ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸ ದಿಗಂತ ಆನ್ ಲೈನ್ ಡೆಸ್ಕ್
ಕರ್ನಾಟಕ ಸೇರಿದಂತೆ ಆರು ರಾಜ್ಯಗಳ ಮುಖ್ಯಮಂತ್ರಿಗಳ ಜತೆ ನಡೆಸಿದ ವಿಡಿಯೋ ಸಂವಾದದಲ್ಲಿ, ಕೊರೋನಾ ಹರಡುವಿಕೆ ತಡೆಗೆ ಟೆಸ್ಟ್ ಟ್ರಾಕ್, ಟ್ರೀಟ್, ಟೀಕಾ ಎಂಬ ಮಂತ್ರವನ್ನು ಪ್ರಧಾನಿ ನರೇಂದ್ರ ಮೋದಿ ಮರು ನೆನಪಿಸಿದರು. ಕರೋನಾ ಅಲೆ ಮುಗಿದಿದೆ ಎಂಬ ತೀರ್ಮಾನಕ್ಕೆ ಬರದೇ ರೋಗಪತ್ತೆ, ಚಿಕಿತ್ಸೆ ಹಾಗೂ ಲಸಿಕೆ ಇವುಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂಬುದು ಅವರ ಇಂಗಿತವಾಗಿತ್ತು.
ಮಹಾರಾಷ್ಟ್ರ ಮತ್ತು ಕೇರಳಗಳಲ್ಲಿ ಪ್ರಕರಣಗಳ ಸಂಖ್ಯೆ ಇಳಿಕೆಯಾಗದಿರುವುದು ಪ್ರಧಾನಿ ನರೇಂದ್ರಮೋದಿ ಅವರಲ್ಲಿ ಕಳವಳ ತಂದಿರುವುದು ಸ್ಪಷ್ಟವಾಗಿತ್ತು. ಪರಿಣತರ ಪ್ರಕಾರ ಎರಡನೆ ಅಲೆ ಪ್ರಾರಂಭವಾದ ರಾಜ್ಯಗಳಲ್ಲೇ ಮೊದಲಿಗೆ ಅದರ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾಗಬೇಕು. ಆದರೆ ಎರಡನೆ ಅಲೆಯ ಪ್ರಾರಂಭದ ರಾಜ್ಯಗಳಾಗಿದ್ದ ಇವೆರಡರಲ್ಲೂ ಪ್ರಕರಣಗಳ ಸಂಖ್ಯೆ ಕುಸಿದಿಲ್ಲ ಎಂಬುದು ಅವರ ಆತಂಕವಾಗಿತ್ತು.
ಸಭೆಯಲ್ಲಿ ಪಾಲ್ಗೊಂಡಿದ್ದ ಕೇಂದ್ರ ಗೃಹ ಸಚಿವರು ಈ ಆರು ರಾಜ್ಯಗಳು ಜುಲೈನಲ್ಲಿ ವರದಿಯಾಗುತ್ತಿರುವ ದೇಶದ ಒಟ್ಟಾರೆ ಪ್ರಕರಣಗಳ ಶೇ.80 ಪಾಲು ಹೊಂದಿವೆ ಎಂಬುದನ್ನು ಉಲ್ಲೇಖಿಸಿದರು.
ಕಳೆದ ವಾರದ ಶೇ. 80ರಷ್ಟು ಪ್ರಕರಣಗಳು ಹಾಗೂ ಶೇ. 84ರಷ್ಟು ಸಾವುಗಳು ಸಭೆಯಲ್ಲಿ ಭಾಗವಹಿಸುತ್ತಿರುವ ಈ ಆರು ರಾಜ್ಯಗಳಿಂದಲೇ ವರದಿಯಾಗಿವೆ ಎಂಬಂಶವನ್ನು ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದಾರೆ.
ಆರೂ ರಾಜ್ಯಗಳ ಲಸಿಕೆ ಪ್ರಗತಿಯನ್ನು ಪರಾಮರ್ಶಿಸಿದ ಪ್ರಧಾನಿ, “ಅನ್ಲಾಕ್ ನಂತರ ಕಂಡುಬರುತ್ತಿರುವ ದೃಶ್ಯಗಳು ಚಿಂತೆಗೀಡುಮಾಡುವಂತಿವೆ. ಕಳೆದ ಜನವರಿ- ಫೆಬ್ರವರಿಯಲ್ಲೂ ಹೀಗೆಯೇ ಆಗಿತ್ತು. ಆದ್ದರಿಂದ ಮೂರನೇ ಅಲೆಯನ್ನು ತಡೆಯುವುದಕ್ಕೆ ಎಲ್ಲ ಕ್ರಮಗಳನ್ನೂ ತೆಗೆದುಕೊಳ್ಳಬೇಕು. ಪ್ರಕರಣಗಳು ಬಹುಸಮಯದವರೆಗೆ ಇಳಿಯದೇ ಇದ್ದರೆ ವೈರಸ್ ರೂಪಾಂತರ ಹೊಂದುವುದಕ್ಕೆ ಅನುಕೂಲವಾಗಿಬಿಡುತ್ತದೆ ಎಂಬ ಪರಿಣತರ ಎಚ್ಚರಿಕೆ ಗಮನದಲ್ಲಿಟ್ಟುಕೊಂಡು ಪ್ರಕರಣಗಳನ್ನು ತಗ್ಗಿಸಲೇಬೇಕಿದೆ” ಎಂಬ ಗಂಭೀರ ಮಾತುಗಳನ್ನಾಡಿದ್ದಾರೆ ಪ್ರಧಾನಿ ಮೋದಿ.
ಇತ್ತೀಚೆಗೆ ಘೋಷಿಸಿರುವ 23,000 ಕೋಟಿ ರುಪಾಯಿಗಳ ಕೋವಿಡ್ ಪ್ಯಾಕೇಜ್ ಉಪಯೋಗಿಸಿಕೊಂಡು ಆರೋಗ್ಯ ವ್ಯವಸ್ಥೆಯಲ್ಲಿರುವ ಎಲ್ಲ ಮೂಲಸೌಕರ್ಯ ದೋಷಗಳನ್ನು ಸರಿಪಡಿಸಿಕೊಳ್ಳಬೇಕು ಎಂದು ರಾಜ್ಯಗಳಿಗೆ ಆಗ್ರಹಿಸಿದ್ದಾರೆ ಪ್ರಧಾನಿ ಮೋದಿ.
ಸಭೆಯಲ್ಲಿರುವ ಆರು ರಾಜ್ಯಗಳ ಪಾಲಿಗೆ ಒಟ್ಟೂ 332 ಆಮ್ಲಜನಕ ಘಟಕಗಳು ಜಾರಿಯಾಗಿವೆ. ಆದರೆ ಈವರೆಗೆ ಆ ಪೈಕಿ 53ನ್ನು ಮಾತ್ರ ಶುರುಮಾಡುವುದಕ್ಕೆ ತಯಾರಿ ಮಾಡಿಕೊಳ್ಳಲಾಗಿದೆ. ಉಳಿದವುಗಳನ್ನೂ ತ್ವರಿತವಾಗಿ ಸಾಕಾರಗೊಳಿಸಲು ಆಯಾ ರಾಜ್ಯದ ಮುಖ್ಯಮಂತ್ರಿಗಳು ಗಮನ ನೀಡಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಯುರೋಪ್, ಅಮೆರಿಕ, ಬಾಂಗ್ಲಾದೇಶ, ಇಂಡೊನೇಷ್ಯ ಮುಂತಾದ ದೇಶಗಳಲ್ಲಿ ಮತ್ತೆ ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳು ನಮಗೆ ಎಚ್ಚರಿಕೆಯಾಗಬೇಕು, ಕೊರೋನಾ ಮುಗಿಯಿತು ಎಂಬಂತೆ ಇರುವುದು ಬೇಡ ಎಂಬ ಎಚ್ಚರಿಕೆ ಪ್ರಧಾನಿಯವರದ್ದು.