ಹೊಸ ದಿಗಂತ ವರದಿ, ಮಂಗಳೂರು:
ಮಂಗಳೂರು ಸಿಸಿಬಿ ಪೊಲೀಸರ ವಶದಲ್ಲಿದ್ದ ಐಷಾರಾಮಿ ಜಾಗ್ವರ್ ಕಾರು ಮಾರಾಟಕ್ಕೆ ಸಂಬಂಧಿಸಿ ನಾರ್ಕೊಟಿಕ್ ಆಂಡ್ ಎಕನಾಮಿಕ್ಸ್ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ರಾಮಕೃಷ್ಣ ಮತ್ತು ಪ್ರಸ್ತುತ ಚಿಕ್ಕಮಗಳೂರು ಡಿಸಿಆರ್ಬಿ ಪಿಎಎಸ್ಐ ಆಗಿರುವ ಕಬ್ಬಾಳ್ರಾಜ್ ಅವರನ್ನು ಅಮಾನತುಗೊಳಿಸಲಾಗಿದೆ. ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರು ಅಮಾನತು ಆದೇಶ ಹೊರಡಿಸಿದ್ದಾರೆ.
ಮಂಗಳೂರು ಸಿಸಿಬಿ ಪೊಲೀಸರು ಕಾರು ಮಾರಾಟ ಮಾಡಿದ ಆರೋಪದ ತನಿಖೆಯನ್ನು ಸಿಐಡಿ ಕೈಗೆತ್ತಿಕೊಂಡಿದ್ದು, ಕಳಂಕಿತ ನಾಲ್ವರಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಇಬ್ಬರೂ ಆರೋಪಿತರನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ. ಪ್ರಕರಣದಲ್ಲಿ ಇನ್ನಷ್ಟು ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದು, ಅವರೂ ಕೂಡ ಅಮಾನತುಗೊಳ್ಳುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.