ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟವು ಮುಖ್ಯಮಂತ್ರಿ ಸ್ಥಾನದ ಕುರಿತು ಚರ್ಚಿಸಲು ನವೆಂಬರ್ 27 ಗುರುವಾರದಂದು ದೆಹಲಿಯಲ್ಲಿ ಸಭೆ ಸೇರಲಿದೆ.
ಈ ಸಭೆಯಲ್ಲಿ ಏಕನಾಥ್ ಶಿಂಧೆ, ದೇವೇಂದ್ರ ಫಡ್ನವೀಸ್ ಮತ್ತು ಅಜಿತ್ ಪವಾರ್ ಅವರು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಅಲ್ಲಿ ಮುಖ್ಯಮಂತ್ರಿ ಸ್ಥಾನ ಮತ್ತು ಸಚಿವ ಸ್ಥಾನಗಳ ಹಂಚಿಕೆ ಕುರಿತು ಬಿಜೆಪಿಯ ಉನ್ನತ ನಾಯಕತ್ವದೊಂದಿಗೆ ಚರ್ಚಿಸಬಹುದು ಎನ್ನಲಾಗಿದೆ.
ಶಿಂಧೆ ನೇತೃತ್ವದ ಶಿವಸೇನೆ ಸಂಸದರು ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲಿದ್ದು, ಮುಖ್ಯಮಂತ್ರಿ ಪಾತ್ರದ ಬಗ್ಗೆ ಶಿಂಧೆ ಅವರು ತಮ್ಮ ನಿಲುವನ್ನು ಮಂಡಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟವು ನವೆಂಬರ್ 23 ರಂದು ದ್ವಿಶತಕವನ್ನು ದಾಟುವ ಮೂಲಕ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿತು. ಬಿಜೆಪಿ 131 ಸ್ಥಾನಗಳನ್ನು ಗೆದ್ದರೆ, ಶಿವಸೇನೆ ಮತ್ತು ಎನ್‌ಸಿಪಿ ಕ್ರಮವಾಗಿ 57 ಮತ್ತು 41 ಸ್ಥಾನಗಳನ್ನು ಪಡೆದುಕೊಂಡವು. ಹಾಗೂ ಮಂಗಳವಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಏಕನಾಥ್ ಶಿಂಧೆ ಅವರು ನೂತನ ಮುಖ್ಯಮಂತ್ರಿಯವರು ಪ್ರಮಾಣ ವಚನ ಸ್ವೀಕರಿಸುವವರೆಗೆ ಹಂಗಾಮಿ ಸಿಎಂ ಆಗಿ ಕಾರ್ಯನಿರ್ವಹಿಸುತ್ತಿದ್ದು, ಹಾಲಿ ಸರ್ಕಾರದ ಅವಧಿ ನವೆಂಬರ್ 26ಕ್ಕೆ ಮುಕ್ತಾಯಗೊಂಡಿದೆ.
ಇದರ ನಡುವೆ ಹಂಗಾಮಿ ಸಿಎಂ ಏಕನಾಥ್ ಶಿಂಧೆ ಬುಧವಾರ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿ, ಮಹಾರಾಷ್ಟ್ರದಲ್ಲಿ ಮಹಾಯುತಿಯ ಭರ್ಜರಿ ಗೆಲುವಿಗಾಗಿ ಜನತೆಗೆ ಧನ್ಯವಾದ ಅರ್ಪಿಸಿದರು. ಅವರ ಮಾತುಗಳು ವಿದಾಯ ಭಾಷಣದಂತೆ ಕಂಡಿದ್ದು, ಮೈತ್ರಿಕೂಟ ಗೆಲುವು ಆಡಳಿತಾರೂಢ ಸರ್ಕಾರದ ಮೇಲೆ ಜನರು ಇಟ್ಟಿರುವ ವಿಶ್ವಾಸದ ಫಲವಾಗಿದೆ ಎಂದು ಹೇಳಿದರು. ನಾನು ಒಬ್ಬ ಸಾಮಾನ್ಯ ಕುಟುಂಬದಿಂದ ಬಂದವನು. ಆದ್ದರಿಂದ ನಾನು ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ಕಳೆದ ಎರಡೂವರೆ ವರ್ಷ ಸಿಎಂ ಆಗಿ ಕಾರ್ಯ ನಿರ್ವಹಿಸಿದ ಬಗ್ಗೆ ನನಗೆ ಸಮಾಧಾನ ಇದೆ ಎಂದರು. ನಾನು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರಿಗೆ ಧನ್ಯವಾದ ಹೇಳಲು ಇಷ್ಟಪಡುತ್ತೇನೆ ಎಂದರು.