Monday, August 8, 2022

Latest Posts

ಮಹಾಶಿವರಾತ್ರಿ: ಶಿವಾಲಯಗಳಲ್ಲಿ ವಿಶೇಷ ಪೂಜೆ, ಜಾಗರಣೆಗೆ ಸಿದ್ಧತೆ

ಹೊಸ ದಿಗಂತ ವರದಿ, ಕೋಲಾರ:

ಮಹಾಶಿವರಾತ್ರಿ ಅಂಗವಾಗಿ ನಗರದ ಶಿವಾಲಯಗಳಲ್ಲಿ ಮೂಂಜಾನೆಯಿಂದಲೇ ಅಭಿಷೇಕ,ವಿಶೇಷ ಪೂಜೆ, ಹೂವಿನ ಅಲಂಕಾರ ಮಾಡಲಾಗಿದ್ದು, ರಾತ್ರಿ ಜಾಗರಣೆಯ ಯಾಮಪೂಜೆಗೆ ಸಿದ್ದತೆ ನಡೆದಿತ್ತು.
ಇಲ್ಲಿನ ಇತಿಹಾಸ ಪ್ರಸಿದ್ದ ಸೋಮೇಶ್ವರಸ್ವಾಮಿ ದೇವಾಲಯ, ಪುರಾಣ ಪ್ರಸಿದ್ದ ದಕ್ಷಿಣ ಕಾಶಿ ಅಂತರಗಂಗೆಯ ಕಾಶಿ ವಿಶ್ವೇಶ್ವರಸ್ವಾಮಿ ದೇವಾಲಯ, ಜಲಕಂಠೇಶ್ವರಸ್ವಾಮಿ ದೇವಾಲಯ, ನಗರದ ದೊಡ್ಡಪೇಟೆಯ ನಂಜುಂಡೇಶ್ವರಸ್ವಾಮಿ, ಕಾಳಮ್ಮ ಗುಡಿ ರಸ್ತೆಯ ಕಾಳಿಕಾಂಬ ಕಮ್ಮಟೇಶ್ವರಸ್ವಾಮಿ ದೇವಾಲಯಗಳು ಸೇರಿದಂತೆ ನಗರ ಮತ್ತು ಸುತ್ತಮುತ್ತಲ ಗ್ರಾಮಗಳ ಶಿವಾಲಯಗಳಲ್ಲಿ ವಿಶೇಷ ಪೂಜೆ ಇಡೀ ದಿನ ನಡೆದಿತ್ತು.
ಶಿವರಾತ್ರಿ ಎಂದರೆ ಜನರು ಶ್ರದ್ಧೆಯಿಂದ ಉಪವಾಸವ್ರತ ಆಚರಿಸುವ ಅತಿ ಪ್ರಮುಖ ದಿನವಾಗಿದ್ದು, ದೇವಾಲಯಗಳಿಗೆ ಸಾವಿರಾರು ಸಂಖ್ಯೆಯಲ್ಲಿ ಜನತೆ ಧಾವಿಸಿದ್ದು ಕಂಡು ಬಂತು.

ಸೋಮೇಶ್ವರಸ್ವಾಮಿಗೆ ವಿಶೇಷ ಅಲಂಕಾರ
ಮಹಾಶಿವರಾತ್ರಿ ಅಂಗವಾಗಿ ನಗರದ ಇತಿಹಾಸ ಪ್ರಸಿದ್ದ ಸೋಮೇಶ್ವರಸ್ವಾಮಿ ದೇವಾಲಯಕ್ಕೆ ಮುಂಜಾನೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಭಕ್ತರ ದಂಡು ಧಾವಿಸಿದ್ದರಿಂದಾಗಿ ದೇವಾಲಯಗಳಲ್ಲಿ ಉದ್ದುದ್ದು ಸರದಿ ಸಾಲುಗಳು ಕಂಡು ಬಂತು.
ಶಿವರಾತ್ರಿ ಅಂಗವಾಗಿ ಸ್ವಾಮಿಗೆ ವಿಶೇಷ ರೀತಿಯಲ್ಲಿ ಹೂವಿನ ಅಲಂಕಾರ ಮಾಡಲಾಗಿದ್ದು, ರಾತ್ರಿ ಜಾಗರಣೆಯ ಯಾಮ ಪೂಜೆಗೆ ಸಿದ್ದತೆ ನಡೆದಿತ್ತು.

ನಿಂಬೆ ದೀಪಗಳ ಬೆಳಗಿದ ಸ್ತ್ರೀಯರು
ಸೋಮೇಶ್ವರಸ್ವಾಮಿ ದೇವಾಲಯದಲ್ಲಿ ಕಾರ್ತಿಕ ಮಾಸದ ಸೋಮವಾರಗಳು ಮತ್ತು ಶಿವರಾತ್ರಿಯ ದಿನಗಳಂದು ಶಿವನ ಮುಂದಿನ ಬೃಹತ್ ನಂದಿಯ ಬಳಿ ನಿಂಬೆದೀಪ ಬೆಳಗುವ ಪದ್ದತಿ ನೂರಾರು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ.
ನಿಂಬೆ ದೀಪಗಳನ್ನು ಬೆಳಗಿದರೆ ನಮ್ಮ ಬಾಳಿನ ಕತ್ತಲು ಮಾಯವಾಗಿ ಬೆಳಕು ಮೂಡುತ್ತದೆ, ಸಂಕಷ್ಟಗಳಿಗೆ ಪರಿಹಾರ ಸಿಗುತ್ತದೆ ಎಂಬುದು ಕೋಲಾರ ಮತ್ತು ಸುತ್ತಮುತ್ತಲ ಗ್ರಾಮಗಳ ನಾಗರೀಕರ ನಂಬಿಕೆಯಾಗಿದ್ದು, ಇಂದೂ ಸಹಾ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ನಿಂಬೆ ದೀಪ ಬೆಳಗಿ ಪೂಜೆ ಸಲ್ಲಿಸಿದರು.
ಸೋಮೇಶ್ವರಸ್ವಾಮಿ ದೇವಾಲಯದಲ್ಲಿ ಪ್ರಧಾನ ಅರ್ಚಕರಾದ ಶ್ರೀ ಸೋಮಶೇಖರ್ ದೀಕ್ಷಿತ್, ವಿನಯ್ ದೀಕ್ಷಿತ್, ಕಾರ್ತಿಕ್ ದೀಕ್ಷಿತ್ ರವರು ದೇವತಾ ಕಾರ್ಯಗಳನ್ನು ನೆರವೇರಿಸಿದರು.

ಅಂತರಗಂಗೆಯಲ್ಲೂ ವಿಶೇಷ ಪೂಜೆ
ದಕ್ಷಿಣ ಕಾಶಿ ಎಂದೇ ಖ್ಯಾತಿಯಾಗಿರುವ ಕೋಲಾರದ ಅಂತರಗಂಗೆ ಬೆಟ್ಟದಲ್ಲಿ ಕಾಶಿವಿಶ್ವೇಶ್ವರಸ್ವಾಮಿ ಹಾಗೂ ಬೆಟ್ಟದ ತಪ್ಪಲಲ್ಲಿರುವ ಜಲಕಂಠೇಶ್ವರ ಸ್ವಾಮಿ ದೇವಾಲಯಗಳಲ್ಲೂ ವಿಶೇಷ ಪೂಜೆ ನಡೆದಿದ್ದು, ಪಾರಣೆಯಾದ ಶುಕ್ರವಾರ ಅಂತರಗಂಗೆಯ ಕಾಶಿವಿಶ್ವೇಶ್ವರ ಸ್ವಾಮಿ ಲಿಂಗಕ್ಕೆ ಸೂರ್ಯನ ಮೊದಲ ಕಿರಣಗಳ ಅಭಿಷೇಕವಾಗಲಿದ್ದು, ದೇವಾಲಯದಲ್ಲಿ ಭಕ್ತರ ಆಗಮನಕ್ಕೆ ಸಿದ್ದತೆ ನಡೆದಿದೆ.
ದೇವಾಲಯಗಳಿಗೆ ಬರುವ ಭಕ್ತರು ಇಂದು ಶಿವರಾತ್ರಿ ಪ್ರಯುಕ್ತ ಉಪವಾಸ ವ್ರತ ಆಚರಿಸುವ ಕಾರಣ ಹಲವು ದೇವಾಲಯಗಳ ಬಳಿ ಭಕ್ತರಿಗೆ ನಿಂಬೆ ಹಣ್ಣಿನ ರಸ, ಪಾನಕ,ಮಜ್ಜಿಗೆ ವಿತರಿಸುವ ಕಾರ್ಯವೂ ನಡೆಯಿತು.
ನಗರದ ದೊಡ್ಡಪೇಟೆಯ ಪ್ರಸಿದ್ದ ನಂಜುಂಡೇಶ್ವರ ಸ್ವಾಮಿ ದೇವಾಲಯದಲ್ಲೂ ಇಂದು ವಿಶೇಷ ಪೂಜೆ ನಡೆದಿದ್ದು, ಮುಂಜಾನೆಯಿಂದಲೇ ಭಕ್ತರ ಸಾಲು ಕಂಡು ಬಂತು.

ಉಪವಾಸ ವ್ರತಕ್ಕೆ ಹುರಿಹಿಟ್ಟು ಪ್ರಸಾದ
ಜಿಲ್ಲೆಯಲ್ಲಿ ಶಿವರಾತ್ರಿ ಆಚರಣೆಯಲ್ಲಿ ವಿಶೇಷತೆ ಇದ್ದು, ಯಾರ ಮನೆಯಲ್ಲೂ ಇಂದು ಅನ್ನ,ಊಟ ಮಾಡುವುದೇ ಇಲ್ಲ, ಇಡೀ ದಿನ ಉಪವಾಸ ವ್ರತ ಮಾಡುವ ಕಾಯಕ ನಡೆದುಕೊಂಡು ಬಂದಿದೆ.
ಆದರೆ ಉಪವಾಸ ಇರುವಾಗ ಮನೆಯಲ್ಲಿ ರಾಗಿ,ಸಾಮೆಯನ್ನು ಉರಿದು, ಹುರಿಹಿಟ್ಟು ಮಾಡಿ ಪಾನಕ,ಹಿಟ್ಟು ಮಾಡಿ ತಿನ್ನುವ ಪರಿಪಾಟ ನಡೆದುಕೊಂಡು ಬಂದಿದೆ.
ಶುಕ್ರವಾರ ಪಾರಣೆಯಾಗಿದ್ದು, ಮುಂಜಾನೆಯೇ ಹಬ್ಬದ ಅಡುಗೆ ಮಾಡಿ ಬೆಳಗ್ಗೆ ೭ ಗಂಟೆ ವೇಳೆಗೆಲ್ಲಾ ಊಟ ಮಾಡಿ ಸಂಭ್ರಮಿಸುವ ಪದ್ದತಿ ಬಹುಕಾಲದಿಂದಲೂ ನಡೆದುಕೊಂಡು ಬಂದಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss