ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಮಾ. 3ರಿಂದ ಶಾಸಕರು ಇಲ್ಲದ ಕ್ಷೇತ್ರಗಳಲ್ಲಿ ನಾವು ಹೋರಾಟ ಮಾಡ್ತೀವಿ. ಮೊದಲು ಚಿಕ್ಕಬಳ್ಳಾಪುರ ಮೂಲಕ ಆರಂಭಿಸುತ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಇಂದು ಬೆಂಗಳೂರು ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರ ವ್ಯಾಪ್ತಿಯ ಕಾಂಗ್ರೆಸ್ ಮುಖಂಡರ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ವರ್ಷ ಸಂಘಟನೆಯ ವರ್ಷ. ಹೋರಾಟದ ವರ್ಷ ಅಂತ ಘೋಷಣೆ ಮಾಡಿದ್ದೇವೆ. ಮಾ. 1ರಂದು ದೇವಮೂಲೆಯಾದ ಕುರುಡುಮಲೆ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ನಮ್ಮ ಹೋರಾಟಕ್ಕೆ ಚಾಲನೆ ನೀಡುತ್ತೇನೆ. ಇದಾದ ಬಳಿಕ ದರ್ಗಾಗೆ ಭೇಟಿ ಕೊಟ್ಟು ಪೂಜೆ ಸಲ್ಲಿಸುತ್ತೇನೆ. ಅಲ್ಲಿಂದ ವಾಪಸ್ ಬಂದು ಮಾ. 3ರಂದು ಕಾಂಗ್ರೆಸ್ ಪಕ್ಷದ ಕೇಂದ್ರ ಕಚೇರಿ ಮುಂಭಾಗ ಬೆಳಗ್ಗೆ 8:30ಕ್ಕೆ ಪಾದಯಾತ್ರೆಗೆ ಚಾಲನೆ ನೀಡಲಿದ್ದೇನೆ. ಇಲ್ಲಿಂದ ಹೋರಾಟ ಆರಂಭ ಮಾಡುತ್ತೇವೆ. ದೇವನಹಳ್ಳಿಯಿಂದ ಹೋರಾಟ ಶುರುವಾಗಲಿದ್ದು, ಸಂಜೆ 3.30ಕ್ಕೆ ಚಿಕ್ಕಬಳ್ಳಾಪುರದಲ್ಲಿ ಕಾರ್ಯಕ್ರಮ ಮಾಡ್ತೀವಿ ಎಂದರು.
ಪ್ರತಿಯೊಂದು ಕ್ಷೇತ್ರದಲ್ಲೂ ಜನರ ಮಧ್ಯೆ ಕಾರ್ಯಕ್ರಮ ಮಾಡಿ,ಪೆಟ್ರೋಲ್, ಡೀಸೆಲ್ ಸೇರಿದಂತೆ ಇನ್ನಿತರ ಜನ ವಿರೋಧಿ ನಿಲುವುಗಳ ಬಗ್ಗೆ ಹೋರಾಟ ನಡೆಸಲಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನಮ್ಮ ಧ್ವನಿ ಮುಟ್ಟಿಸುವ ಕೆಲಸ ಮಾಡ್ತೀವಿ ಎಂದು ತಿಳಿಸಿದರು.
ಕಾಂಗ್ರೆಸ್ ಸಂಸ್ಥಾಪನಾ ದಿನದಂದು ಕೈಗೊಂಡ ನಿಲುವಿಗೆ ನಾವು ಬದ್ಧರಾಗಿ ಕಾರ್ಯನಿರ್ವಹಿಸುತ್ತೇವೆ. ಪಕ್ಷ ಸಂಘಟನೆ ಹಾಗೂ ಹೋರಾಟಕ್ಕೆ ಹೆಚ್ಚಿನ ಒತ್ತು ಕೊಡುತ್ತೇವೆ. ಎಲ್ಲಾ ಪಕ್ಷದ ನಾಯಕರು ಸೇರಿ ನಮ್ಮ ಹೋರಾಟವನ್ನು ಮುಂದುವರೆಸಿಕೊಂಡು ಹೋಗುವ ಕಾರ್ಯ ಮಾಡುತ್ತೇವೆ ಎಂದರು.
. ಪಾದಯಾತ್ರೆಯ ಮೂಲಕ ಸಾಗಿ ಜನಜಾಗೃತಿ ಮೂಡಿಸುತ್ತೇವೆ. 2 ಅಥವಾ 3 ಸ್ಥಳಗಳಲ್ಲಿ ಪಾದಯಾತ್ರೆ ನಡೆಸಿ ಒಂದು ಕಡೆ ನಿಂತು ಕಾರ್ಯಕ್ರಮ ನೀಡುತ್ತೇವೆ. ಯಾರೂ ವಾಹನದಲ್ಲಿ ತೆರಳುವುದಿಲ್ಲ. ನಾನು ಸೇರಿದಂತೆ ಎಲ್ಲರೂ ಪಾದಯಾತ್ರೆ ಮೂಲಕವೇ ಸಾಗುತ್ತೇವೆ ಎಂದು ವಿವರಿಸಿದರು.