ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಮಾದಕದ್ರವ್ಯ ನಿಯಂತ್ರಣ ದಳ (ಎನ್ಸಿಬಿ)ದ ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಮತ್ತು ಅವರ ಕುಟುಂಬ ಸದಸ್ಯರ ತೇಜೋವಧೆಯಲ್ಲಿ ತೊಡಗಿರುವ ಮಹಾರಾಷ್ಟ್ರದ ಸಚಿವ ನವಾಬ್ ಮಲಿಕ್ ವಿರುದ್ಧ ,ವಾಂಖೆಡೆ ಅವರ ಸಹೋದರಿ ಯಾಸ್ಮೀನ್ ವಾಂಖೆಡೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಸಚಿವ ನವಾಬ್ ಮಲಿಕ್ , ಸಾಮಾಜಿಕ ಮಾಧ್ಯಮಗಳಲ್ಲೂ ತಮ್ಮ ಕುಟುಂಬವನ್ನು ಗುರಿ ಮಾಡುತ್ತಿದ್ದಾರೆ. ಕುಟುಂಬ ಮಾಲ್ಡೀವ್ಸ್ ಪ್ರವಾಸಗೈದುದನ್ನು “ವಸೂಲಿ ಪ್ರವಾಸ”ಎಂದು ಸುಳ್ಳು ಆರೋಪ ಮಾಡಿದ್ದಾರೆ. ಈ ಮೂಲಕ ಅವರು ತಮ್ಮ ಕುಟುಂಬದ ಗೌರವಕ್ಕೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಆರೋಪಿಸಿ ಯಾಸ್ಮೀನ್ ವಾಂಖೆಡೆ ಅವರು ಓಶಿವಾರಾ ಪೊಲೀಸರಿಗೆ ದೂರು ನೀಡಿದ್ದಾರೆ.
ನನ್ನನ್ನು ಆನ್ಲೈನ್ನಲ್ಲಿ ಹಿಂಬಾಲಿಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಾದ ಇನ್ಸ್ಟಾಗ್ರಾಂ ಮತ್ತು ಫೇಸ್ಬುಕ್ಗಳಲ್ಲಿ ಇತ್ತೀಚೆಗೆ ನಾನು ಪೋಸ್ಟ್ ಮಾಡಿದ್ದ ನನ್ನ ವೈಯಕ್ತಿಕ ಫೋಟೋಗಳನ್ನು ಅಕ್ರಮವಾಗಿ ಮಾಧ್ಯಮದವರಿಗೆ ನೀಡುತ್ತಿದ್ದಾರೆ ಎಂದು ಯಾಸ್ಮೀನ್ ದೂರಿನಲ್ಲಿ ತಿಳಿಸಿದ್ದಾರೆ.
ಕಳೆದ ವಾರ ಯಾಸ್ಮೀನ್ ಅವರಿಂದ ದೂರು ಸ್ವೀಕರಿಸಿದ್ದು, ಇಲ್ಲಿಯವರೆಗೂ ಯಾರ ವಿರುದ್ಧವೂ ಪ್ರಕರಣ ದಾಖಲಾಗಿಲ್ಲ ಎಂದು ಓಶಿವಾರಾ ಪೊಲೀಸ್ ಠಾಣಾ ಅಧಿಕಾರಿ ತಿಳಿಸಿದ್ದಾರೆ. ಆದರೆ ಯಾಕೆ ಪ್ರಕರಣ ದಾಖಲಾಗಿಲ್ಲ ಎಂಬುದಕ್ಕೆ ಕಾರಣ ನೀಡಿಲ್ಲ.
ಮುಂಬೈ ಕ್ರೂಸ್ ಡ್ರಗ್ ಪ್ರಕರಣದಲ್ಲಿ ಬಂಧಿತನಾದ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಮತ್ತು ಸಹಚರರ ಪ್ರಕರಣವನ್ನು ಬಳಸಿಕೊಂಡು ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಎನ್ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಅವರ ವಿರುದ್ಧ ನಿರಂತರ ಆರೋಪ ಮಾಡುತ್ತಿರುವುದನ್ನು ಇಲ್ಲಿ ಸ್ಮರಿಸಬಹುದು. ಕಳೆದ ಜನವರಿಯಲ್ಲಿ ಮಾದಕ ದ್ರವ್ಯ ಪ್ರಕರಣವೊಂದರಲ್ಲಿ ಸಚಿವ ನವಾಬ್ ಮಲಿಕ್ ಅಳಿಯ ಸಮೀರ್ ಖಾನ್ ಮತ್ತು ಸಹಚರರನ್ನು ಸಮೀರ್ ವಾಂಖೆಡೆ ನೇತೃತ್ವದ ಎನ್ಸಿಬಿ ತಂಡ ಬಂಸಿದ ಬಳಿಕ ನವಾಬ್ ಮಲಿಕ್ ಸಮೀರ್ ವಾಂಖೆಡೆ ವಿರುದ್ಧ ದ್ವೇಷಸಾಧಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.