇರ್, ಕುಲಸಚಿವೆ ಪ್ರೋ. ರತ್ನ ಭರಮಗೌಡರ್, ನೋಂದಣಿ ಮತ್ತು ಮೌಲ್ಯಮಾಪನ ವಿಭಾಗದ ಪ್ರೋ.ಜಿ.ಬಿ.ಪಾಟೀಲ ಸೇರಿದಂತೆ ಸಿಂಡಿಕೇಟ್ ಸದ್ಯರಾದ ಮಹೇಶ್ ಓಡೆಯರ್, ಗಿರಿಜಾ ಹಿರೇಮಠ್, ಚಂದ್ರಮೋಹನ್ ಕಾಳೆ ಇದ್ದರು.