ವಿಧಾನಸಭೆ ಚುನಾವಣೆ: ರಾಜ್ಯದಲ್ಲಿಂದು ಬಿಜೆಪಿ ಅಗ್ರ ನಾಯಕರಿಂದ ಅಬ್ಬರದ ಪ್ರಚಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕರ್ನಾಟಕ ವಿಧಾನಸಭಾ ಚುನಾವಣೆ ಕಾವು ರಂಗೇರುತ್ತಿದೆ. ರಾಝ್ಯ ನಾಯಕರ ಜೊತೆ ಸಿನಿಮಾ ಸೆಲೆಬ್ರಟಿಗಳು ಸೇರಿದಂತೆ ಕೇಂದ್ರ ನಾಯಕರೂ ಚುನಾವಣಾ ಪ್ರಚಾರಕ್ಕಿಳಿದಿದ್ದಾರೆ. ಈ ಚುನಾವಣೆಯಲ್ಲಿ ಶತಾಯಗತಾಯ ಅಧಿಕಾರ ಹಿಡಿಯಲು ರಾಜಕೀಯ ಪಕ್ಷಗಳ ನಡುವೆ ಹಣಾಹಣಿ ಶುರುವಾಗಿದೆ. ಈ ನಿಟ್ಟಿನಲ್ಲಿ ಇಂದು ರಾಜ್ಯಾದ್ಯಾಂತ ಬಿಜೆಪಿ ಅಗ್ರ ನಾಯಕರು ಪ್ರಚಾರ ನಡೆಸಲಿದ್ದಾರೆ.

ಈಗಾಗಲೇ ಬಿಜೆಪಿಯಿಂದ ಅಮಿತ್​ ಶಾ, ಜೆ.ಪಿ.ನಡ್ಡಾ, ಸ್ಮೃತಿ ಇರಾನಿ, ದೇವೇಂದ್ರ ಫಡ್ನವೀಸ್, ಅರುಣ್ ಸಿಂಗ್, ಯೋಗಿ ಆದಿತ್ಯನಾಥ್ ಸೇರಿದಂತೆ‌ ಹಲವರು ಪ್ರಚಾರದಲ್ಲಿ ಭಾಗಿಯಾಗಿದ್ದರು ಇದೀಗ ಪ್ರಧಾನಿ ನರೇಂದ್ರ ಮೋದಿಯವರೂ ಚುನಾವಣಾ ಅಖಾಡಕ್ಕಿಳಿದು ಇಂದು-ನಾಳೆ ಅಬ್ಬರದ ಪ್ರಚಾರ ನಡೆಸಲಿದ್ದಾರೆ.

ಇಂದಿನಿಂದ ಮತಕಾಳಗದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ, ರಾಜನಾಥ್ ಸಿಂಗ್, ಸ್ಮೃತಿ ಇರಾನಿ ಅಖಾಡಕ್ಕಿಳಿಯಲಿದ್ದಾರೆ.

ಇಂದು ನಾಳೆ ಮೋದಿ ಮೇನಿಯಾ

ಚುನಾವಣಾ ರಾಜಕೀಯವನ್ನು ಮತ್ತಷ್ಟು ಚುರುಕುಗೊಳಿಸಲು ಮೋದಿ ಗ್ರಾಂಟ್‌ ಎಂಟ್ರಿ ಕೊಡಲಿದ್ದಾರೆ. ಇಂದು ಬೆಳಗ್ಗೆ 11ಕ್ಕೆ ಬೀದರ್ ಜಿಲ್ಲೆಯ ಹುಮ್ನಾಬಾದ್‌ನಲ್ಲಿ  ಮೋದಿ ಸಮಾವೇಶದಲ್ಲಿ ಭಾಗಿಯಾಗಲಿದ್ದು, ಮಧ್ಯಾಹ್ನ 12 ಗಂಟೆಗೆ ವಿಜಯಪುರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತಯಾಚಿಸಲಿದ್ದಾರೆ. ನಂತರ ಮಧ್ಯಾಹ್ನ 3.30ಕ್ಕೆ ಬೆಳಗಾವಿಯ ಕುಡಚಿ ಕ್ಷೇತ್ರದಲ್ಲಿ ರಾಜೀವ್ ಪರ ಮೋದಿ ಕ್ಯಾಂಪೇನ್ ಮಾಡಲಿದ್ದಾರೆ. ಬಳಿಕ ಅಲ್ಲಿಂದ ಹೊರಟು ಸಂಜೆ 6ಕ್ಕೆ ಬೆಳಗಾವಿಯಿಂದ ಬೆಂಗಳೂರಿಗೆ ಬರಲಿರುವ ಮೋದಿ, ನೈಸ್ ರೋಡ್​ನಿಂದ ಸುಮ್ಮನಹಳ್ಳಿ ಜಂಕ್ಷನ್​ವರೆಗೆ ಬೃಹತ್ ರೋಡ್ ಶೋ ನಡೆಸಲಿದ್ದು, ರಾತ್ರಿ ರಾಜಭವನದಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಮರುದಿನ ಭಾನುವಾರ ಬೆಂಗಳೂರಿನಿಂದ ಕೋಲಾರಕ್ಕೆ ತೆರಳಿ ಅಲ್ಲಿ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಮಧ್ಯಾಹ್ನ 2ಗಂಟೆಗೆ  ಚನ್ನಪಟ್ಟಣದಲ್ಲಿ ಯೋಗೇಶ್ವರ್ ಪರ ಪ್ರಚಾರ ನಡೆಸಲಿದ್ದಾರೆ. ಮಧ್ಯಾಹ್ನ 3.30ಕ್ಕೆ ಬೇಲೂರಿನಲ್ಲಿ ಸಮಾವೇಶ ಮುಗಿಸಿ ಸಂಜೆ 5.30ಕ್ಕೆ ಮೈಸೂರಿಗೆ ಆಗಮಿಸಲಿರುವ ಮೋದಿ ವಿದ್ಯಾಪೀಠ ಸರ್ಕಲ್​ನಿಂದ ಬನ್ನಿಮಂಟಪದ ವರೆಗೆ ರೋಡ್ ಶೋ ನಡೆಸಲಿದ್ದಾರೆ. ಅಲ್ಲಿಂದ ನೇರವಾಗಿ ದೆಹಲಿಗೆ ತೆರಳಲಿದ್ದಾರೆ.

ಮಡಿಕೇರಿ, ಕರಾವಳಿಯಲ್ಲಿ ಅಮಿತ್‌ ಶಾ ಪ್ರಚಾರ

ಬೆಳಗ್ಗೆ 11 ಗಂಟೆಗೆ ಮಡಿಕೇರಿಯಲ್ಲಿ ಅಮಿತ್ ಶಾ ರೋಡ್​ ಶೋ ನಡೆಯಲಿದೆ. ಮಧ್ಯಾಹ್ನ 2.30ಕ್ಕೆ ಉಡುಪಿ ಕ್ಷೇತ್ರದ ಕಟಪಾಡಿಯಲ್ಲಿ ಪ್ರಚಾರ ಸಭೆ ನಡೆಯಲಿದೆ. ಸಂಜೆ 4ಕ್ಕೆ ಬೈಂದೂರಿನಲ್ಲಿ ರೋಡ್​ ಶೋ, ಪ್ರಚಾರ ಸಭೆ. ಹಾಗೆಯೇ ಸಂಜೆ 5.30ಕ್ಕೆ ಮಂಗಳೂರಿನಲ್ಲಿ ರೋಡ್​ ಶೋ ನಡೆಸಿ ನಂತರ ಕ್ಲಾಕ್​ಟವರ್​ನಿಂದ ಗೋವಿಂದ ಪೈ ವೃತ್ತದವರೆಗೆ ಪ್ರಚಾರ ಮಾಡಲಿದ್ದಾರೆ. ಸಂಜೆ 7 ಗಂಟೆಗೆ ಮಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಪ್ರಮುಖ ಸಭೆ ನಡೆಸಿ ರಾತ್ರಿ 8.50ಕ್ಕೆ ಮಂಗಳೂರಿನಿಂದ ದೆಹಲಿಗೆ ತೆರಳಲಿದ್ದಾರೆ.

ಅರಮನೆ ನಗರಿಗೆ ರಕ್ಷಣಾ ಸಚಿವ

ಇಂದು ಬೆಳಗ್ಗೆ 11.15ಕ್ಕೆ ಮಂಡಕಳ್ಳಿ ಏರ್​ಪೋರ್ಟ್​​ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬರಲಿದ್ದು, 12.30ರವರೆಗೆ ಪ್ರಚಾರ ಸಭೆಯಲ್ಲಿ ಭಾಗಿಯಾಗಿ ಬಿಜೆಪಿ ಅಭ್ಯರ್ಥಿ ಶ್ರೀವತ್ಸ ಪರ ಮತಯಾಚಿಸಲಿದ್ದಾರೆ. ಮಧ್ಯಾಹ್ನ 12.40ಕ್ಕೆ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡುತ್ತಾರೆ. ನಂತರ ಹೆಲಿಕಾಪ್ಟರ್​​ನಲ್ಲಿ ಶ್ರೀರಂಗಪಟ್ಟಣಕ್ಕೆ ಪ್ರಯಾಣಿಸಲಿದ್ದಾರೆ.

ಕೋಟೆನಾಡಿನಲ್ಲಿ ಸ್ಮೃತಿ ಇರಾನಿ ಅಬ್ಬರ

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪಟ್ಟಣದ ನೆಹರು ಮೈದಾನದಲ್ಲಿ ನಡೆಯುವ ಬಹಿರಂಗ ಸಭೆಯಲ್ಲಿ ಬಿಜೆಪಿ ಅಬ್ಯರ್ಥಿ ಪೂರ್ಣಿಮಾ ಪರ ಸ್ಮೃತಿ ಇರಾನಿ ಮತಯಾಚನೆ ಮಾಡಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!