ವಿದ್ವಜ್ಜನ ಪಂಕ್ತಿ ಭಾಜನರಾಗಿದ್ದ ಮದ್ದಲೆಗಾರ ಬರ್ಗುಳ ಗೋಪಾಲಕೃಷ್ಣ ಕುರುಪ್‌ ಇನ್ನಿಲ್ಲ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಯಕ್ಷಗಾನ ಕ್ಷೇತ್ರದ ವಿದ್ವಜ್ಜನ ಪಂಕ್ತಿ ಭಾಜನರಾಗಿದ್ದ ಮದ್ದಲೆಗಾರ ಬರ್ಗುಳ ಗೋಪಾಲಕೃಷ್ಣ ಕುರುಪ್‌ ನಿಧನರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು.

ಚೆಂಡೆ-ಮದ್ದಲೆ ನುಡಿತಗಳಲ್ಲಿ ಶಾಸ್ತ್ರಜ್ಞಾನವನ್ನು ಪಡೆದುಕೊಂಡಿದ್ದ ಕುರುಪರು ಅದನ್ನು ಅಧಿಕೃತ ಪಠ್ಯರೂಪದಲ್ಲಿ ಪ್ರಕಟಿಸಿದ ಮೊದಲಿಗರು. ಅವರಿಗೆ ಭಾಗವತಿಕೆಯ ಬಗ್ಗೆಯೂ ಆಳವಾದ ಜ್ಞಾನವಿತ್ತು.  ಯಕ್ಷಗಾನದ ಹಿಮ್ಮೇಳ ವಿಭಾಗಕ್ಕೊಂದು ಲಕ್ಷಣಗ್ರಂಥವನ್ನು ರಚಿಸುವ ನಿಟ್ಟಿನ ಪ್ರಯತ್ನವಾಗಿ ‘ತೆಂಕುತಿಟ್ಟು-ಪ್ರಾಥಮಿಕ ಯಕ್ಷಗಾನ ಪಾಠಗಳು’ ಕೃತಿಯನ್ನು ಕುರುಪರು ಬರೆದು ಪ್ರಕಟಿಸಿದ್ದರು. ತೆಂಕುತಿಟ್ಟು ಯಕ್ಷಗಾನದ ಮದ್ದಲೆವಾದನ ಕ್ರಮ, ತೆಂಕುತಿಟ್ಟು ಯಕ್ಷಗಾನದ ಚೆಂಡೆವಾದನ ಕ್ರಮ ಪ್ರಮುಖ ಕೃತಿಗಳಾಗಿವೆ.

ಧರ್ಮಸ್ಥಳ, ಕರ್ನಾಟಕ, ಬಳ್ಳಂಬೆಟ್ಟು, ಇರಾ, ಕರ್ನಾಟಕ-ಕಲಾವಿಹಾರ ಮೇಳಗಳಲ್ಲಿ ತಿರುಗಾಟ ನಡೆಸಿರುವ ಕುರುಪ್‌ ಅವರು ಸುತ್ತಮುತ್ತಲ ಊರುಗಳಲ್ಲಿ ಯಕ್ಷಗಾನ ಹಿಮ್ಮೇಳ ತರಗತಿಗಳನ್ನು ನಡೆಸಿ ಯಕ್ಷಗಾನ ಶಿಕ್ಷಕರಾಗಿ ಹೆಸರು ಪಡೆದಿದ್ದರು. ಧರ್ಮಸ್ಥಳ ಯಕ್ಷಗಾನ ಕೇಂದ್ರದಲ್ಲಿ ಮೂರು ವರ್ಷ ಹಿಮ್ಮೇಳದ ಗುರುಗಳಾಗಿ ಸೇವೆ ಸಲ್ಲಿಸಿದ್ದರು.

ಕೇರಳಮೂಲದವರಾದ ಕುರುಪ್‌ ಅವರ ಹಿರಿಯರು ದಕ್ಷಿಣಕನ್ನಡ ಜಿಲ್ಲೆಯ ಶಿಶಿಲದಲ್ಲಿ ನೆಲೆಸಿದವರು. ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಬರ್ಗುಳದಲ್ಲಿ ಬಹುಕಾಲ ವಾಸವಿದ್ದ ಅವರು ಇತ್ತೀಚೆಗಿನ ದಿನಗಳಲ್ಲಿ ಕೇರಳದ ನಿಲೇಶ್ವರದ ಮಕ್ಕಳ ಮನೆಯಲ್ಲಿ ನೆಲೆಸಿದ್ದರು.ಕುರುಪರಿಗೆ ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್‌, ಕಾರ್ಯದರ್ಶಿ ಮುರಲಿ ಕಡೆಕಾರ್‌ ಸಂತಾಪ ವ್ಯಕ್ತಪಡಿಸಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!