Monday, August 8, 2022

Latest Posts

ಮಾದೀರ ಲೆನಿನ್ ಬೋಪಣ್ಣಗೆ ಮರಣೋತ್ತರ ‘ಹೊಯ್ಸಳ’ ಶೌರ್ಯ ಪ್ರಶಸ್ತಿ

ಹೊಸದಿಗಂತ ವರದಿ, ಕೊಡಗು:

ನೀರಿನ ಸುಳಿಗೆ ಸಿಲುಕಿ ಸಾವಿನಂಚಿಗೆ ತಲುಪಿದ್ದ ಸಹಪಾಠಿಗಳನ್ನು ರಕ್ಷಿಸಲು ಮುಂದಾಗಿ ತನ್ನ ಪ್ರಾಣವನ್ನೇ ಕಳೆದುಕೊಂಡ ಕೊಡಗಿನ ವಿದ್ಯಾರ್ಥಿ ಮಾದಿರ ಲೆನಿನ್ ಬೋಪಣ್ಣ(16) ಮರಣೋತ್ತರ ಹೊಯ್ಸಳ ಶೌರ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕಳೆದ ವರ್ಷ ಲಯನ್ಸ್ ಗೋಣಿಕೊಪ್ಪ ಶಾಲೆಯ ವಿದ್ಯಾರ್ಥಿಗಳು ಪ್ರವಾಸ ತೆರಳಿದ್ದ ಸಂದರ್ಭ ದುಬಾರೆಯ ಕಾವೇರಿ ಹೊಳೆಯಲ್ಲಿ ಈಜಲು ತೆರಳಿದ್ದು, ಈ ಸಂದರ್ಭ ಇಬ್ಬರು ಸಹಪಾಠಿಗಳು ನೀರಿನ ಸುಳಿಗೆ ಸಿಲುಕಿ ಸಾವಿನಂಚಿಗೆ ತಲುಪಿದ್ದರು. ಇದನ್ನು ಗಮನಿಸಿದ ಲೆನಿನ್ ಬೋಪಣ್ಣ ತನ್ನ ಜೀವದ ಹಂಗನ್ನು ತೊರೆದು ಓರ್ವನನ್ನು ರಕ್ಷಣೆ ಮಾಡಿ ಮತ್ತೋರ್ವನ ಜೀವ ಉಳಿಸಲು ಮುಂದಾದಾಗ ನೀರಿನಲ್ಲಿ ಮುಳುಗಿ ದುರಂತ ಸಾವನ್ನಪ್ಪಿದ್ದರು.

ಅಪ್ರತಿಮ ಸಾಹಸ, ಎದೆಗಾರಿಕೆ ಮೂಲಕ ವೀರತ್ವ ಮೆರೆಯುವ ಬಾಲ ಪ್ರತಿಭೆಗಳಿಗೆ ರಾಜ್ಯ ಸರಕಾರ ಪ್ರತಿಷ್ಠಿತ ಹೊಯ್ಸಳ ಶೌರ್ಯ ಪ್ರಶಸ್ತಿ ನೀಡಿ ಗೌರವಿಸುತ್ತಿದ್ದು, ಬೆಂಗಳೂರಿನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗೋಣಿಕೊಪ್ಪಲು ಲಯನ್ಸ್ ಶಾಲೆಯ 10ನೇ ತರಗತಿಯ ವಿದ್ಯಾರ್ಥಿಯಾಗಿದ್ದ ಹೈಸೊಡ್ಲೂರು ಗ್ರಾಮದ ನಿವಾಸಿ ದಿ. ಮಾದೀರ ಲೆನಿನ್ ಬೋಪಣ್ಣ ಅವರ ಪೋಷಕರಾದ ಮಾದೀರ ಹರೀಶ್- ಕವಿತಾ ದಂಪತಿ ತಮ್ಮ ಮಗನ ಪರವಾಗಿ ಹೊಯ್ಸಳ ಪ್ರಶಸ್ತಿ(ಮರಣೋತ್ತರ) ಸ್ವೀಕರಿಸಿದರು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಕರ್ನಾಟಕ ರಾಜ್ಯ ಸ್ಕೌಟ್ಸ್ ಆಂಡ್ ಗೈಡ್ಸ್ ಮುಖ್ಯ ಆಯುಕ್ತ ಪಿಜಿಆರ್ ಸಿಂಧ್ಯಾ, ಮಹಿಳಾ ಮತ್ತು ಮಕ್ಕಳ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಸೇರಿದಂತೆ ಗಣ್ಯರು ಹಾಜರಿದ್ದರು.

ಅಂದು ನಡೆದದ್ದೇನು?:

2020ರ ಮಾರ್ಚ್ 4ರಂದು ಗೋಣಿಕೊಪ್ಪದ ಕಳತ್ಮಾಡು ಲಯನ್ಸ್ ಪ್ರೌಢ ಶಾಲೆಯ ವಿದ್ಯಾರ್ಥಿಗಳು ದುಬಾರೆಗೆ ಪ್ರವಾಸ ತೆರಳಿದ್ದರು. ವಿದ್ಯಾರ್ಥಿಗಳು ಕಾವೇರಿ ನದಿಯಲ್ಲಿ ಈಜಾಡುತ್ತಿದ್ದ ಸಂದರ್ಭ ಕಿರಿಯಮಾಡ ಈಶ ಬೋಪಣ್ಣ ಎಂಬವರ ಪುತ್ರ ಶಾನ್ ಮಂದಣ್ಣ ಹಾಗೂ ಕಾನೂರಿನ ಕೋದೇಂಗಡ ಎಂ.ಶ್ರೇಯಸ್ ನೀರಿನಲ್ಲಿ ಮುಳುಗುತ್ತಿದ್ದರು.

ಈ ಸಂದರ್ಭ 10ನೇ ತರಗತಿಯ ವಿದ್ಯಾರ್ಥಿ ಹಾಗೂ ತಂಡದ ನಾಯಕನಾಗಿದ್ದ ಮಾದೀರ ಲೆನಿನ್ ಬೋಪಣ್ಣ(16) ನೀರಿನಲ್ಲಿ ಮುಳುಗುತ್ತಿದ್ದ ಶಾನ್ ಮಂದಣ್ಣನನ್ನು ರಕ್ಷಿಸಿದ್ದ. ನಂತರ ಕೆ.ಎಂ.ಶ್ರೇಯಸ್‌ನನ್ನು ರಕ್ಷಣೆ ಮಾಡಲು ಲೆನಿನ್ ಮುಂದಾದ ಸಂದರ್ಭ ಇಬ್ಬರೂ ಕಾವೇರಿ ನದಿಯ ಸುಳಿಯಲ್ಲಿ ಸಿಲುಕಿ ದುರಂತ ಸಾವನ್ನಪ್ಪಿದ್ದರು. ‘ಶೂ’ ಧರಿಸಿದ್ದ ಲೆನಿನ್ ಬೋಪಣ್ಣ ನೀರಿನಲ್ಲಿ ಮುಳುಗುತ್ತಿದ್ದ ವಿದ್ಯಾರ್ಥಿಗಳನ್ನು ರಕ್ಷಿಸಲು ಜೀವದ ಹಂಗು ತೊರೆದು ಓರ್ವ ವಿದ್ಯಾರ್ಥಿಯನ್ನು ರಕ್ಷಣೆ ಮಾಡಿ ತಾನೂ ಸಾವನ್ನಪ್ಪುವ ಮೂಲಕ ವೀರ ಮರಣಕ್ಕೆ ಅಂದು ಸಾಕ್ಷಿಯಾಗಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss