ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………
ಹೊಸ ದಿಗಂತ ವರದಿ, ಕುಶಾಲನಗರ:
ಕೋವಿಡ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯ ಕೆಲ ಭಾಗಗಳಲ್ಲಿ ಬೆಳೆದ ವಾಣಿಜ್ಯ ಮತ್ತು ತರಕಾರಿ ಬೆಳೆಗಳನ್ನು ಕೊಳ್ಳುವವರಿಲ್ಲದೆ ಹೊಲದಲ್ಲೇ ಕೊಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕೋವಿಡ್ ಲಾಕ್ಡೌನ್ ಹಿನ್ನೆಲೆಯಲ್ಲಿ ಹೊರ ರಾಜ್ಯದ ಮಾರುಕಟ್ಟೆ ಮತ್ತು ಹೊರ ಜಿಲ್ಲೆಗಳ ಖರೀದಿದಾರರು ಆಗಮಿಸದ ಹಿನ್ನೆಲೆಯಲ್ಲಿ ಕೂಡಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅನೇಕ ರೈತರು ಬೆಳೆದ ಎಲೆಕೋಸು ಸೇರಿದಂತೆ ವಿವಿಧ ತರಕಾರಿ ಬೆಳೆಗಳು ಹೊಲದಲ್ಲೇ ಕೊಳೆಯಲಾರಂಭಿಸಿವೆ.
ಕೂಡಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದ ನಾಗೇಶ್ ಎಂಬವರು ಲಕ್ಷಗಟ್ಟಲೆ ಹಣ ಖರ್ಚು ಮಾಡಿ ಎರಡು ಎಕರೆ ಪ್ರದೇಶದಲ್ಲಿ ಎಲೆಕೋಸು (ಕ್ಯಾಬೇಜ್) ಬೆಳೆದಿದ್ದು, ಕೋವಿಡ್ ರೋಗದ ಲಾಕ್ ಡೌನ್ ಹಿನ್ನೆಲೆಯಲ್ಲಿ ಖರೀದಿಸುವವರು ಬಾರದೇ ಇರುವುದರಿಂದ ಹೊಲದಲ್ಲಿ ಎಲೆಕೋಸು ಕೊಳೆಯುತ್ತಿರುವ ದೃಶ್ಯ ಕಂಡು ಬಂದಿದೆ.
ಕಳೆದ ಮೂರು ತಿಂಗಳುಗಳ ಹಿಂದೆ ಕೊಳವೆ ಬಾವಿಯ ನೀರನ್ನು ಉಪಯೋಗಿಸಿಕೊಂಡು ಎಲೆಕೊಸು ಬೆಳೆಯನ್ನು ಬೆಳೆಯಲಾಗಿದೆ. ಬೆಳೆಯು ಉತ್ತಮವಾಗಿ ಬಂದಿದ್ದು ಇದೀಗ ಕಟಾವು ಮಾಡುವ ಸಂದರ್ಭವಾಗಿದೆ. ಆದರೆ ವ್ಯಾಪಾರಿಗಳಿಗೆ ತಿಳಿಸಿದ್ದರೂ, ಕೋವಿಡ್ ಲಾಕ್ ಡೌನ್ ಇರುವುದರಿಂದ ಯಾರೂ ಇತ್ತ ಸುಳಿಯುತ್ತಿಲ್ಲ. ಇದರಿಂದಾಗಿ ಬಾರಿ ನಷ್ಟವಾಗಿದೆ ಎಂದು ರೈತ ನಾಗೇಶ್ ತನ್ನ ಅಳಲನ್ನು ತೋಡಿಕೊಂಡಿರುತ್ತಾರೆ.
ಅರೆ ಮಲೆನಾಡು ಪ್ರದೇಶವಾದ ಹೆಬ್ಬಾಲೆ, ತೊರೆನೂರು, ಅಳುವಾರ ಸೀಗೆಹೊಸೂರು ಮದಲಾಪುರ ವ್ಯಾಪ್ತಿಯಲ್ಲಿ ಎಲೆಕೋಸು ಬೆಳೆಯು ಉತ್ತಮವಾಗಿ ಬೆಳೆಯುತ್ತದೆ. ಅದರಿಂದಾಗಿ ಈ ಭಾಗದ ಅನೇಕ ರೈತರು ಮುಖ್ಯ ಬೆಳೆಯ ಜೊತೆಯಲ್ಲಿ ಉಪ ಬೆಳೆಯಾಗಿ ಎಲೆಕೋಸು, ಸಿಹಿ ಗೆಣಸು, ಕೆಸ ಮುಂತಾದ ಬೆಳೆಗಳನ್ನು ಬೆಳೆಯುತ್ತಾರೆ ಆದರೆ ಸೀಗಬೇಕಾದ ಬೆಲೆ ದೊರಕುತ್ತಿಲ್ಲ ಎಂಬುದು ರೈತರ ಅಳಲಾಗಿದೆ.