Thursday, August 18, 2022

Latest Posts

ಸೋಮವಾರದಿಂದ ಲಾಕ್‌ಡೌನ್ ಘೋಷಣೆ : ದಿನಸಿ, ಅಗತ್ಯ ವಸ್ತು ಖರೀದಿಗೆ ಮುಗಿಬಿದ್ದ ಜನತೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………

ಹೊಸ ದಿಗಂತ ವರದಿ, ಕೋಲಾರ:

ಜನತಾ ಕರ್ಫ್ಯೂ ಮುಂದುವರೆಯುತ್ತಿದ್ದಂತೆ ಸರ್ಕಾರ ಸೋಮವಾರದಿಂದ ಸಂಪೂರ್ಣ ಲಾಕ್‌ಡೌನ್ ಘೋಷಿಸಿರುವ ಹಿನ್ನಲೆಯಲ್ಲಿ ಜನತೆ  ಭಾನುವಾರ ಅಗತ್ಯವಸ್ತುಗಳ ಖರೀದಿಗೆ ಮುಗಿಬಿದ್ದರು.
ಸೋಮವಾರದಿಂದ ಲಾಕ್‌ಡೌನ್ ಎಂಬ ಆತಂಕದ ನಡುವೆ ಸಾರ್ವಜನಿಕರು ಇಂದು ಮನೆಗೆ ಅಗತ್ಯವಾದ ದಿನಸಿ,ತರಕಾರಿ ಮತ್ತಿತರ ವಸ್ತುಗಳನ್ನು ಖರೀದಿಸಲು ನಗರದ ಅಂಗಡಿಗಳ ಮುಂದೆ ಜಮಾಯಿಸಿದರು.
ನಗರದ ಪ್ರಮುಖ ದಿನಸಿ ಮಾಲ್.ಸೂಪರ್ ಮಾರ್ಕೆಟ್‌ಗಳ ಮುಂದೆ ಜನರ ಉದ್ದೂದ್ದ ಸಾಲುಗಳು ಕಂಡು ಬಂದವು. ಸಾಮಾಜಿಕ ಅಂತರ ಕಾಪಾಡಬೇಕಾದ ಅನಿವಾರ್ಯತೆ ಹಿನ್ನಲೆಯಲ್ಲಿ ಮಾಲ್‌ಗಳಿಗೆ ಕೆಲವೇ ಮಂದಿಯನ್ನು ಒಳಗೆ ಕಳುಹಿಸಿ ಅವರು ಖರೀದಿಸಿ ಹೊರ ಬಂದನಂತರ ಇನ್ನಷ್ಟು ಮಂದಿಯನ್ನು ಒಳ ಕಳುಹಿಸುವ ಪ್ರಕ್ರಿಯೆ ನಡೆದಿತ್ತು.
ತರಕಾರಿ ಮಾರುಕಟ್ಟೆಯನ್ನು ನಗರದ ಜೂನಿಯರ್ ಕಾಲೇಜು ಮೈದಾನಕ್ಕೆ ಸ್ಥಳಾಂತರಿಸಲಾಗಿದ್ದು, ಅಲ್ಲಿಯೂ ಜನಜಂಗುಳಿ ಕಂಡು ಬಂತು. ಜನ ಒಂದೇ ಬಾರಿಗೆ ದಿನಸಿ, ಅಗತ್ಯ ವಸ್ತುಗಳ ಖರೀದಿಗೆ ರಸ್ತೆಗಿಳಿದಿದ್ದರಿಂದಾಗಿ ನಗರದ ದೊಡ್ಡಪೇಟೆ, ಎಂ.ಜಿ.ರಸ್ತೆ, ಕಾಳಮ್ಮ ಗುಡಿ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಪರಿಸ್ಥಿತಿ ನಿರ್ಮಾಣವಾಯಿತು.

ಭಾನುವಾರದ ಬಾಡೂಟಕ್ಕೆ ಸಾಲು
ಸೋಮವಾರದಿಂದ ಲಾಕ್‌ಡೌನ್ ಘೋಷಣೆ ಹಿನ್ನಲೆ ಅದರ ಹಿಂದಿನ ದಿನವಾದ ಭಾನುವಾರ  ಮಾಂಸ ಖರೀದಿಗೆ ಜನ ಮುಗಿಬಿದ್ದಿದ್ದು ಕಂಡು ಬಂತು. ನಗರದ ಎಲ್ಲಾ ಮಾಂಸದ ಅಂಗಡಿಗಳ ಮುಂದೆ ಉದ್ದೂದ್ದ ಸಾಲುಗಳು ಕಂಡು ಬಂದಿದ್ದು, ಸಾಮಾಜಿಕ ಅಂತರ ಕಾಪಾಡಿ ಖರೀದಿಸುತ್ತಿದ್ದುದು ವಿಶೇಷವಾಗಿತ್ತು.
ನಗರದ ಮಾಂಸ ಮಾರುಕಟ್ಟೆಯಲ್ಲಿ ಹೆಚ್ಚಿನ ಜನಸಂದಣಿ ಕಂಡು ಬಂದ ಹಿನ್ನಲೆಯಲ್ಲಿ ನಗರಸಭೆ ಅಧಿಕಾರಿಗಳು, ಪೊಲೀಸರು ಅಲ್ಲಿಗೆ ತೆರಳಿ ಜನತೆಗೆ ಬುದ್ದಿವಾದ ಹೇಳಿ ಹೊರ ಕಳುಹಿಸುತ್ತಿದ್ದುದು ಕಂಡು ಬಂತು.
ನಗರಾದ್ಯಂತ ಬಂದೋಬಸ್ತ್
ಸೋಮವಾರದ ಲಾಕ್‌ಡೌನ್‌ಗೆ ಸಿದ್ದತೆ ನಡೆಸುತ್ತಿರುವರು ಎಂಬಂತೆ ಇಂದೇ ಪೊಲೀಸರು ರಸ್ತೆಗಿಳಿದಿದ್ದರು. ನಗರದ ಪ್ರಮುಖ ರಸ್ತೆಗಳಲ್ಲಿ ಲಾಠಿ ಹಿಡಿದ ಪೊಲೀಸರು ಅನಗತ್ಯವಾಗಿ ಓಡಾಡುತ್ತಿದ್ದ ವಾಹನಗಳನ್ನು ನಿಲ್ಲಿಸಿ ವಾಪಸ್ಸು ಕಳುಹಿಸಿದರು.
ಈ ನಡುವೆ ಹೊರ ಜಿಲ್ಲೆಗಳಿಂದ ಬರುತ್ತಿದ್ದ ವಾಹನಗಳ ತಪಾಸಣೆಯನ್ನು ಮುಂದುವರೆಸಲಾಗಿದ್ದು, ನಾಳೆ ಮತ್ತಷ್ಟು ಬಿಗಿ ಬಂದೋಬಸ್ತ್ ಮಾಡುವ ಸಾಧ್ಯತೆ ಕಂಡು ಬಂತು.
ಮದುವೆ ಫಿಕ್ಸ್ಬಟ್ಟೆ ಸಿಗುತ್ತಿಲ್ಲ
ಈ ನಡುವೆ ಈಗಾಗಲೇ ಮದುವೆ ಫಿಕ್ಸ್ ಆಗಿದ್ದು, ವರ,ಮಧುಮಗಳಿಗೆ, ಪೋಷಕರಿಗೆ ಬಟ್ಟೆ ಖರೀದಿಗೆ ಅವಕಾಶ ಸಿಗದೇ ಅನೇಕರು ಪರಿತಪಿಸುತ್ತಿದ್ದುದು ಕಂಡು ಬಂತು.
ಕೆಲವು ಪರಿಚಯಸ್ಥ ಬಟ್ಟೆ ಅಂಗಡಿಗಳವರು ಗ್ರಾಹಕರನ್ನು ಒಳ ಕರೆದುಕೊಂಡು ಅಂಗಡಿ ಮುಚ್ಚಿ ವಹಿವಾಟು ನಡೆಸುತ್ತಿದ್ದುದು ಸಹಾ ಕಂಡು ಬಂತು. ಇದೇ ಪರಿಸ್ಥಿತಿ ಚಿನ್ನದ ಅಂಗಡಿಗಳದ್ದು ಆಗಿದ್ದು, ಮದುವೆಗೆ ಅಗತ್ಯವಾದ ಆಭರಣ ಖರೀದಿಗೂ ಕರ್ಫ್ಯೂ,ಲಾಕ್ ಡೌನ್ ಅಡ್ಡಿಯಾಗಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!