ಮಸೀದಿಗಳಿಂದ ತೆರವುಗೊಳಿಸಲಾದ ಲೌಡ್‌ ಸ್ಪೀಕರ್‌ ಆಸ್ಪತ್ರೆ- ಶಾಲೆಗಳಿಗೆ ದಾನ: ಯುಪಿ ಸಿಎಂ ಯೋಗಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಉತ್ತರ ಪ್ರದೇಶದ ಮಸೀದಿಗಳಿಂದ ತೆರವುಗೊಳಿಸಲಾದ ಧ್ವನಿವರ್ಧಕಗಳನ್ನು ಶಾಲೆಗಳು ಮತ್ತು ಆಸ್ಪತ್ರೆಗಳಿಗೆ ದಾನ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಅಜಾನ್‌ ಕೂಗುತ್ತಿದ್ದ ಸಾವಿರಾರು ಅನಧಿಕೃತ ಲೌಡ್‌ ಸ್ಪೀಕರ್‌ ಗಳನ್ನು ತೆರವುಗೊಳಿಸಲಾಗಿದೆ ಹಾಗೂ ಧ್ವನಿವರ್ಧಕಗಳ ಶಬ್ದವನ್ನು ಸರ್ಕಾರ ಅನುಮತಿ ನೀಡಿರುವಷ್ಟು ಮಾತ್ರವೇ ಕಟ್ಟುನಿಟ್ಟಾಗಿ ಮಿತಿಗೊಳಿಸಲಾಗಿದೆ. ಶಾಲೆಗಳಿಗೆ ನೀಡಲಾಗುವ ಈ ಧ್ವನಿವರ್ಧಕಗಳನ್ನು ಸ್ಥಳೀಯರಿಗೆ ಸಾಮಾಜಿಕ ವಿಚಾರಗಳ ಕುರಿತಾಗಿ ಅರಿವು ಮೂಡಿಸಲು, ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಪ್ರೋತ್ಸಾಹಿಸಲು, ಸರ್ಕಾರದ ವಿವಿಧ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ತಿಳಿಸಲು ಹಾಗೂ ಶಾಲೆಗಳ ಸಾಂಸ್ಕೃತಿಕ ಚಟುವಟಿಕೆಗಳಂತಹ ಶೈಕ್ಷಣಿಕ ಉದ್ದೇಶಗಳಿಗಾಗಿ ಬಳಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಆರ್‌ಎಸ್‌ಎಸ್ ವಾರಪತ್ರಿಕೆಗಳಾದ ‘ಪಾಂಚಜನ್ಯ’ ಮತ್ತು ‘ಆರ್ಗನೈಸರ್’ ಆಯೋಜಿಸಿದ್ದ ಮಾಧ್ಯಮ ಸಂವಾದವನ್ನು ಉದ್ದೇಶಿಸಿ ಮಾತನಾಡಿದ ಆದಿತ್ಯನಾಥ್, ಇತ್ತೀಚಿನ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಮತ್ತು ನಂತರ ಬಿಜೆಪಿ ಆಡಳಿತದ ರಾಜ್ಯದಲ್ಲಿ ಯಾವುದೇ ಗಲಭೆಗಳು ನಡೆದಿಲ್ಲ.ಯುಪಿಯಲ್ಲಿ ರಾಮನವಮಿ ಹಾಗೂ ಹನುಮ ಜಯಂತಿಯನ್ನು ಸಂಭ್ರಮದಿಂದ ಶಾಂತಿಯುತವಾಗಿ ಆಚರಿಸಲಾಗಿದೆ. ಆದರೆ ಹಲವು ರಾಜ್ಯಗಳಲ್ಲಿ ಚುನಾವಣೆ ಮುಗಿದ ನಂತರ ಗಲಭೆಗಳು ನಡೆದಿವೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ತಿರುಗೇಟು ನೀಡಿದರು.
ಈಗ ರಸ್ತೆಗಳಲ್ಲಿ ಈದ್ ನಮಾಜ್ ಮಾಡದೇ ಇರುವುದನ್ನು ನೀವು ಮೊದಲ ಬಾರಿಗೆ ನೋಡಿರುತ್ತೀರಿ. ಮಸೀದಿಗಳಲ್ಲಿನ ಧ್ವನಿವರ್ಧಕಗಳ ಬಳಕೆ ಮೇಲೆ ಕಟ್ಟುನಿಟ್ಟಾದ ಕ್ರಮ ಕೈಗೊಂಡಿದ್ದೇವೆ. ವಶಕ್ಕೆ ಪಡೆದ ಧ್ವನಿವರ್ಧಕಗಳನ್ನು ಶಾಲೆಗಳು ಮತ್ತು ಆಸ್ಪತ್ರೆಗಳಿಗೆ ದೇಣಿಗೆ ನೀಡಲಾಗಿದೆ ಎಂದು ಆದಿತ್ಯನಾಥ್ ಹೇಳಿದರು.
ರಾಜ್ಯದಲ್ಲಿ ಬಿಡಾಡಿ ದನಗಳ ಸಮಸ್ಯೆ ಕುರಿತು ಮಾತನಾಡಿದ ಅವರು, ಇದನ್ನು ಎದುರಿಸಲು ಸರ್ಕಾರ ಕೈಗೊಂಡಿರುವ ಹಲವು ಕ್ರಮಗಳ ಬಗ್ಗೆ ಹೇಳಿದರು. ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಎಲ್ಲಾ ಅಕ್ರಮ ಕಸಾಯಿಖಾನೆಗಳನ್ನು ಬಂದ್ ಮಾಡಿತ್ತು. ಹಿಂದೆ ಬಿಡಾಡಿ ದನಗಳು ರಸ್ತೆ, ಗದ್ದೆಗಳಲ್ಲಿ ಓಡಾಡುತ್ತಿದ್ದರೆ ಮೊದಲು ಅಕ್ರಮ ಕಸಾಯಿಖಾನೆಗಳಿಗೆ ಕಳ್ಳಸಾಗಣೆ ಮಾಡಲಾಗುತ್ತಿತ್ತು. ಗೋವುಗಳ ರಕ್ಷಣೆಗೆಂದೇ ನಾವು 5,600 ಬಿಡಾಡಿ ಗೋಶಾಲೆಗಳನ್ನು ಸ್ಥಾಪಿಸಿದ್ದೇವೆ, ”ಎಂದು ಅವರು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!