ಹೊಸದಿಗಂತ ಡಿಜಿಟಲ್ ಡೆಸ್ಕ್:
ಲಂಡನ್‌ನ ಲೂಟನ್ ವಿಮಾನ ನಿಲ್ದಾಣದಲ್ಲಿ ಬುಧವಾರ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಲೂಟನ್ ವಿಮಾನ ನಿಲ್ದಾಣದ ಪಾರ್ಕಿಂಗ್ ಪ್ರದೇಶದಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯಿಂದಾಗಿ ಪಾರ್ಕಿಂಗ್‌ನ ಮೇಲ್ಛಾವಣಿ ಭಾಗಶಃ ಕುಸಿದಿದೆ.
ಬೆಂಕಿಯ ಜ್ವಾಲೆ ಎಲ್ಲೆಡೆ ಆವರಿಸಿದ್ದು, ವಿಮಾನ ಹಾರಾಟವನ್ನು ಸ್ಥಗಿತಗೊಳಿಸಿರುವುದಾಗಿ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಬೆಂಕಿ ಹೊತ್ತಿಕೊಂಡ ಪಾರ್ಕಿಂಗ್ ಕಡೆಗೆ ಹೋಗದಂತೆ ವಿಮಾನದ ಪ್ರಯಾಣಿಕರಲ್ಲಿ ಮನವಿ ಮಾಡಲಾಗಿದೆ.
ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಬುಧವಾರದಿಂದ ಗುರುವಾರ ಮಧ್ಯಾಹ್ನ 12ರವರೆಗೆ ವಿಮಾನ ಹಾರಾಟ ನಿಲ್ಲಿಸಲು ನಿರ್ಧರಿಸಲಾಗಿದೆ. ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಮತ್ತು ವಿಮಾನ ನಿಲ್ದಾಣದಲ್ಲಿನ ಇತರ ಕಟ್ಟಡಗಳು ಮತ್ತು ವಾಹನಗಳಿಗೆ ಬೆಂಕಿ ಹರಡುವುದನ್ನು ತಡೆಯಲು ಶ್ರಮಿಸುತ್ತಿದ್ದಾರೆ. ಕಟ್ಟಡದ ಅರ್ಧ ಭಾಗ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಸ್ಥಳೀಯ ನಿವಾಸಿಗಳಿಗೆ ಕಿಟಕಿ ಮತ್ತು ಬಾಗಿಲುಗಳನ್ನು ಮುಚ್ಚುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.