ಕುಸಿಯುವ ಹಂತದಲ್ಲಿ ಮಡಿಕೇರಿ-ಮಂಗಳೂರು ರಸ್ತೆಯ ತಡೆಗೋಡೆ: ಎರಡು ದಿನದಲ್ಲಿ ಸರಿಪಡಿಸಲು ಅಪ್ಪಚ್ಚುರಂಜನ್ ಸೂಚನೆ

ಹೊಸದಿಗಂತ ವರದಿ, ಮಡಿಕೇರಿ:

ಜಿಲ್ಲಾಡಳಿತ ಭವನ ಬಳಿ ಮಂಗಳೂರು ರಸ್ತೆಯ ತಡೆಗೋಡೆಯನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಮತ್ತು ಕೆ.ಜಿ.ಬೋಪಯ್ಯ ಅವರು ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಮಾತನಾಡಿ, ಕಾಮಗಾರಿ ಆರಂಭದ ಸಂದರ್ಭದಲ್ಲಿ ಕಾಂಕ್ರಿಟ್ ತಡೆಗೋಡೆ ನಿರ್ಮಿಸುವಂತೆ ಎಂಜಿನಿಯರ್‌ಗಳಿಗೆ ಸೂಚಿಸಲಾಗಿತ್ತು, ಆದರೆ ದೆಹಲಿಯಿಂದ ವಿನ್ಯಾಸಕರನ್ನು ಕರೆಸಿ ಸ್ಲ್ಯಾಬ್ ಮಾದರಿಯಲ್ಲಿ ತಡೆಗೋಡೆ ಮಾಡಿದ್ದಾರೆ. ಈ ಮಾದರಿಯ ತಡೆಗೋಡೆ ಕೊಡಗು ಜಿಲ್ಲೆಯ ಮಣ್ಣಿಗೆ ಸರಿ ಬರುವುದಿಲ್ಲ. ಈ ಬಗ್ಗೆ ಸಾಕಷ್ಟು ಬಾರಿ ಎಂಜಿನಿಯರ್‌ಗಳಿಗೆ ತಿಳಿಸಿದರೂ ಸಹ ಕಿವಿಗೊಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೊಡಗು ಜಿಲ್ಲೆಯಲ್ಲಿನ ಮಳೆಯ ವಾತಾವರಣ ನೋಡಿ ಸ್ಥಳೀಯ ಮಾದರಿಯಲ್ಲಿ ತಡೆಗೋಡೆ ನಿರ್ಮಿಸಬೇಕಿತ್ತು, ಸ್ಲ್ಯಾಬ್ ಮಾದರಿ ತಡೆಗೋಡೆಯನ್ನು ಎತ್ತರಕ್ಕೆ ನಿರ್ಮಿಸಿರುವುದರಿಂದ ಕುಸಿಯುವ ಹಂತ ತಲುಪಿದೆ ಎಂದು ಸಿಟ್ಟಾದರು.
ಈ ರೀತಿ ಆದಲ್ಲಿ ಸಾರ್ವಜನಿಕರು ಓಡಾಡುವುದು ಹೇಗೆ ಎಂದು ಎಂಜಿನಿಯರ್‌ಗಳನ್ನು ಸ್ಥಳದಲ್ಲಿಯೇ ತರಾಟೆಗೆ ತೆಗೆದುಕೊಂಡ ಅವರು, ಜನಪ್ರತಿನಿಧಿಗಳಿಗೆ ಕೆಟ್ಟ ಹೆಸರು ತರಲು ಈ ರೀತಿಯ ಕೆಲಸಗಳನ್ನು ಮಾಡುತ್ತಾರೆ ಎಂದರು.
‘ಎರಡು ದಿನದಲ್ಲಿ ತಡೆಗೋಡೆಯನ್ನು ಸರಿಪಡಿಸಿ ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಮಾಡಬೇಕು. ಇಲ್ಲದಿದ್ದಲ್ಲಿ ಸಂಬಂಧಪಟ್ಟವರ ವಿರುದ್ಧ ಕ್ರಮ ಜರುಗಿಸಲು ಕ್ರಮವಹಿಸಬೇಕಾಗುತ್ತದೆ ಎಂದು ಅಪ್ಪಚ್ಚುರಂಜನ್ ಅವರು ಎಚ್ಚರಿಸಿದರು.’
ಕೆಲವು ಸಂದರ್ಭದಲ್ಲಿ ಗುಣಮಟ್ಟಕ್ಕಿಂತಲೂ ಫಲಿತಾಂಶ ಮುಖ್ಯವಾಗುತ್ತದೆ. ಆ ನಿಟ್ಟಿನಲ್ಲಿ ಇಲ್ಲಿಯ ಸ್ಥಳೀಯ ವಾತಾವರಣಕ್ಕೆ ಸೂಕ್ತವಾದ ಕಾಮಗಾರಿಯನ್ನು ಕೈಗೊಳ್ಳಬೇಕು ಎಂದು ಅವರು ನುಡಿದರು.
ಈ ಸಂದರ್ಭ ಮಾತನಾಡಿದ ಕೆ.ಜಿ.ಬೋಪಯ್ಯ ಅವರು, 9 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಮಣ್ಣು ಪರೀಕ್ಷೆ ಮಾಡಲಾಗಿದೆಯೇ, ಮಡಿಕೇರಿ ಮಳೆಗೆ ಸೂಕ್ತ ವಿನ್ಯಾಸ ಮಾಡಿದ್ದಾರೆಯೇ ಎಂದು ಬೇಸರ ವ್ಯಕ್ತಪಡಿಸಿದರು.
ಮಂಗಳೂರು ರಸ್ತೆಯ ಹಲವು ಕಡೆಗಳಲ್ಲಿ ಗಡಿ ರಸ್ತೆ ಸಂಸ್ಥೆಯವರು ತಡೆಗೋಡೆ ಕಾಮಗಾರಿಯನ್ನು ಉತ್ತಮವಾಗಿ ಕೈಗೊಂಡಿದ್ದಾರೆ. ಅವರ ಸಲಹೆಯನ್ನಾದರೂ ಪಡೆಯಬೇಕಲ್ಲವೇ ಎಂದು ಹೇಳಿದರು.
ಸ್ಲ್ಯಾಬ್ ಮಾದರಿಯ ತಡೆಗೋಡೆಗೆ ವಿರೋಧ ವ್ಯಕ್ತಪಡಿಸಲಾಗಿತ್ತು. ಆದರೆ ಆ ಸಂದರ್ಭದಲ್ಲಿ ಸಲಹೆಯನ್ನು ಪರಿಗಣಿಸಲಿಲ್ಲ ಎಂದರು.
ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು, ಕಾಂಕ್ರಿಟ್ ಮಾದರಿಯ ತಡೆಗೋಡೆ ನಿರ್ಮಿಸಿದರೆ ಸಮಸ್ಯೆ ಉಂಟಾಗುತ್ತಿರಲಿಲ್ಲ. ಹಲವು ಬಾರಿ ಈ ಬಗ್ಗೆ ಸಲಹೆ ನೀಡಿದರೂ ಸಹ ಎಂಜಿನಿಯರ್‌ಗಳು ಕಿವಿಗೊಡಲಿಲ್ಲ ಎಂದರು.
ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಕೆ.ಜಿ.ಬೋಪಯ್ಯ ಅವರು ಮಾತನಾಡಿ, 2018-19 ರಲ್ಲಿ ಸುರಿದ ಧಾರಾಕಾರ ಮಳೆಗೆ ಮಡಿಕೇರಿ-ಮಂಗಳೂರು ರಸ್ತೆ ಹಲವು ಕಡೆಗಳಲ್ಲಿ ಹಾನಿಯಾಗಿತ್ತು, ಆ ನಿಟ್ಟಿನಲ್ಲಿ ಗಡಿ ರಸ್ತೆ ಸಂಸ್ಥೆ ಅವರು ಉತ್ತಮವಾಗಿ ತಡೆಗೋಡೆ ನಿರ್ಮಿಸಿದ್ದಾರೆ ಎಂದರು.
ಎಂಜಿನಿಯರ್‌ಗಳು ತಡೆಗೋಡೆ ವಿನ್ಯಾಸ ಮಾಡುವಲ್ಲಿಯೇ ತಪ್ಪಿದ್ದಾರೆ. ಮಣ್ಣು ಪರೀಕ್ಷೆ ಮಾಡಿಲ್ಲ. ತಡೆಗೋಡೆ ಯಾವ ಮಾದರಿಯಲ್ಲಿ ಮಾಡಬೇಕು ಎಂಬುದೇ ಎಂಜಿನಿಯರ್‌ಗಳಿಗೆ ತಿಳಿದಿಲ್ಲ. ಸಾಮಾನ್ಯ ಜ್ಞಾನ ಇಲ್ಲದೆ ತಡೆಗೋಡೆ ನಿರ್ಮಿಸಿದ್ದಾರೆ. ಕೂಡಲೇ ಸರಿಪಡಿಸಿ ಸಂಚಾರಕ್ಕೆ ವ್ಯವಸ್ಥೆ ಮಾಡುವಂತೆ ಎಂಜಿನಿಯರ್‌ಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್ ಗೋವಿಂದರಾಜು, ಕಾರ್ಯಪಾಲಕ ಎಂಜಿನಿಯರ್ ನಾಗರಾಜು, ಜೂನಿಯರ್ ಎಂಜಿನಿಯರ್‌ಗಳಾದ ದೇವರಾಜು, ಸತೀಶ್, ಚೆನ್ನಕೇಶವ ಮತ್ತಿತರರು ಇದ್ದರು.
ದೆಹಲಿಯ ಅತಿಲ್ ಗೋಯಲ್ ಸಂಸ್ಥೆಯವರು ಸದ್ಯ ಮರಳು ಚೀಲವನ್ನು ತಡೆಗೋಡೆಗೆ ಅಳವಡಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!