Thursday, October 6, 2022

Latest Posts

ಈ ಕ್ಷೇಮವನ ಧರ್ಮಸ್ಥಳದ ಮಹಾಪ್ರಸಾದ: ಯುಪಿ ಸಿಎಂ ಯೋಗಿ ಆದಿತ್ಯನಾಥ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಬೆಂಗಳೂರು: ಐಟಿ – ಬಿಟಿ ಹಬ್ ಆಗಿರುವ ಬೆಂಗಳೂರನ್ನು ಭಾರತೀಯ ಸಾಂಪ್ರದಾಯಿಕ ವೈದ್ಯ ಪದ್ಧತಿಯ ಹಬ್ ಮಾಡುವ ಪ್ರಯತ್ನ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಎಜ್ಯುಕೇಶನ್ ಸೊಸೈಟಿಯಿಂದ ನಡೆಯುತ್ತಿದೆ ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಹೇಳಿದರು.
ನೆಲಮಂಗಲ ಸಮೀಪದ ಮಹದೇವಪುರದಲ್ಲಿ ಗುರುವಾರ ಎಸ್‌ಡಿಎಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕೇಂದ್ರ ‘ಕ್ಷೇಮವನ’ವನ್ನು ಉದ್ಘಾಟಿಸಿದ ಅವರು, ಧರ್ಮಾಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಸಾಮಾಜಿಕ, ಶಿಕ್ಷಣ, ಆರೋಗ್ಯದ ಸೇವಾ ಕಾರ್ಯಗಳೊಂದಿಗೆ ತಂತ್ರಜ್ಞಾನ ಅಳವಡಿಸಿಕೊಂಡು ಸಾಂಪ್ರದಾಯಿಕ ವೈದ್ಯ ಪದ್ಧತಿ ಬೆಳೆಸುವ ಕಾರ್ಯದಲ್ಲಿ ತೊಡಗಿದ್ದಾರೆ. ಈ ಕ್ಷೇಮವನ ಧರ್ಮಸ್ಥಳದ ಮಹಾಪ್ರಸಾದವಾಗಿದೆ ಎಂದು ಶ್ಲಾಘಿಸಿದರು.
ಭಾರತದಲ್ಲಿರುವ ಸಾಂಪ್ರದಾಯಿಕ ವೈದ್ಯ ಪದ್ಧತಿಗಳಾದ ಆಯುರ್ವೇದ, ಯೋಗ, ಪ್ರಕೃತಿ ಚಿಕಿತ್ಸೆಘಿ, ಯುನಾನಿ, ಸಿದ್ಧ ಮುಂತಾದವುಗಳು ಇಲ್ಲಿನ ಜನರ ಜೀವನವನ್ನು ಸುಲಭಗೊಳಿಸಿವೆ. ಶರೀರದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡಿವೆ. ಇವುಗಳ ಮೂಲಕವೇ ಕೋವಿಡ್ ಸಾಂಕ್ರಾಮಿಕ ವಿಪತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತವನ್ನು ಸ್ವಸ್ಥವಾಗಿರಿಸುವ ಮಾರ್ಗ ಲಭಿಸಿತು. ಸ್ವಸ್ಥ ಶರೀರವಿದ್ದರೆ ಯಾವುದೇ ಸಾಧನೆ ಸಾಧ್ಯವಾಗಲಿದೆ ಎಂದು ಹೇಳಿದರು.
ಹೆಲ್ತ್ ಟೂರಿಸಂಗೆ ಒತ್ತು ನೀಡಲು ಸಲಹೆ
ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಜೂ.21 ಅನ್ನು ವಿಶ್ವ ಯೋಗ ದಿನವನ್ನಾಗಿ ವಿಶ್ವ ಸಂಸ್ಥೆ ಘೋಷಿಸಿದೆ. ಇದರಿಂದ ನಮ್ಮ ದೇಶದ ಆಧಾತ್ಮಿಕ ನೆಲೆಯಿಂದ ವಿಶ್ವದಲ್ಲಿ ಹೊಸ ಮೈಲಿಗಲ್ಲು ಸಾಸಲಾಗಿದೆ. ಆಧ್ಯಾತ್ಮಿಕ, ಧಾರ್ಮಿಕ, ಸಾಮಾಜಿಕ, ವಾಣಿಜ್ಯಿಕ ಅಭಿವೃದ್ಧಿ ಕಾರ್ಯಕ್ರಮಗಳ ಜೊತೆಗೆ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಆರೋಗ್ಯ ಕ್ಷೇತ್ರದಲ್ಲಿ ನಮ್ಮ ಪರಂಪರೆಯ ವೈದ್ಯ ಪದ್ಧತಿಯನ್ನು ಬೆಳೆಸುವುದು ಇವತ್ತಿನ ಅವಶ್ಯಕತೆಯಾಗಿದೆ. ಇದು ಕರ್ನಾಟಕದ ಬೆಂಗಳೂರಿನಿಂದ ಆಗಬೇಕಿದೆ. ಕರ್ನಾಟಕದಲ್ಲಿ ಹೆಲ್ತ್ ಟೂರಿಸಂಗೆ ಹೆಚ್ಚಿನ ಅವಕಾಶಗಳಿವೆ ಎಂದು ಯೋಗಿ ಆದಿತ್ಯನಾಥ್ ಸಲಹೆ ನೀಡಿದರು.
ಬೊಮ್ಮಾಯಿ ನೇತೃತ್ವದಲ್ಲಿ ಕರ್ನಾಟಕ ಸಮೃದ್ಧ
ಉತ್ತರ ಪ್ರದೇಶದಲ್ಲಿ ನೂತನ ಆಯುಷ್ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಮೂಲಕ ಭಾರತೀಯ ವೈದ್ಯ ಪದ್ಧತಿಯನ್ನು ಮುಂದುವರಿಸುವ ಕಾರ್ಯದಲ್ಲಿ ತೊಡಗಿದ್ದೇವೆ. ಕರ್ನಾಟಕದ ಯೋಗ ವಿವಿಯ ಕುಲಪತಿಗಳು ನಮಗೆ ಮಾರ್ಗದರ್ಶನ ನೀಡಿದ್ದಾರೆ. ಎಸ್‌ಡಿಎಂ ಆಯುರ್ವೇದ, ನ್ಯಾಚುರೋಪತಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪಡೆದ ಉತ್ತರ ಪ್ರದೇಶದ 300 ವಿದ್ಯಾರ್ಥಿಗಳು ನಮ್ಮ ವಿವಿಯಲ್ಲಿ ಸೂಕ್ತ ಸ್ಥಾನಮಾನವನ್ನು ಪಡೆಯಲಿದ್ದಾರೆ ಎಂದ ಯೋಗಿ ಆದಿತ್ಯನಾಥ್, ಕರ್ನಾಟಕವು ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ಈ ಸರ್ಕಾರದ ಕಾರ್ಯಕ್ರಮಗಳನ್ನು ರಾಜ್ಯವನ್ನು ಸಮೃದ್ಧಿ ಮತ್ತು ಸುರಕ್ಷಿತಗೊಳಿಸಲಿದೆ ಎಂದು ಆಶಿಸಿದರು.
ಮುಖ್ಯ ಅತಿಥಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಆರೋಗ್ಯ ಮತ್ತು ಕ್ಷೇಮ ಅತ್ಯಂತ ಪ್ರಮುಖ ಸಂಗತಿ ಎಂಬುದನ್ನು ನಮ್ಮ ಪೂರ್ವಜರು ಅರಿತಿದ್ದರು. ನಾವೀಗ ಇದನ್ನು ತಿರುವು ಮುರುವು ಮಾಡಿದ್ದೇವೆ. ಬೇಡವಾದುದ್ದನ್ನು ದೇಹಕ್ಕೆ ಸೇರಿಸಿಕೊಂಡು ಕಷ್ಟಪಡುತ್ತಿದ್ದೇವೆ. ದೇಹದೊಳಗಿನ ವಿಷಕಾರಿ ಅಂಶಗಳನ್ನು ಹೊರತೆಗೆದು ದೇಹ ಮತ್ತು ಮನಸ್ಸುಗಳಿಗೆ ಆರೋಗ್ಯ ನೀಡುವ ಕೆಲಸವನ್ನು ಕ್ಷೇಮವನ ಮಾಡಲಿದೆ. ಚಿಕಿತ್ಸೆಯಲ್ಲಿ ಧರ್ಮವನ್ನು ಸೇರಿಸುವ ಕ್ಷೇತ್ರ ಕ್ಷೇಮವನ. ಈ ಕ್ಷೇಮವನ ಜೀವನದ ಸೂತ್ರವಾಗಲಿ ಎಂದು ಆಶಿಸಿದರು.
ಮನಸ್ಸು ಮತ್ತು ದೇಹದ ಉತ್ತಮ ಸ್ಥಿತಿಯೇ ಆರೋಗ್ಯ. ಸಂಯಮದ ಮನಸ್ಥಿತಿ ಅಗತ್ಯ. ಮನಸ್ಸು ಹತೋಟಿಯಲ್ಲಿದ್ದರೆ ಸ್ಥಿತಪ್ರಜ್ಞತೆಗೆ ದಾರಿಮಾಡಿಕೊಡುತ್ತದೆ. ವಾಸ್ತವವಲ್ಲದ್ದನ್ನು ದೇಹ ಮತ್ತು ಮನಸ್ಸಿನೊಳಗೆ ಬಿಟ್ಟುಕೊಳ್ಳದಿರುವುದೇ ಸ್ಥಿತಪ್ರಜ್ಞತೆ. ಸ್ಥಿತಪ್ರಜ್ಞತೆಯ ಸ್ಥಿತಿಗೆ ಕ್ಷೇಮವನ ಕೊಂಡೊಯ್ಯುತ್ತದೆ ಎಂದು ತಿಳಿಸಿದರಲ್ಲದೇ ಮಾನವನ ಪ್ರತಿ ಅಂಗಾಂಗ ಕ್ಷೇಮವಾಗಿರಬೇಕು. ದಿನಚರಿ ಅಶಿಸ್ತಿನಿಂದ ಕೂಡಿದ್ದರೆ ದೇಹ ಮತ್ತು ಮನಸ್ಸು ಶಿಥಿಲಗೊಳ್ಳುತ್ತದೆ. ಕ್ಷೇಮವನ ದೇಹ ಮತ್ತು ಮನಸ್ಸುಗಳ ಸಮತೋಲನ ಕಾಯುತ್ತದೆ ಎಂದರು.
ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಸಾನಿಧ್ಯವಹಿಸಿ, ಎಸ್‌ಡಿಎಂಇ ಸೊಸೈಟಿ ಅಧ್ಯಕ್ಷ ಡಾ. ಡಿ. ವೀರೇಂದ್ರ ಹೆಗ್ಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಚಿವರಾದ ಡಾ. ಕೆ. ಸುಧಾಕರ್, ಬೈರತಿ ಬಸವರಾಜ್, ನಾರಾಯಣ ಗೌಡ, ಎಸ್-ವ್ಯಾಸ ಯೋಗ ವಿವಿಯ ಕುಲಪತಿ ಡಾ. ಎಚ್.ಆರ್. ನಾಗೇಂದ್ರ, ಸಂಸದ ಬಿ.ಎನ್. ಬಚ್ಚೇಗೌಡ, ಶಾಸಕ ಡಾ. ಕೆ. ಶ್ರೀನಿವಾಸಮೂರ್ತಿ, ಹೇಮಾವತಿ ವಿ. ಹೆಗ್ಗಡೆ, ಎಸ್‌ಡಿಎಂಇ ಸೊಸೈಟಿ ಉಪಾಧ್ಯಕ್ಷ ಡಿ. ಸುರೇಂದ್ರ ಕುಮಾರ್, ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಮುಂತಾದವರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!