ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ವರದಿ, ಕೊಡಗು:
ಜಿಲ್ಲೆಯಲ್ಲಿ ಸೋಮವಾರದಿಂದ ಮತ್ತೆ ಒಂದು ವಾರ ಕಾಲ ಲಾಕ್ ಡೌನ್ ಮುಂದುವರಿಯಲಿರುವುದರಿಂದ ಜೂ.14ರಿಂದ 21ರ ಬೆಳಗ್ಗೆ 6ಗಂಟೆಯವರೆಗೆ ಅನ್ವಯವಾಗುವಂತೆ ಲಾಕ್ ಡೌನ್ ನಿಯಮಾವಳಿಗಳಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಸರ್ಕಾರದ ಇತ್ತೀಚಿನ ಆದೇಶ,ಮಾರ್ಗಸೂಚಿ ಹಾಗೂ ಜೂ. 11ರಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಅಧಿಕಾರಿಗಳೊಂದಿಗೆ ನಡೆಸಲಾದ ಟಾಸ್ಕ್ ಫೋರ್ಸ್ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳ ಅನ್ವಯ ಸಾರ್ವಜನಿಕ ಹಿತಾಸಕ್ತಿಯಿಂದ ಈ ಆದೇಶವನ್ನು ಹೊರಡಿಸಲಾಗಿದೆ ಎಂದು ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ತಿಳಿಸಿದ್ದಾರೆ.
ನೂತನ ಆದೇಶದನ್ವಯ ಅತ್ಯವಶ್ಯಕ ಸೇವೆಗಳಡಿ ಬರುವ ತರಕಾರಿ, ಹಣ್ಣು-ಹಂಪಲು, ದಿನಸಿ, ಕೃಷಿಗೆ ಸಂಬಂಧಿಸಿದ ಅಂಗಡಿ ಮಳಿಗೆ ಮತ್ತು ದಾಸ್ತಾನು ಕೇಂದ್ರಗಳು, ಮೀನು ಮತ್ತು ಮಾಂಸದ ಮಳಿಗೆಗಳನ್ನು, ಹಾಪ್ ಕಾಮ್ಸ್ ಮಳಿಗೆಗಳನ್ನು ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ತೆರೆಯಬಹುದಾಗಿದೆ.
ಕೃಷಿ ಪರಿಕರವಾದ ರಸಗೊಬ್ಬರವನ್ನು ರೈತರು ಈಗಾಗಲೇ ನಿಗದಿಪಡಿಸಿರುವ ದಿನಗಳಲ್ಲಿ (ಸೋಮವಾರ, ಬುಧವಾರ ಮತ್ತು ಶುಕ್ರವಾರ) ನಿಗದಿಪಡಿಸಿದ ಸಮಯದಲ್ಲಿ ರಸೀದಿ ಪಡೆದು ಖರೀದಿಸಲು ಹಾಗೂ ಖರೀದಿಸಿದ ಸ್ಥಳದಿಂದ ರೈತರ ಕೃಷಿ ಚಟುವಟಿಕೆಯ ಸ್ಥಳಕ್ಕೆ ಅದೇ ದಿನದಂದು ರಸೀದಿಯೊಂದಿಗೆ ಸಾಗಿಸಲು ಅವಕಾಶ ಕಲ್ಪಿಸಲಾಗಿದೆ.
ಜಿಲ್ಲೆಯ ಸಾರ್ವಜನಿಕರಿಗೆ ಮಳೆಗಾಲಕ್ಕೆ ಮತ್ತು ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ರೈನ್ಕೋಟ್, ಛತ್ರಿ, ಟಾರ್ಪಲ್ಗಳು, ಬಟ್ಟೆ ಬರೆ, ಚಪ್ಪಲಿ, ಗಮ್ ಬೂಟ್ ಮುಂತಾದ ವಸ್ತುಗಳ ಅವಶ್ಯಕತೆ ಇರುವುದರಿಂದ ಇಂತಹ ವಸ್ತುಗಳ ಮಾರಾಟ ಮಳಿಗೆಯನ್ನು ಸೋಮವಾರ, ಬುಧವಾರ ಮತ್ತು ಶುಕ್ರವಾರ ಮಧ್ಯಾಹ್ನ1ಗಂಟೆಯವರೆಗೆ ಮಾತ್ರ ತೆರೆಯಬಹುದಾಗಿದೆ.
ಪಡಿತರ ನ್ಯಾಯಬೆಲೆ ಮಳಿಗೆಗಳು ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು ಮಾತ್ರ ತೆರೆಯಬಹುದಾಗಿದ್ದು,ಸ್ಟಾಂಡ್ ಅಲೋನ್ ಹಾಲಿನ ಬೂತ್ ಗಳು, ದಿನಪತ್ರಿಕೆಗಳ ಸೆಗ್ರಿಗೇಷನ್ ಮತ್ತು ವಿತರಣೆಗೆ ಪ್ರತಿದಿನ ಬೆಳಗ್ಗೆ 6ಗಂಟೆಯಿಂದ ಬೆಳಗ್ಗೆ 10ಗಂಟೆಯವರೆಗೆ ನಡೆಸಬಹುದಾಗಿದೆ.
ಆಸ್ಪತ್ರೆ, ಔಷಧಾಲಯ, ವೈದ್ಯಕೀಯ ಸೇವೆಗಳು, ಪೆಟ್ರೋಲ್ ಬಂಕ್ ಗಳು, ಎಲ್.ಪಿ.ಜಿ ಕೇಂದ್ರಗಳ 24*7 ಕಾರ್ಯಚಟುವಟಿಕೆಗೆ ಅನುಮತಿಸಲಾಗಿದೆ.
ಹೋಟೆಲ್ / ರೆಸ್ಟೋರೆಂಟ್ ಗಳಿಂದ ಆಹಾರವನ್ನು ಟೇಕ್ ಅವೆ (ಪಾರ್ಸಲ್) ರೂಪದಲ್ಲಿ ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು ಬೆಳಗ್ಗೆ 6ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಪಡೆಯಬಹುದಾಗಿದೆ.
ಸ್ಟಾಂಡ್ ಅಲೋನ್, ಸಿಎಲ್-2, ಸಿಎಲ್-8, ಸಿಎಲ್-8ಎ, ಸಿಎಲ್-8ಬಿ, ಸಿಎಲ್-11ಸಿ, ಸಿಎಲ್-16, ಸಿಎಲ್-6ಎ, ಸಿಎಲ್-7, ಸಿಎಲ್-7ಎ, ಸಿಎಲ್-7ಬಿ, ಸಿಎಲ್-9, ಸಿಎಲ್-17, ಸಿಎಲ್-18, ವೈನ್ ಬೋಟಿಕ್ ಸನ್ನದುಗಳಲ್ಲಿ, ಬಾಟಲ್ಡ್ ಬಿಯರ್ ಮತ್ತು ವೈನ್ ಟವರಿನ್ ಸನ್ನದುಗಳಿಂದ ಟೇಕ್ ಅವೆ ರೂಪದಲ್ಲಿ ಸೋಮವಾರ, ಬುಧವಾರ , ಶುಕ್ರವಾರಗಳಂದು ಮಧ್ಯಾಹ್ನ 1ಗಂಟೆಯವರೆಗೆ ಪಡೆಯಬಹುದಾಗಿದೆ.
ಕ್ವಾರಂಟೈನ್ ಕಡ್ಡಾಯ: ಜಿಲ್ಲೆಗೆ ಆಗಮಿಸುವವರನ್ನು ಪ್ರತೀ ಚೆಕ್ ಪೋಸ್ಟ್ ಗಳಲ್ಲಿ ವಿಚಾರಣೆ ನಡೆಸಿ, ಕೊಡಗು ಜಿಲ್ಲೆಯಲ್ಲಿ ವಾಸ್ತವ್ಯ ಹೂಡುವುದಾದಲ್ಲಿ ಎಲ್ಲಿ ತಂಗುತ್ತಾರೆ ಎಂಬ ಬಗ್ಗೆ ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆಯನ್ನು ಪಡೆದುಕೊಳ್ಳುವುದು ಹಾಗೂ ಹೊರ ಜಿಲ್ಲೆಯಿಂದ ಆಗಮಿಸಿದವರು ಕಡ್ಡಾಯವಾಗಿ 14 ದಿನಗಳ ಕಾಲ ಹೋಂ ಕ್ವಾರಂಟೈನ್ ನಲ್ಲಿರುವುದು ಕಡ್ಡಾಯವಾಗಿದೆ.
ರಾಜ್ಯ ಸರ್ಕಾರದ ಮತ್ತು ಅದರ ಸ್ವಾಯತ್ತ ಸಂಸ್ಥೆಗಳು, ನಿಗಮಗಳು ಇತ್ಯಾದಿಗಳ ಅಧಿಕಾರಿ / ಸಿಬ್ಬಂದಿಗಳ ಕರ್ತವ್ಯದ ನಿಮಿತ್ತ ಹಾಗೂ ಕೋವಿಡ್-19 ನಿಯಂತ್ರಣ ಕಾರ್ಯದಲ್ಲಿ ತೊಡಗಿರುವ ಅಧಿಕಾರಿ / ನೌಕರರ ಸಂಚಾರಕ್ಕೆ ಅವಕಾಶ ಇರುತ್ತದೆ. ಆದಾಗ್ಯೂ ಸಹ ಸದರಿಯವರು ಆಯಾ ಕಚೇರಿಯಿಂದ ನೀಡಲ್ಪಟ್ಟ ಅಧಿಕೃತ ಗುರುತಿನ ಚೀಟಿ ಹೊಂದಿರತಕ್ಕದ್ದು ಮತ್ತು ಪರಿಶೀಲನೆ ವೇಳೆ ಹಾಜರುಪಡಿಸತಕ್ಕದ್ದು.
ಜಿಲ್ಲೆಯಾದ್ಯಂತ ಯಾವುದೇ ವ್ಯಕ್ತಿಗಳು ಸಕಾರಣವಿಲ್ಲದೆ ಅನಗತ್ಯ ಸಂಚರಿಸುವುದು / ತಿರುಗಾಡುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ.
ಈ ಆದೇಶದ ದುರುಪಯೋಗ ಅಥವಾ ಉಲ್ಲಂಘನೆಯು ಭಾರತ ದಂಡ ಸಂಹಿತೆ ಕಲಂ 188, ದಿ ಕರ್ನಾಟಕ ಎಪಿಡೆಮಿಕ್ ಡಿಸೀಸಸ್ ಆಕ್ಟ್ 2020, ಡಿಸಾಸ್ಟರ್ ಮ್ಯಾನೇಜ್ಮೆಂಟ್ ಆಕ್ಟ್ 2005ರಡಿ ಮತ್ತು ವಿವಿಧ ಕಾಯ್ದೆಗಳಡಿ ದಂಡನೀಯವಾಗಿದೆ ಎಂದು ಜಿಲ್ಲಾಧಿಕಾರಿ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.