ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೆಡ್ಜರ್‌ನಲ್ಲಿ ಸಹಿ ಮಾಡುವ ಮೂಲಕ ಅಥವಾ ಬಯೋಮೆಟ್ರಿಕ್ ಸಾಧನದ ಮೇಲೆ ಬೆರಳು ಇಡುವ ಮೂಲಕ ಹಾಜರಾತಿ ಬಗ್ಗೆ ಮಾಹಿತಿ ನೀಡುತ್ತಿದ್ದ ವ್ಯವಸ್ಥೆಗೆ ಶೀಘ್ರದಲ್ಲೇ ಅಂತ್ಯವಾಗಲಿದ್ದು, ಹೊಸದೊಂದು ಸಿಸ್ಟಮ್ ಜಾರಿಗೆ ಬರಲಿದೆ.
ಏಕೆಂದರೆ ಕೃತಕ ಬುದ್ಧಿಮತ್ತೆ ಮತ್ತು ಭೌಗೋಳಿಕ ಮಾಹಿತಿ ವ್ಯವಸ್ಥೆಯಿಂದ ಸಕ್ರಿಯಗೊಳಿಸಲಾದ ಕರ್ನಾಟಕ ಅಡ್ವಾನ್ಸ್ಡ್ ಅಟೆಂಡೆನ್ಸ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಅನ್ನು ತನ್ನ ಎಲ್ಲಾ ಇಲಾಖೆಗಳಲ್ಲಿ ಪರಿಚಯಿಸಲು ರಾಜ್ಯ ಸರ್ಕಾರ ಸಜ್ಜಾಗಿದೆ.
ನೌಕರರು ತಮ್ಮ ಕಚೇರಿ ಆವರಣದಲ್ಲಿ ತಮ್ಮ ಮೊಬೈಲ್ ಫೋನ್‌ನಿಂದ ಸೆಲ್ಫಿ ಕ್ಲಿಕ್ ಮಾಡುವ ಮೂಲಕ ತಮ್ಮ ಹಾಜರಾತಿಯನ್ನು ಖಚಿತಪಡಿಸಬೇಕು, ಈ ವೇಳೆ ಹಾಜರಾತಿಯನ್ನು ನೈಜ ಸಮಯದಲ್ಲಿ ಸೆರೆಹಿಡಿಯಲಾಗುತ್ತದೆ. ಈ AI-ಚಾಲಿತ ಹಾಜರಾತಿ ವ್ಯವಸ್ಥೆಯನ್ನು ದೇಶದಲ್ಲಿ ಇದೇ ಮೊದಲ ಬಾರಿಗೆ ಕರ್ನಾಟಕದ ಸರ್ಕಾರಿ ಕಚೇರಿಯಲ್ಲಿ ಪರಿಚಯಿಸಲಾಗುತ್ತಿದೆ.
ಐದು ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಮಾಡುವ 70 ಕ್ಕೂ ಹೆಚ್ಚು ಇಲಾಖೆಗಳನ್ನು ರಾಜ್ಯ ಸರ್ಕಾರ ಹೊಂದಿದೆ. ಹೆಚ್ಚಿನ ಇಲಾಖೆಗಳು ಈಗ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯನ್ನು ಹೊಂದಿವೆ, ಅಲ್ಲಿ ನೌಕರರು ಹಾಜರಾತಿಯನ್ನು ಖಚಿತ ಪಡಿಸಲು ತಮ್ಮ ID ಕಾರ್ಡ್ ಸ್ವೈಪ್ ಮಾಡುತ್ತಾರೆ ಅಥವಾ ಬಯೋಮೆಟ್ರಿಕ್ ಸಾಧನದ ಮೇಲೆ ಬೆರಳನ್ನು ಇಡುತ್ತಾರೆ. ಶಿಕ್ಷಕರು ಕೆಲಸ ಮಾಡುತ್ತಿರುವ ಕೆಲವು ಇಲಾಖೆಗಳು (ಸರ್ಕಾರಿ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಎರಡೂ), ಲೆಡ್ಜರ್‌ನಲ್ಲಿ ಸಹಿ ಮಾಡುವ ಸಾಂಪ್ರದಾಯಿಕ ವಿಧಾನವನ್ನು ಇನ್ನೂ ಪಾಲಿಸಲಾಗುತ್ತಿದೆ.
ಈ ಸಿಸ್ಟಮ್ ಫಾಲೋ ಮಾಡುವುದರಿಂದ ನೌಕರರ ಸಂಪೂರ್ಣ ಡೇಟಾ ರಾಜ್ಯ ಸರ್ಕಾರದಲ್ಲಿ ಇರುತ್ತದೆ ಮತ್ತು ಯಾವುದೇ ಖಾಸಗಿ ಸಂಸ್ಥೆಯ ಬಳಿ ಇರುವುದಿಲ್ಲ. ಈ ವ್ಯವಸ್ಥೆಯು ಅನೇಕ ವೈಶಿಷ್ಟ್ಯಗಳಿಂದ ಕೂಡಿದೆ, ಒಬ್ಬ ಉದ್ಯೋಗಿ ತಡವಾಗಿ ಬಂದರೆ ಅಥವಾ ಕಚೇರಿಯಿಂದ ಬೇಗನೆ ಹೊರಟುಹೋದರೆ ಇಲಾಖೆಯ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಲಿದೆ ಎನ್ನಲಾಗಿದೆ.