ವಾಯುಸೇನೆಗೆ ಮೇಕ್‌ ಇನ್‌ ಇಂಡಿಯಾ ʼಪ್ರಚಂಡʼ ಬಲ: ಇಲ್ಲಿದೆ ಲಘು ಯುದ್ಧ ಹೆಲಿಕಾಪ್ಟರ್‌ ಗಳ ವೈಶಿಷ್ಟ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ದೇಶದ ರಕ್ಷಣಾ ಕ್ಷೇತ್ರದಲ್ಲಿ ‘ಆತ್ಮನಿರ್ಭರ’ದತ್ತ ಸಾಗುವ ನಿಟ್ಟಿನಲ್ಲಿ ಭಾರತೀಯ ಸೇನೆಯು ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ತನ್ನ ಯುದ್ಧ ಸಾಮರ್ಥ್ಯಕ್ಕೆ ದೊಡ್ಡ ಉತ್ತೇಜನ ನೀಡುವಂತೆ, ಭಾರತೀಯ ವಾಯುಪಡೆಯು ಸ್ವದೇಶಿಯಾಗಿ ಅಭಿವೃದ್ಧಿಪಡಿಸಿದ ಮೊದಲ ಬ್ಯಾಚ್‌ನ ಕ್ಷಿಪಣಿಗಳು ಮತ್ತು ಇತರ ಶಸ್ತ್ರಾಸ್ತ್ರಗಳನ್ನು ಉಡಾಯಿಸುವ ಸಾಮರ್ಥ್ಯವನ್ನು ಹೊಂದಿರುವ ʼಪ್ರಚಂಡʼ ಲಘು ಯುದ್ಧ ಹೆಲಿಕಾಪ್ಟರ್‌ಗಳನ್ನು ಸೋಮವಾರ ಸೇನೆಗೆ ಸೇರ್ಪಡೆಗೊಳಿಸಲಿದೆ.
ಈ ಯುದ್ಧ ಹೆಲಿಕಾಪ್ಟರ್‌ ಗಳು ಬರೋಬ್ಬರಿ 3,500 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿವೆ. ʼರಕ್ಷಣಾ ಉತ್ಪಾದನೆಯಲ್ಲಿ ಭಾರತದ ಸಾಮರ್ಥ್ಯವನ್ನು ಪ್ರತಿಬಿಂಬಿಸುವ ಮಹತ್ವದ ಸಂದರ್ಭ ಇದಾಗಿದೆʼ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬಣ್ಣಿಸಿದ್ದಾರೆ.

 

ಹೆಮ್ಮೆಯ ಸಂಸ್ಥೆ ಹಿಂದೂಸ್ತಾನ್ ಏರೋನಾಟಿಕ್ಸ್ ನಿರ್ಮಾಣ:
ಪ್ರಚಂಡ ಲಘು ಯುದ್ಧ ಹೆಲಿಕಾಪ್ಟರ್ (LCH) ಗಳನ್ನು ಬೆಂಗಳೂರಿನ ಏರೋಸ್ಪೇಸ್ ದೈತ್ಯ ಸಂಸ್ಥೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ನಿಂದ ಅಭಿವೃದ್ಧಿಪಡಿಸಲಾಗಿದೆ. ಇದನ್ನು ಪ್ರಮುಖವಾಗಿ ದೇಶದ ಎತ್ತರದ ಪ್ರದೇಶಗಳಲ್ಲಿ ನಿಯೋಜಿಸಲು ವಿನ್ಯಾಸಗೊಳಿಸಲಾಗಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಅವರ ಸಮ್ಮುಖದಲ್ಲಿ ಸೋಮವಾರ ಜೋಧ್‌ಪುರದಲ್ಲಿ ನಡೆಯುವ ಸಮಾರಂಭದಲ್ಲಿ ಇದನ್ನು ಐಎಎಫ್‌ಗೆ ಸೇರ್ಪಡೆಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಪ್ಟರ್‌ನ ವಿಶೇಷ ಸಾಮರ್ಥ್ಯಗಳೇನು?
ಮುಂದಿನ ಕೆಲ ವರ್ಷಗಳಲ್ಲಿ ಈ ಲಘು ಯುದ್ಧ ಹೆಲಿಕಾಪ್ಟರ್ ಭಾರತೀಯ ಸೇನೆ ಮತ್ತು ಭಾರತೀಯ ವಾಯುಪಡೆಯಲ್ಲಿ ದಾಳಿಗಳಲ್ಲಿ ಪ್ರಧಾನ ಪಾತ್ರ ವಹಿಸಲಿವೆ. ಅಮೇರಿಕದ ಅಪಾಚೆ ಕಾಪ್ಟರ್‌ ಗಳಿಗೆ ತಮ್ಮ ನಿಖರ ದಾಳಿ ಮತ್ತು ಸಾಮರ್ಥ್ಯಗಳಿಂದಾಗಿ ವಿಶ್ವಪ್ರಸಿದ್ಧಿ ಇದೆ, ಆದರೆ ಭಾರತ ನಿರ್ಮಿಸಿರುವ ಪ್ರಚಂಡ ಯುದ್ಧ ಹೆಲಿಕಾಪ್ಟರ್‌ ಗಳು ಅವಕ್ಕಿಂತ ದೊಡ್ಡದಾಗಿದೆ ಮತ್ತು ಅಪಾಚೆಗಿಂತಲೂ ಹೆಚ್ಚು ಸಾಮರ್ಥ್ಯವನ್ನು ಹೊಂದಿದೆ. ಜಗತ್ತಿನ ಸೇನಾ ಕ್ಷೇತ್ರದಲ್ಲಿ ʼಪ್ರಚಂಡʼ ಹೊಸ ಕ್ರಾಂತಿಯಾಗಿ ಮೂಡಿಬರುತ್ತಿದೆ. ಈ ಕಾಪ್ಟರ್‌ ಗಳಿಗೆ ಒಂದು ನಿರ್ದಿಷ್ಟ ಪಾತ್ರವನ್ನು ವಹಿಸಲಾಗಿದ್ದು, ವಿಶೇಷವಾಗಿ ಹೆಚ್ಚಿನ ಎತ್ತರದ ಕಾರ್ಯಾಚರಣೆಗಳಲ್ಲಿ ಗಮನಾರ್ಹವಾದ ಪಾತ್ರವನ್ನು ನಿರ್ವಹಿಸಲಿವೆ. ಚೀನಾ ದಂತಹ ರಾಷ್ಟ್ರಗಳ ವಿರುದ್ಧ ಕಾದುವಂತ ಪರಿಸ್ಥಿತಿ ಎದುರಾದರೆ ಇವುಗಳು ನಿರ್ಣಾಯಕ ಪಾತ್ರ ವಹಿಸಲಿವೆ. ಚಾಪರ್‌ನ ವಿನ್ಯಾಸವು ಸಂಪೂರ್ಣವಾಗಿ ಭಾರತೀಯವಾಗಿದೆ.

ಈ ಹೆಲಿಕಾಪ್ಟರ್‌ 5.8 ಟನ್ ತೂಕದ ಅವಳಿ ಎಂಜಿನ್ ಗಳನ್ನು ಹೊಂದಿದೆ. ಇದು ಹಲವಾರು ರಹಸ್ಯ ವೈಶಿಷ್ಟ್ಯಗಳು, ಶಸ್ತ್ರಸಜ್ಜಿತ-ರಕ್ಷಣಾ ವ್ಯವಸ್ಥೆಗಳು, ರಾತ್ರಿ ದಾಳಿ ಸಾಮರ್ಥ್ಯ ಮತ್ತು ಉತ್ತಮ ಸಾಮರ್ಥ್ಯಕ್ಕಾಗಿ ವಿಶೇಷ ಲ್ಯಾಂಡಿಂಗ್ ಗೇರ್ ಅನ್ನು ಒಳಗೊಂಡಿವೆ. ಇವುಗಳು ಅಗತ್ಯವಾದ ಚುರುಕುತನ, ಕುಶಲತೆ, ವಿಸ್ತೃತ ಶ್ರೇಣಿ, ಎತ್ತರದಲ್ಲಿ ಕಾರ್ಯ ನಿರ್ವಹಿಸುವ ಕಾರ್ಯಕ್ಷಮತೆ ಮತ್ತು ಶತೃಗಳನ್ನು ಪತ್ತೆಹಚ್ಚುವುದು, ಶತ್ರುಗಳ ವಾಯು ರಕ್ಷಣಾ ನಾಶ ಮತ್ತು ಪ್ರತಿ-ಬಂಡಾಯ ಸೇರಿದಂತೆ ಹಲವಾರು ಪಾತ್ರಗಳನ್ನು ನಿರ್ವಹಿಸುವ ಅಗಾಧ ಸಾಮರ್ಥ್ಯ ವನ್ನು ಹೊಂದಿವೆ. ಈ ಲಘು ಯುದ್ಧ ಹೆಲಿಕಾಪ್ಟರ್‌ ಸ್ವಯಂಚಾಲಿತ ಫಿರಂಗಿ 2,000 ಮೀಟರ್ ವ್ಯಾಪ್ತಿಯನ್ನು ಕವರ್‌ ಮಾಡಲಿದೆ. ಪ್ರತಿ ನಿಮಿಷಕ್ಕೆ 750 ಸುತ್ತು ಬೆಂಕಿ ಉಗುಳುವ ಸಾಮರ್ಥ್ಯ ಹೊಂದಿದೆ. ಯಾವುದೇ ಹವಾಮಾನದಲ್ಲಿ ಯುದ್ಧ ಮಾಡುವ ಸಾಮರ್ಥ್ಯವನ್ನು ಹೊಂದಿರುವುದು ಇವುಗಳ ಹೆಚ್ಚುಗಾರಿಕೆ. ಶತ್ರುಗಳ ಕ್ಷಿಪಣಿಗಳ ಹೊಡೆತದಿಂದಲೂ ತಪ್ಪಿಸಿಕೊಳ್ಳುವಷ್ಟು ಇವುಗಳು ಸಶಕ್ತವಾಗಿದೆ. ಹೆಲಿಕಾಪ್ಟರ್‌ ಮೇಲೆ ಗುಂಡೇಟಿನ ಪರಿಣಾಮ ಕೂಡಾ ತೀರಾ ಕಡಿಮೆಯಾಗುತ್ತವೆ. ಪ್ರಚಂಡ  ಕಾಪ್ಟರ್‌ ಗಳನ್ನು ಲಡಾಖ್ ಮೇಲೆ ಪರೀಕ್ಷಿಸಲಾಗಿದೆ. ಇದು ಚೀನಾದ ಡ್ರೋನ್‌ಗಳನ್ನು ಕ್ಷಣಾರ್ಧದಲ್ಲಿ ಹೊಡೆದುರುಳಿಸಬಲ್ಲದು. ವಾಯುಮಾರ್ಗದಲ್ಲಿ ಹಾರಾಡುತ್ತಲೇ ನೆಲದ ಮೇಲಿನ ಟ್ಯಾಂಕ್‌ ಗಳನ್ನು ಸ್ಫೋಟಿಸಬಲ್ಲವು ಎಂದು ಅಧಿಕಾರಿಗಳು ಹೇಳುತ್ತಾರೆ.

15 ವರ್ಷದ ಛಲ.. 3,500 ಕೋಟಿ‌ ರೂ. ವೆಚ್ಚದ ಪ್ರಾಜೆಕ್ಟ್: 
ಈ ಪೈಕಿ 95 ಹೆಲಿಕಾಪ್ಟರ್‌ಗಳು ಇಂದು ಭಾರತೀಯ ಸೇನೆಗೆ ಸೇರಲಿವೆ. ಸರಿಸುಮಾರು 65 ಕಾಪ್ಟರ್‌ ಗಳು ಭಾರತೀಯ ವಾಯುಪಡೆಯನ್ನು ಸೇರಲಿವೆ. ಇದು ಅತ್ಯಂತ ದುಬಾರಿ ಯೋಜನೆಯಾಗಿದ್ದು, ಇದರ ನಿರ್ಮಾಣ ವೆಚ್ಚ ₹ 3,500 ಕೋಟಿಗಳಷ್ಟಾಗಿದೆ.
ಹೆಲಿಕಾಪ್ಟರ್ ಅನ್ನು ಎತ್ತರದ ಬಂಕರ್-ಬಸ್ಟಿಂಗ್ ಕಾರ್ಯಾಚರಣೆಗಳು, ಕಾಡುಗಳು ಮತ್ತು ನಗರ ಪರಿಸರದಲ್ಲಿ ಪ್ರತಿ-ಬಂಡಾಯ ಕಾರ್ಯಾಚರಣೆಗಳು ಮತ್ತು ನೆಲದ ಪಡೆಗಳನ್ನು ಬೆಂಬಲಿಸಲು ಸಹ ನಿಯೋಜಿಸಬಹುದು.
‌ಈ ಹೆಲಿಕಾಪ್ಟರ್ ಅನ್ನು ನಿಧಾನವಾಗಿ ಚಲಿಸುವ ವಿಮಾನಗಳು ಮತ್ತು ಎದುರಾಳಿಗಳ ರಿಮೋಟ್ ಪೈಲಟ್ ವಿಮಾನಗಳ (RPAs) ವಿರುದ್ಧವೂ ಬಳಸಬಹುದು. ಐಎಎಫ್ ಮತ್ತು ಭಾರತೀಯ ಸೇನೆಯ ಕಾರ್ಯಾಚರಣೆಯ ಅಗತ್ಯತೆಗಳನ್ನು ಪೂರೈಸಲು ಇದು ಪ್ರಬಲ ವೇದಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಗಿಲ್ ಸಂಘರ್ಷದ ಬಳಿಕ ಭಾರತದ ಎತ್ತರದ ಪ್ರದೇಶಗಳಲ್ಲಿ ಸಾಗಿ ಯುದ್ಧ ಮಾಡಬಲ್ಲ ಆಕ್ರಮಣಕಾರಿ ಲಘು ಯುದ್ಧ ಹೆಲಿಕಾಪ್ಟರ್‌ ಗಳ ಅಗತ್ಯ ಭಾರತಕ್ಕೆ ಮನದದಟ್ಟಾಯಿತು. 15,000 16,000 ಅಡಿಯಷ್ಟು ಎತ್ತರದಲ್ಲಿ ಹಾರಿ ಶತ್ರುಗಳ ಬಂಕರ್‌ಗಳನ್ನು ಛಿದ್ರಗೊಳಿಸುವ ಸಾಮರ್ಥ್ಯದ ಕಾಪ್ಟರ್ ಗಳು ಭಾರತಕ್ಕೆ ಬೇಕಿತ್ತು. ಆದರೆ ಭಾರತ ಇದಕ್ಕಾಗಿ ಮತ್ತೊಂದು ರಾಷ್ಟ್ರದ ಮುಂದೆ ಸಹಾಯಕ್ಕೆ ಕೈಚಾಚಲಿಲ್ಲ. ಭವಿಷ್ಯದಲ್ಲಿ ತಾನೇ ಇಂತಹ ಕಾಪ್ಟರ್‌ ಗಳನ್ನು ಉತ್ಪಾದಿಸುವ ಛಲದಲ್ಲಿ ಮುನ್ನುಗ್ಗಿತು. ಸತತ 15 ವರ್ಷಗಳ ಕಠಿಣ ಪರಿಶ್ರಮದ ಫಲವಾಗಿ  ಇಂದು ʼಪ್ರಚಂಡʼ ಸೇನೆಗೆ ಸೇರಿದೆ. ತನ್ನ ಮೊದಲ ಸ್ವದೇಶೀ ಯುದ್ಧ ಹೆಲಿಕಾಪ್ಟರ್‌ ನಿರ್ಮಾಣದಲ್ಲೇ ಭಾರತ ವಿಶ್ವದ ಬಲಿಷ್ಠ ರಾಷ್ಟ್ರಗಳು  ಕಣ್ಣರಳಿಸಿ ತನ್ನತ್ತ ನೋಡುವಂತೆ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!