ಹೊಸದಿಗಂತ ಡಿಜಿಟಲ್ ಡೆಸ್ಕ್:
14 ಗಂಟೆಗಳ ಸುದೀರ್ಘ ಚರ್ಚೆಯ ಬಳಿಕ ವಕ್ಫ್ ತಿದ್ದುಪಡಿ ಮಸೂದೆಯನ್ನು ಬುಧವಾರ ಮಧ್ಯರಾತ್ರಿ 1:43 ಗಂಟೆಗೆ ಲೋಕಸಭೆ ಅಂಗೀಕರಿಸಿದೆ.
ವಿವಾದಿತ ಮಸೂದೆ ಕುರಿತು ಸಂಸತ್‌ನಲ್ಲಿ 12 ಗಂಟೆಗಳ ಕಾಲ ಚರ್ಚೆ ನಡೆಯಿತು. ನಂತರ 2 ತಾಸುಗಳ ಕಾಲ ಮತದಾನ ನಡೆಯಿತು. ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಮಸೂದೆಗೆ ಸದನ ಅಸ್ತು ಎಂದಿದೆ. ಮಸೂದೆ ಪರ 288 ಹಾಗೂ ಮಸೂದೆ ವಿರುದ್ಧ 232 ಮತ ಬಿದ್ದವು.
ಮಸೂದೆಯನ್ನು ಮತಕ್ಕೆ ಹಾಕುವ ಮುನ್ನ ದಿನವಿಡೀ ಚರ್ಚೆ ನಡೆಯಿತು. ಮಸೂದೆ ವಿಚಾರವಾಗಿ ಆಡಳಿತ ಮತ್ತು ವಿಪಕ್ಷಗಳ ನಡುವೆ ವಾಕ್ಸಮರ ಏರ್ಪಟ್ಟಿತ್ತು. ಮುಸ್ಲಿಮರ ಹಕ್ಕು ಕಸಿಯುವ ಯತ್ನ ಎಂದು ವಿಪಕ್ಷಗಳು ಮಸೂದೆಗೆ ವಿರೋಧ ವ್ಯಕ್ತಪಡಿಸಿದವು. ಮಸೂದೆ ಯಾವುದೇ ಧರ್ಮದ ವಿರೋಧಿಯಲ್ಲ ಎಂದು ಆಡಳಿತ ಪಕ್ಷವು ಸಮರ್ಥಿಸಿಕೊಂಡಿತು.
ಲೋಕಸಭೆಯಲ್ಲಿ ಅಂಗೀಕಾರಗೊಂಡ ಮಸೂದೆ ಗುರುವಾರ ರಾಜ್ಯಸಭೆಯಲ್ಲೂ ಮಂಡನೆಯಾಗಲಿದೆ. ಇಲ್ಲೂ ಕೂಡ ಸುದೀರ್ಘ ಚರ್ಚೆ ಬಳಿಕ ಮತದಾನ ನಡೆಯಲಿದೆ. ರಾಜ್ಯಸಭೆಯಲ್ಲೂ ಮಸೂದೆ ಅಂಗೀಕಾರಗೊಂಡರೆ ರಾಷ್ಟ್ರಪತಿಗಳ ಸಹಿಗೆ ರವಾನೆಯಾಗಲಿದೆ. ರಾಷ್ಟ್ರಪತಿಗಳು ಸಹಿ ಮಾಡಿದಾಗ ಮಸೂದೆ ಕಾನೂನಾಗಲಿದೆ.