Monday, August 15, 2022

Latest Posts

‌ಕಲ್ಲಹಳ್ಳಿ ವಿರುದ್ದ ಸುಮೋಟೋ ದೂರು ದಾಖಲಿಸಲು ಹೆಚ್.ಡಿ.ಕುಮಾರಸ್ವಾಮಿ ಆಗ್ರಹ

ಹೊಸ ದಿಗಂತ ವರದಿ, ಕೋಲಾರ:

ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ವಿರುದ್ದ ಸುಮೋಟೋ ದೂರು ದಾಖಲಿಸಬೇಕು. ಆತನ ವಿರುದ್ದ ಸ್ವಯಂಪ್ರೇರಿತ ದೂರು ದಾಖಲಿಸಲು ಕಾನೂನಿನಲ್ಲಿ ಅವಕಾಶವಿದೆ, ಸರ್ಕಾರ ಇದನ್ನು ಲಘುವಾಗಿ ಪರಿಗಣಿಸದೇ ಮೊಕದ್ದಮೆ ದಾಖಲಿಸಿ ತನಿಖೆ ನಡೆಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದರು.
ನಗರಕ್ಕೆ ಖಾಸಗಿ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಪ್ರಕರಣವನ್ನು ಲಘುವಾಗಿ ಪರಿಗಣಿಸದೇ ಮೊಕದ್ದಮೆ ದಾಖಲಿಸಬೇಕು ಎಂದ ಅವರು,  ದಿನೇಶ್ ದೂರು ಕೊಟ್ಟಿರುವುದು ಮತ್ತು ಹಿಂಪಡೆಯಲು ನಿರ್ಧರಿಸುವ ಬಗ್ಗೆ ನನಗೆ ಗೊತ್ತಿಲ್ಲ ಎಂದು ಸ್ವಷ್ಟಪಡಿಸಿದರು.
ರಾಜಕಾರಣಿಗಳು ಮತ್ತು ಸರ್ಕಾರದ ಗೌರವ ಉಳಿಸಿಕೊಳ್ಳಬೇಕಾಗಿದೆ, ಕೇಸ್ ವಾಪಸ್ ಪಡೆಯಲು ಕಾರಣವಾದ ಘಟನೆಗಳ ಬಗ್ಗೆ ಮೊದಲು ಸರ್ಕಾರ ತನಿಖೆ ನಡೆಸಿ ಬೆಳಕು ಚೆಲ್ಲಬೇಕಾಗಿದೆ, ಇದರ ಹಿಂದೆ ಯಾರ ಪ್ರೇರಣೆ ಇದೆ ಎಂಬುದು ಹೊರಬರಬೇಕು ಎಂದರು.
ಸಂತ್ರಸ್ತೆ ಹಾಗೂ ಅವರ ಪರ ಯಾರು ಈವರೆಗೂ ಬಂದಿಲ್ಲದ ಬಗ್ಗೆ ಸರ್ಕಾರ ತನಿಖೆ ನಡೆಸಬೇಕು ಎಂದ ಅವರು, ಮತ್ತೊಂದು ಪ್ರಶ್ನೆಗೆ ಉತ್ತರ ನೀಡಿಮ ವಿರೋಧಿಗಳ ಕೈವಾಡದ ಬಗ್ಗೆ ಆರೋಪಿಸಿರುವ ಸಚಿವ ಯೋಗೇಶ್ವರ ಈ ವಿಷಯದಲ್ಲಿ ಅನುಭವಸ್ಥರು ಅವರನ್ನೇ ಕೇಳಿ ಮಾಹಿತಿ ಪಡೆಯಿರಿ ಎಂದು ಸಲಹೆ ನೀಡಿದರು.
ಈ ಪ್ರಕರನದಲ್ಲಿ ನಾನೇಕೆ ಸಾಕ್ಷಿ ಕೊಡಲಿ, ಮಾಧ್ಯಮಗಳು ಕೋರ್ಟ್ ಅಲ್ಲ ಎಂದು ತಿಳಿಸಿದ ಅವರು ಈ ಸಂಬಂಧ ಸದನದಲ್ಲಿ ಚರ್ಚೆ ಅಗತ್ಯವಿದ್ದರೆ ಸಿದ್ದವಾಗಿದ್ದೇನೆ ಎಂದು ಘೋಷಿಸಿದರು.

ಹಣದ ವ್ಯವಹಾರ ನಡೆದಿರಬಹುದು

ಸಿಡಿ ಬಿಡುಗಡೆ ಹಣದ ವ್ಯವಹಾರ ಇಲ್ಲದೆ ಆಗುವುದಿಲ್ಲ. ೫ ಕೋಟಿ ರೂ ಡೀಲ್ ನಡೆದಿದೆ ಎಂಬ ಮಾತುಗಳಿವೆ, ಸಚಿವರ ರಾಜೀನಾಮೆ ಪಡೆಯುವ ಉದ್ದೇಶದಲ್ಲಿ ಸಫಲರಾಗಿದ್ದಾರೆ, ಸಚಿವರಿಂದ ನೊಂದಿದ್ದರೆ ಇಲ್ಲಿವರೆಗೂ ಸಂತ್ರಸ್ತೆ ಬಂದು ಯಾಕೆ ಹೇಳಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಪ್ರಶ್ನಿಸಿದರು.
ಸಿಡಿ ಪ್ರಕರಣದಲ್ಲಿ ಹಲವಾರು ಚಟುವಟಿಕೆ ನಡೆದಿರುವುದು ಸರ್ಕಾರಕ್ಕೂ ಗೊತ್ತಿದೆ, ಸಂತ್ರಸ್ತೆ ಪರ ಹೋರಾಟ ಎಂದವರು ಇದೀಗ ದೂರು ವಾಪಸ್ ಪಡೆಯುತ್ತಿದ್ದಾರೆ ಎಂದರೆ ಅದಕ್ಕೂ ನನಗೂ ಸಂಬಂಧವಿಲ್ಲ ಎಂದು ಸ್ವಷ್ಟಪಡಿಸಿದರು.
ಸಿಡಿ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸುವ ಮೂಲಕ ರಾಜ್ಯದಲ್ಲಿ ನಡೆಯುತ್ತಿರುವ ಅಸಹ್ಯಕರ ಬೆಳವಣಿಗೆ ಹಿನ್ನಲೆಯಲ್ಲಿ ಸರ್ಕಾರವು ಜನರ ವಿಶ್ವಾಸ ಉಳಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕಾಗಿದೆ ಎಂದು ಆಗ್ರಹಿಸಿದರು.
ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ದಿನೇಶ್ ಕಲ್ಲಹಳ್ಳಿ ಹೆಸರು ನಾನು ಹೇಳಿಲ್ಲ,  ಮೂರ್ನಾಲ್ಕು ತಿಂಗಳಿನಿಂದ ನಡೆದ ಘಟನೆಗಳ ಹಿನ್ನಲೆಯಲ್ಲಿ ಹೇಳಿದ್ದೇನೆ ಮತ್ತು ನನ್ನಲ್ಲಿ ನಿಖರವಾದ ಮಾಹಿತಿ ಇಲ್ಲ, ಕೆಲವರು ಹೇಳಿದ್ದನ್ನು ಉಲ್ಲೇಖಿಸಿದ್ದೇನೆ ಎಂದು ತಿಳಿಸಿದರು.
ಹಣದ ವ್ಯವಹಾರ ಇಲ್ಲದೇ ಸಿಡಿ ಬಿಡುಗಡೆ ಮಾಡಿದ್ದಾರೆ ಎಂದರೆ ನಾನು ನಂಬುವುದಿಲ್ಲ, ಈ ವಿಚಾರದಲ್ಲಿ ದಿನೇಶ್ ಗೆ ಮಾನಸಿಕ ಹಿಂಸೆ ಏಕೆ, ದಿನೇಶ್ ಪಾತ್ರ ನನಗೆ ಗೊತ್ತಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ಕೆ.ಶ್ರೀನಿವಾಸಗೌಡ, ವಿಧಾನಪರಿಷತ್ ಸದಸ್ಯ ಗೋವಿಂದರಾಜು, ಮಾಜಿ ಎಂಎಲ್‌ಸಿ ಚೌಡರೆಡ್ಡಿ, ಜೆಡಿಎಸ್ ಉಪಾಧ್ಯಕ್ಷ ಮೂರಾಂಡಹಳ್ಳಿ ಗೋಪಾಲ್ ಮತ್ತಿತರರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss