ತಮಿಳುನಾಡು ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ವೈದ್ಯಕೀಯ ಸೀಟ್‌ನಲ್ಲಿ 7.5% ಮೀಸಲಾತಿ; ಹೈಕೋರ್ಟ್‌ ಆದೇಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ತಮಿಳುನಾಡಿನ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಪದವಿಪೂರ್ವ ವೈದ್ಯಕೀಯ ಕೋರ್ಸ್‌ ಗಳ ಪ್ರವೇಶದಲ್ಲಿ ಶೇಕಡಾ 7.5 ಮೀಸಲಾತಿ ಮೀಸಲಿಸುವ ಸರ್ಕಾರದ ನಿರ್ಧಾರವನ್ನು ಮದ್ರಾಸ್‌ ಹೈಕೋರ್ಟ್‌ ಎತ್ತಿ ಹಿಡಿದಿದೆ.
ಖಾಸಗಿ ಶಾಲಾ ವಿದ್ಯಾರ್ಥಿಗಳು ಮತ್ತು ಅನುದಾನಿತ ಶಾಲಾ ವಿದ್ಯಾರ್ಥಿಗಳು ಮೀಸಲಾತಿಯನ್ನು ಪ್ರಶ್ನಿಸಿ ಹಾಗೂ ತಮಗೂ ಇದೇ ರೀತಿಯ ಸೌಲಭ್ಯಗಳನ್ನು ಕಲ್ಪಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಮುನೀಶ್ವರ್ ನಾಥ್ ಭಂಡಾರಿ ಮತ್ತು ನ್ಯಾಯಮೂರ್ತಿ ಡಿ ಭರತ ಚಕ್ರವರ್ತಿ ನೇತೃತ್ವದ ಮೊದಲ ಪೀಠ ಈ ತೀರ್ಪು ಪ್ರಕಟಿಸಿತು.
ವೈದ್ಯಕೀಯ ಪ್ರವೇಶದಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೇ 7.5 ಮೀಸಲಾತಿಯನ್ನು ಕಲ್ಪಿಸುವ ಮೂಲಕ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿಹಿಡಿಯಲಾಗಿದೆ ಎಂದು ಪೀಠವು ಆದೇಶದಲ್ಲಿ ತಿಳಿಸಿದೆ.
ಐದು ವರ್ಷಗಳಲ್ಲಿ ಕೋಟಾವನ್ನು ಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಮೀಸಲಾತಿಯನ್ನು ಪ್ರಶ್ನಿಸಿ ಮತ್ತು ಅದೇ ರೀತಿಯ ಪ್ರಯೋಜನಗಳನ್ನು ಕೋರಿ ಸಲ್ಲಿಸಲಾದ ಎಲ್ಲಾ ಅರ್ಜಿಗಳನ್ನು ನ್ಯಾಯಾಲಯವು ವಜಾಗೊಳಿಸಿದೆ. ಈ ಆದೇಶವು ದ್ರಾವಿಡ ಚಳವಳಿ ಪ್ರಮುಖಾಂಶವಾದ ಸಾಮಾಜಿಕ ನ್ಯಾಯ ಪರಿಕಲ್ಪನೆಯಡಿ ಡಿಎಂಕೆ ಸರ್ಕಾರದ ಪ್ರಕಟಿಸಿದ ಮಹತ್ತರ ನಿರ್ಧಾರಕ್ಕೆ ಸಂದ ಗೆಲುವು ಎಂದು ಹಿರಿಯ ವಕೀಲ ಮತ್ತು ಡಿಎಂಕೆ ರಾಜ್ಯಸಭಾ ಸದಸ್ಯ ಪಿ ವಿಲ್ಸನ್ ಅವರು ಬಣ್ಣಿಸಿದ್ದಾರೆ.
ವಾಸ್ತವವಾಗಿ ಸರ್ಕಾರಿ ವಿದ್ಯಾರ್ಥಿಗಳಿಗೆ ಮೀಸಲಾತಿ ಕೋಟಾ ನೀಡುವುದು ಹಿಂದಿನ ಎಐಎಡಿಎಂಕೆ ಸರ್ಕಾರದ ಯೋಜನೆಯಾಗಿತ್ತು. ಆದರೆ ಕೆಲ ಕಾನೂನುಗಳು ಅದಕ್ಕೆ ತೊಡಕಾಗಿ ಪರಿಣಮಿಸಿತು. ಬಳಿಕ ಅಧಿಕಾರಕ್ಕೇರಿದ ಡಿಎಂಕೆ ಸರ್ಕಾರವು ತೊಡಕುಗಳನ್ನು ನಿವಾರಿಸಿ ಮಸೂದೆಯನ್ನು ಅನುಷ್ಠಾನಕ್ಕೆ ತಂದಿತ್ತು.
ಕೋರ್ಟ್‌ ನಲ್ಲಿ ಮಸೂದೆಯನ್ನು ಸಮರ್ಥಿಸಲು ಸರ್ಕಾರವು ಕಪಿಲ್ ಸಿಬಲ್, ಪಿ ವಿಲ್ಸನ್ ಮತ್ತು ತಮಿಳುನಾಡು ಅಡ್ವೊಕೇಟ್ ಜನರಲ್ ಆರ್ ಶುಣ್ಮುಗಸುಂದರಂ ಸೇರಿದಂತೆ ಹಿರಿಯ ವಕೀಲರನ್ನು ಕಣಕ್ಕಿಳಿಸಿತು. ಬಡತನದ ಬೇಗೆಯಲ್ಲಿಯೂ ವೈದ್ಯರಾಗುವ ಕನಸುಗಳನ್ನು ಹೊತ್ತಿರುವ ವಿದ್ಯಾರ್ಥಿಗಳಿಗೆ ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ದಾಖಲಾಗಲು ಈ ಮೀಸಲಾತಿಯು ಆಶಾಕಿರಣವಾಗಿ ಪರಿಣಮಿಸಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!