Monday, August 15, 2022

Latest Posts

ಮಡಿಕೇರಿ ಖಾಸಗಿ ಬಸ್ ನಿಲ್ದಾಣಕ್ಕೆ ನಗರಸಭಾಧ್ಯಕ್ಷರ ಭೇಟಿ: ಅವ್ಯವಸ್ಥೆ ಸರಿಪಡಿಸಲು ಅಧಿಕಾರಿಗಳಿಗೆ ನಿರ್ದೇಶನ

ಹೊಸ ದಿಗಂತ ವರದಿ, ಮಡಿಕೇರಿ:

ಮಡಿಕೇರಿ ನಗರದಲ್ಲಿ ನಿರ್ಮಾಣಗೊಂಡಿರುವ ‘ಹೈಟೆಕ್’ ಖಾಸಗಿ ಬಸ್ ನಿಲ್ದಾಣ ಅವ್ಯವಸ್ಥೆಯನ್ನು ನಗರದ ಪ್ರಥಮ ಪ್ರಜೆ ಅನಿತಾ ಪೂವಯ್ಯ ಅವರು ಗುರುವಾರ ಸ್ವತಃ ಪರಿಶೀಲನೆ ನಡೆಸಿದರು.
ಕೋಟ್ಯಂತರ ರೂ. ವ್ಯಯಿಸಿ ನಿರ್ಮಿಸಲಾದ ಖಾಸಗಿ‌ ಬಸ್ ನಿಲ್ದಾಣ ಅವ್ಯವಸ್ಥೆಯ ಆಗರವಾಗಿದೆ ಎಂಬುದನ್ನು ಮಾಧ್ಯಮಗಳು ಆರಂಭದಿಂದಲೇ ವರದಿ ಮಾಡುತ್ತಾ ಬಂದಿದ್ದವು.
ಈ‌ ನಡುವೆ ಮಹಾಮಾರಿ ಕೊರೋನಾದಿಂದಾಗಿ ಜಿಲ್ಲೆಯಲ್ಲಿ ಖಾಸಗಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡ ಪರಿಣಾಮ ಬಸ್ ನಿಲ್ದಾಣವನ್ನು ಕೇಳುವವರು, ನೋಡುವವರೇ ಇಲ್ಲವಾಗಿತ್ತು.
ಪರಿಣಾಮವಾಗಿ ಬಸ್ ನಿಲ್ದಾಣ ವಲಸೆ ಕಾರ್ಮಿಕರು, ಭಿಕ್ಷುಕರ ವಾಸ ಸ್ಥಾನವಾಗಿ ಮಾರ್ಪಟ್ಟಿತ್ತು.
ಇದೀಗ ಜಿಲ್ಲೆಯಲ್ಲಿ ಖಾಸಗಿ ಬಸ್ ಗಳ ಸಂಚಾರ‌ ನಿಧಾನವಾಗಿ ಮತ್ತೆ ಆರಂಭವಾಗಿದ್ದು, ಬಸ್ ನಿಲ್ದಾಣ ಮಾತ್ರ ಅವ್ಯವಸ್ಥೆಯಲ್ಲೇ ಮುಂದುವರಿದಿತ್ತು.
ಇದೀಗ ನಗರಸಭೆಯಲ್ಲಿ ನೂತನ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದಿದ್ದು, ನಗರಸಭಾ ಅಧ್ಯಕ್ಣೆ ಅನಿತಾ ಪೂವಯ್ಯ ಹಾಗೂ ಇತರರು ಗುರುವಾರ ಖಾಸಗಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಬಸ್ ನಿಲ್ದಾಣದಲ್ಲಿರುವ ಶೌಚಾಲಯವನ್ನು ಪ್ರಯಾಣಿಕರ ಅನುಕೂಲಕ್ಕೆ ಒದಗಿಸುವಂತೆ ಪೌರಾಯುಕ್ತರು ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ ಅಧ್ಯಕ್ಷರು, ನಿಲ್ದಾಣದಲ್ಲಿ ವಸತಿ ಕಲ್ಪಿಸಿಕೊಂಡಿರುವ ವಲಸೆ‌‌ ಕಾರ್ಮಿಕರು, ಭಿಕ್ಷುಕರನ್ನು ಪೊಲೀಸ್ ನೆರವಿನಿಂದ ಅಲ್ಲಿಂದ‌ ತೆರವು ಮಾಡಿಸುವಂತೆಯೂ ನಿರ್ದೇಶನ ನೀಡಿದರು.
ಕುಡಿಯುವ ನೀರು, ಬೆಳಕಿನ ವ್ಯವಸ್ಥೆಯನ್ನೂ ಸಮರ್ಪಕವಾಗಿ ಮಾಡುವ ಮೂಲಕ ಬಸ್ ನಿಲ್ದಾಣವನ್ನು ಸ್ವಚ್ಛ ಸುಂದರವಾಗಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ಅನಿತಾ ಪೂವಯ್ಯ ಸೂಚಸಿದರು.
ಈ‌ ಸಂದರ್ಭ ನಗರಸಭಾ ಸದಸ್ಯರಶ ಮಹೇಶ್ ಜೈನಿ, ಅರುಣ್ ಶೆಟ್ಟಿ, ಕೆ.ಎಸ್.ಅಪ್ಪಣ್ಣ ಮತ್ತಿತರರು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss