ಅಂದು ಆಕೆ ಮಗಳನ್ನು ಕಾಲೇಜಿಗೆ ಬಿಡೋದಕ್ಕೆ ಗಡಿಬಿಡಿಯಲ್ಲೇ ಹೊರಟಿದ್ಲು. ಮಗಳು ಕಾಲೇಜಿಗೆ ಲೇಟಾಯ್ತು ಎಂದು ಕೂಗಾಡ್ತಾ ಇದ್ಲು. ಇದರಿಂದ ಅಮ್ಮನ ಡ್ರೈವಿಂಗ್ಗೆ ಡಿಸ್ಟರ್ಬ್ ಆಗ್ತಾ ಇತ್ತು. ಮಗಳಿಗೆ ಡ್ರೈವಿಂಗ್ ಮಾಡ್ತಿದ್ದೇನೆ ಮಾತಾಡ್ಸಬೇಡ ಎಂದು ಹೇಳೋದಕ್ಕೆ ಮಗಳ ಮುಖ ನೋಡಿದಳು. ಕಣ್ಣೆದುರೇ ಅಪಘಾತ ಸಂಭವಿಸಿತ್ತು.
ಆದರೆ ಇವರ ಕಾರ್ದಲ್ಲ, ಎದುರು ಬರುತ್ತಿದ್ದ ಎರಡು ಕಾರ್ಗಳು ಮುಖಾಮುಖಿ ಡಿಕ್ಕಿಯಾದವು. ಒಂದು ಕಾರ್ನಿಂದ ಬೆಂಕಿ ಬರೋದಕ್ಕೆ ಶುರುವಾಯ್ತು. ಸುತ್ತ ನಿಂತಿದ್ದವರೆಲ್ಲ ಹೆದರಿ ದೂರ ಹೋದರು. ಆದರೆ ತಾಯಿ- ಮಗಳು ಕಾರ್ ಒಳಗೆ ಬಗ್ಗಿ ನೋಡಿದರು. ಅಪ್ಪ, ಅಮ್ಮ ಮತ್ತು ಮಗ ಅದರೊಳಗಿದ್ದ. ಮೂವರನ್ನು ಎಳೆದು ಹೊರತಂದರು. ತಕ್ಷಣ ಆಸ್ಪತ್ರೆಗೆ ಸೇರಿಸಿದರು. ದೇವರ ದಯೆ, ಮೂವರು ಬದುಕುಳಿದರು. ಅಪ್ಪ ಅಮ್ಮ ಕೋಮಾ ಸ್ಥಿತಿಯಲ್ಲಿದ್ದರು. ಮಗ ಮಾತ್ರ ಮಾತನಾಡುವಷ್ಟು ಶಕ್ತಿ ಹೊಂದಿದ್ದ. ದಿನೇ ದಿನೆ ಎಲ್ಲರೂ ಹುಷಾರಾಗುತ್ತಾ ಬಂದರು.
ಅಮ್ಮ ಮಗಳು ದಿನವೂ ಇವರನ್ನು ನೋಡೋದಕ್ಕೆ ಆಸ್ಪತ್ರೆಗೆ ಬಂದರು. ಹುಷಾರಾದ ಮೇಲೂ ಇನ್ನೇನು ಬರೋದು ಅಂತ ಅಮ್ಮ ಬರೋದನ್ನು ನಿಲ್ಲಿಸಿದರು. ಆದರೆ ಮಗಳು ಬರೋದನ್ನು ನಿಲ್ಲಿಸಲಿಲ್ಲ. ಪ್ರತಿದಿನ ಅವನಿಗಾಗಿ ಏನಾದರೂ ಒಂದು ತಿನ್ನೋದಕ್ಕೆ ಮಾಡಿಕೊಂಡು ಆಸ್ಪತ್ರೆಗೆ ಹೋಗುತ್ತಿದ್ದಳು. ಸ್ವಲ್ಪ ದಿನದಲ್ಲೇ ಗೊತ್ತಾಯ್ತು ಅವರಿಬ್ಬರಿಗೂ ಪ್ರೀತಿಯಾಗಿದೆ ಅಂತ. ಇದು ತಿಳಿದ ಮೇಲೆ ಅವರಮ್ಮ ಏನೂ ರಿಯಾಕ್ಟ್ ಮಾಡದೇ ಪ್ರೀತಿ ಗಟ್ಟಿ ಇದ್ದರೆ ಸಮಯದ ಯಾವ ಅಲೆ ರಭಸಕ್ಕೂ ಕಿತ್ತು ಹೋಗೋದಿಲ್ಲ ಎಂದು ಅವರ ಪಾಡಿಗೆ ಅವರನ್ನು ಬಿಟ್ಟುಬಿಟ್ಟರು!
ಇದೊಂದು ಪುಟ್ಟ ಸನ್ನಿವೇಶ. ನಿಮ್ಮ ಜೀವನದಲ್ಲೂ ಇಂಥ ಸನ್ನಿವೇಶ ಬರಬಾರದು ಎಂದೇನಿಲ್ಲ. ಯಾರಿಗೆ ಯಾವಾಗ ಯಾರ ಮೇಲೆ ಯಾಕೆ ಪ್ರೀತಿಯಾಗುತ್ತದೆ ಎನ್ನೋದನ್ನು ಈಗಲೂ ಯಾರಿಗೂ ಕಂಡುಹಿಡಿಯೋದಕ್ಕೆ ಆಗಿಲ್ಲ. ಮಕ್ಕಳು ಪ್ರೀತಿ ಮಾಡುತ್ತಿದ್ದಾರೆ ಎಂದು ಗೊತ್ತಾದಾಗ ದೊಡ್ಡ ನಿರ್ಧಾರಗಳನ್ನು ಕೈಗೊಳ್ಳಬೇಡಿ. ನಿಧಾನವಾಗಿ ಆಲೋಚಿಸಿ ಮುಂದುವರಿಯಿರಿ.