2024ರಲ್ಲಿ ಸೂರ್ಯ ಪಥ ಬದಲಿಸುವಾಗ ಸ್ವಸ್ಥಾನಕ್ಕೆ ಮರಳುವ ಭಗವಾನ್ ಶ್ರೀರಾಮ

ಹೊಸದಿಗಂತ ಡಿಜಿಟಲ್ ಡೆಸ್ಕ್

ಶತಮಾನಗಳಿಂದ ಜನ್ಮಭೂಮಿ ರಾಮಮಂದಿರದಲ್ಲಿ ರಾಮಲಲ್ಲಾನನ್ನು ಕಾಣುವುದಕ್ಕೆ ಕೋಟ್ಯಂತರ ರಾಮ ಭಕ್ತರು ಕಾಯುತ್ತಿದ್ದಾರೆ. ಸೂರ್ಯ ಪಥ ಬದಲಿಸುವಾಗ ಭಗವಾನ್ ಶ್ರೀರಾಮ ಸ್ವಸ್ಥಾನದಲ್ಲಿ ಕುಳಿತುಕೊಳ್ಳುತ್ತಾನೆ. 2024ರ ಮಕರ ಸಂಕ್ರಾತಿಯಂದು ಶ್ರೀರಾಮನ ಪ್ರತಿಷ್ಠೆಗೆ ಮುಹೂರ್ತ ನಿಗದಿಯಾಗಿದೆ.

ಮಂಗಳವಾರ ಅಯೋಧ್ಯೆಯ ಸರ್ಕ್ಯೂಟ್ ಹೌಸ್‌ನಲ್ಲಿ ನಡೆದ ಶ್ರೀರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಈವರೆಗೆ 2023ರ ಡಿಸೆಂಬರ್ ಅಂತ್ಯಕ್ಕೆ ಭವ್ಯ ಮಂದಿರದಲ್ಲಿ ಶ್ರೀರಾಮನ ಪ್ರತಿಷ್ಠೆ ನಡೆಸಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಕೆಲವೇ ದಿನಗಳಲ್ಲಿ ಉತ್ತರಾಯಣ ಪ್ರಾರಂಭವಾಗುವುದರಿಂದ 2024ರ ಮಕರಸಂಕ್ರಮಣ ಪ್ರಶಸ್ತ್ಯ ಮುಹೂರ್ತವೆಂದು ಸಭೆಯಲ್ಲಿ ಅಂಗೀಕರಿಸಲಾಗಿದೆ. ಮಂದಿರ ನಿರ್ಮಾಣದ ಬಳಿಕ ನಡೆಯುವ ಪ್ರತಿಷ್ಠಾ ವಿಧಿಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.

ರಾಮಾನಂದಿ ಸಂಪ್ರದಾಯದಂತೆ ಪೂಜಾ ವಿಧಿ:
ಆದಿ ಕಾಲದಿಂದ ರಾಮ ದೇವರ ಪೂಜಾ ಕೈಂಕರ್ಯಗಳು ರಾಮಾನಂದಿ ಸಂಪ್ರಾಯದಂತೆ ನಡೆಯುತ್ತಿದೆ. ಆದ್ದರಿಂದ ರಾಮಾನಂದಿ ಸಂಪ್ರದಾಯದ ಪೀಠಾಧಿಪತಿಗಳನ್ನು ಮುಂದಿಟ್ಟುಕೊಂಡು, ಅವರ ಸಲಹೆ-ಸೂಚನೆಗಳಂತೆ ಮುನ್ನಡೆಯಬೇಕು. ಪೂಜಾ ವಿಧಿಗಳಿಗೆ ಇಲ್ಲಿನ ವಿದ್ವಾಂಸರಾಗಿರುವ ಅರ್ಚಕರನ್ನು ನೇಮಕಗೊಳಿಸಬೇಕು. ಅವರಿಗೆ ಬೇಕಾದಂತಹ ಪ್ರಶಿಕ್ಷಣ ನಡೆಯಲು ವ್ಯವಸ್ಥೆ ಮಾಡಿಕೊಳ್ಳಬೇಕೆಂದು ಈ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.

ಹೆಚ್ಚಲಿದೆ ಮಂದಿರ ನಿರ್ಮಾಣ ವೆಚ್ಚ:
ಆರಂಭದಲ್ಲಿ ಮಂದಿರ ನಿರ್ಮಾಣಕ್ಕೆ ಅಂದಾಜು 400 ಕೋಟಿ ರೂ. ಆವಶ್ಯಕತೆಯಿದೆ ಎಂದು ಅಂದಾಜುಪಟ್ಟಿ ಸಿದ್ಧಪಡಿಸಲಾಗಿತ್ತು. ಸಾವಿರಾರು ವರ್ಷಗಳ ಕಾಲ ಉಳಿಯುವ ಭವ್ಯ ಮಂದಿರ ನಿರ್ಮಿಸಬೇಕಿದೆ. ಇದಕ್ಕಾಗಿ ಜನ್ಮಭೂಮಿ ಸಂಕೀರ್ಣದಲ್ಲಿನ ಭೂಮಿಯ ಧಾರಣಾ ಸಾಮರ್ಥ್ಯ ವೃದ್ಧಿಸುವುದಕ್ಕೆ ಹಾಗೂ ಇನ್ನಿತರ ಸುರಕ್ಷತಾ ಕ್ರಮಗಳಿಗಾಗಿ ಮಂದಿರ ನಿರ್ಮಾಣದ ಖರ್ಚು ಅಧಿಕವಾಗುತ್ತಿದೆ. ಈ ನಿಟ್ಟಿನಲ್ಲಿ ಟ್ರಸ್ಟ್ ಇದಕ್ಕೆ ಸಭೆಯಲ್ಲಿ ಒಪ್ಪಿಗೆ ಸೂಚಿಸಿದೆ.

ವಸ್ತು ಸಂಗ್ರಹಾಲಯ ನಿರ್ಮಾಣ:
ಜನ್ಮಭೂಮಿ ಸಂಕೀರ್ಣದಲ್ಲಿ ಉತ್ಖನನದ ವೇಳೆ ಸಿಕ್ಕಿರುವ ಪುರಾತನ ಅವಶೇಷಗಳನ್ನು ಒಳಗೊಂಡು ವಸ್ತು ಸಂಗ್ರಹಾಲಯ ನಿರ್ಮಾಣ ಮಾಡಬೇಕಿದೆ. ಈ ವಸ್ತು ಸಂಗ್ರಹಾಲಯವನ್ನು ಈಚೆಗೆ ಉದ್ಘಾಟನೆಯಾದ ಭಾರತದ ಪ್ರಧಾನಿಗಳ ಜೀವನ ಚರಿತ್ರೆ ಮತ್ತು ಪ್ರಮುಖ ಘಟ್ಟಗಳನ್ನೊಳಗೊಂಡ ವಸ್ತುಸಂಗ್ರಹಾಲಯದ ಮಾದರಿಯಲ್ಲಿ ನಿರ್ಮಾಣ ಮಾಡುವುದಕ್ಕೆ ಪ್ರಧಾನ ಮಂತ್ರಿಯವರ ಆಪ್ತ ಸಲಹೆಗಾರ ಹಾಗೂ ಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಅವರು ಸಲಹೆಗಳನ್ನು ನೀಡಿದರು.

ಪ್ರಸಕ್ತ ಟ್ರಸ್ಟ್ ಅಧೀನದಲ್ಲಿರುವ 70 ಎಕರೆ ಪ್ರದೇಶದಲ್ಲಿ ಯಾವುದೇ ಯಾತ್ರಿ ನಿವಾಸಗಳು ಇರುವುದಿಲ್ಲ. ಈ ಜಾಗದಲ್ಲಿ ಮಂದಿರಕ್ಕೆ ಸಂಬಂಧಪಟ್ಟಿರುವ ವ್ಯವಸ್ಥೆ ಮಾತ್ರ ಇರುತ್ತದೆ. ರಾಮ ಮಂದಿರಕ್ಕೆ ಪ್ರವೇಶ ಪಡೆಯುವ ಬೃಹತ್ ಗೋಪುರ ನಿರ್ಮಾಣ ಹಾಗೂ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು.

ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭವಾದ ನಂತರ ಇದೇ ಮೊದಲ ಬಾರಿಗೆ ಟ್ರಸ್ಟ್‌ನ ಬಹುತೇಕ ಎಲ್ಲ ಟ್ರಸ್ಟಿಗಳು ರಾಮ ಜನ್ಮಭೂಮಿ ಸಂಕೀರ್ಣಕ್ಕೆ ಭೇಟಿ ನೀಡಿದರು. ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ಖಜಾಂಚಿ ಗೋವಿಂದ್ ದೇವ್‌ಗಿರಿ, ಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ, ಟ್ರಸ್ಟ್ ವಿಶ್ವಸ್ಥರಾದ ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಸ್ವಾಮಿ ವಾಸುದೇವಾನಂದ ಸರಸ್ವತಿ, ಸ್ವಾಮಿ ಪರಮಾನಂದ ಮಹಾರಾಜ್, ಡಾ. ಅನಿಲ್ ಮಿಶ್ರಾ, ವಿಮಲೇಂದ್ರ ಮೋಹನ್ ಮಿಶ್ರಾ, ಕಾಮೇಶ್ವರ ಚೌಪಾಲ್, ನಿರ್ಮೋಹಿ ಅಖಾಡದ ಮಹಂತ್ ದಿನೇಂದ್ರ ದಾಸ್ ಹಾಗೂ ಪದನಿಮಿತ್ತ ವಿಶ್ವಸ್ಥರಾದ ಪ್ರಧಾನ ಗೃಹ ಕಾರ್ಯದರ್ಶಿ ಅವನೀಶ್ ಅವಸ್ತಿ ಮತ್ತು ಅಯೋಧ್ಯೆ ಜಿಲ್ಲಾ ಮ್ಯಾಜಿಸ್ಟ್ರೇಟ್ ನಿತೀಶ್ ಕುಮಾರ್ ಸಭೆಯಲ್ಲಿ ಭಾಗವಹಿಸಿದರು. ಟ್ರಸ್ಟ್‌ನ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್ ಹಾಗೂ ವಿಶ್ವಸ್ಥ ಪರಾಶರನ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾದರು. ಮಂದಿರ ನಿರ್ಮಾಣ ಉಸ್ತುವಾರಿ ಗೋಪಾಲ್ ಎಂ. ಅವರು ಸಭೆಯಲ್ಲಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!