ಹೆದ್ದಾರಿಯಲ್ಲಿ ಲಾರಿ ಪಲ್ಟಿ: ವಾಹನ ಸಂಚಾರಕ್ಕೆ ತೊಡಕು

ಹೊಸದಿಗಂತ ವರದಿ, ಅಂಕೋಲಾ:

ರಾಷ್ಟ್ರೀಯ ಹೆದ್ದಾರಿ 63 ಅಂಕೋಲಾದಿಂದ ಯಲ್ಲಾಪುರ ನಡುವಿನ ಮಾರ್ಗದಲ್ಲಿ ಇತ್ತೀಚಿನ ದಿನಗಳಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದ್ದು ಬುಧವಾರ ಬೆಳಗ್ಗೆ ಅಂಕೋಲಾ ತಾಲೂಕಿನ ರಾಮನಗುಳಿ ಬಳಿ ಭಾರೀ ಲಾರಿಯೊಂದು ಪಲ್ಟಿಯಾಗಿ ಹೆದ್ದಾರಿ ಯಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆಯಾದ ಘಟನೆ ನಡೆದಿದೆ.
ಗೋವಾದಿಂದ ಹುಬ್ಬಳ್ಳಿ ಕಡೆ ಕಚ್ಚಾ ಸರಕು ತುಂಬಿ ಸಾಗುತ್ತಿದ್ದ ಲಾರಿ ರಾಮನಗುಳಿಬಳಿ ಚಾಲಕನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿ ಮಧ್ಯದಲ್ಲಿ ಪಲ್ಟಿಯಾಗಿದ್ದು ಚಾಲಕ ಮತ್ತು ಸಹಾಯಕ ಚಿಕ್ಕ ಪುಟ್ಟ ಗಾಯಗಳಿಗೊಳಗಾಗಿ ಅಪಾಯದಿಂದ ಪಾರಾಗಿದ್ದಾರೆ.
ಲಾರಿ ಪಲ್ಟಿಯಾದ ಕಾರಣ ರಾಷ್ಟ್ರೀಯ ಹೆದ್ದಾರಿ ಮೂಲಕ ಹೋಗಿ ಬರುವ ವಾಹನಗಳ ಓಡಾಟಕ್ಕೆ ತೊಂದರೆಯುಂಟಾಗಿದ್ದು ಲಘು ವಾಹನಗಳು ಮಾತ್ರ ಹಾದು ಹೋಗಲು ಸ್ಥಳಾವಕಾಶ ಇದ್ದ ಕಾರಣ ಸಾರಿಗೆ ಸಂಸ್ಥೆಯ ಬಸ್ಸುಗಳು ಸೇರಿದಂತೆ ನೂರಾರು ವಾಹನಗಳು ಕಿಲೋಮೀಟರ್ ಗಟ್ಟಲೆ ರಸ್ತೆಯಲ್ಲಿ ಸಾಲುಗಟ್ಟಿ ನಿಲ್ಲುವಂತಾಯಿತು.
ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಪದೇ ಪದೇ ಸಂಭವಿಸುವ ಅಪಘಾತಗಳು ವಾಹನ ಚಾಲಕರಿಗೆ ಮತ್ತು ಪ್ರಯಾಣಿಕರಿಗೆ ಕಿರಿಕಿರಿಯಾಗಿ ಪರಿಣಮಿಸಿದ್ದು, ಅಂಕೋಲಾ ಯಲ್ಲಾಪುರ ಮಧ್ಯದ ಹೆದ್ದಾರಿಯಲ್ಲಿ ಆಗಾಗ ಈ ಪರಿಸ್ಥಿತಿ ಎದುರಾಗುತ್ತಿರುವುದು ಪ್ರಯಾಣಿಕರ ಬೇಸರಕ್ಕೆ ಕಾರಣವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!