Sunday, June 26, 2022

Latest Posts

ಪುಂಡಾಟಿಕೆ ನಡೆಸುವ ಎಲ್ಲರನ್ನ ಗಡಿಪಾರು ಮಾಡಬೇಕು: ಮಹೇಶ್ ಜೋಷಿ ಆಗ್ರಹ

ದಿಗಂತ ವರದಿ ಮಂಗಳೂರು:

ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ ನಡೆಸುತ್ತಿರುವುದು ದೇಶದ್ರೋಹಿ ಕಾರ್ಯ. ಇಂತಹಾ ದೇಶದ್ರೋಹಿ ಕೆಲಸ ಮಾಡುವವರ ವಿರುದ್ಧ ನಿರ್ದಾಕ್ಷ್ಯಿಣ್ಯವಾಗಿ ಗೂಂಡಾ ಕಾಯ್ದೆ ಹೇರಬೇಕು. ಪುಂಡಾಟಿಕೆ ನಡೆಸುವ ಎಲ್ಲರನ್ನು ಗಡಿಪಾರು ಮಾಡಬೇಕು, ಎಂಇಎಸ್ ಸಂಘಟನೆಯನ್ನು ನಿಷೇಧಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಮಹೇಶ್ ಜೋಷಿ ಆಗ್ರಹಿಸಿದರು.

ಬೆಳಗಾವಿಯಲ್ಲಿ ಎಂಇಎಸ್ ಕಾರ್‍ಯಕರ್ತರು ಮಾಡಿದ ದುಷ್ಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ. ಬುಧವಾರ ನಾನು ಬೆಳಗಾವಿಗೆ ತೆರಳುತ್ತೇನೆ. ಅಲ್ಲಿ ಸಮಸ್ಯೆ ಯಾಕೆ ಸಮಸ್ಯೆ ಆಗುತ್ತಿದೆ ಎಂಬುದನ್ನು ಅರಿತು ಪರಿಹಾರ ರೂಪಿಸಲು ಪ್ರಯತ್ನಿಸುತ್ತೇನೆ. ಅದಕ್ಕಾಗಿ ಕನ್ನಡ- ಮರಾಠಿ ಭಾಷೆ ಬಲ್ಲವರ ಸಮಿತಿಯೊಂದನ್ನು ನಿವೃತ್ತ ನ್ಯಾಯಾಧೀಶರಾದ ಎಸ್.ಆರ್. ಬನ್ನೂರುಮಠ ಅವರ ನೇತೃತ್ವದಲ್ಲಿ ರಚಿಸಲಾಗುತ್ತಿದೆ. ಸೈನ್ಯದ ನಿವೃತ್ತ ಅಧಿಕಾರಿಗಳು, ಸಾಹಿತಿಗಳು, ಮಠಾಧೀಶರು ಸಮಿತಿಯಲ್ಲಿ ಸದಸ್ಯರಾಗಿ ಇರಲಿದ್ದಾರೆ ಎಂದು ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಆರು ರಾಜ್ಯಗಳೊಂದಿಗೆ ಕರ್ನಾಟಕ ಗಡಿ ಹಂಚಿಕೊಂಡಿದ್ದು, ಒಂದೊಂದು ಗಡಿಯಲ್ಲೂ ಒಂದೊಂದು ರೀತಿಯ ಸಮಸ್ಯೆಗಳು ಇದೆ. ವಿಶೇಷವಾಗಿ ಮೊದಲು ಬೆಳಗಾವಿ ಸಮಸ್ಯೆ ಪರಿಹರಿಸಿ, ಬಳಿಕ ಉಳಿದ ಗಡಿ ಭಾಗದ ಸಮಸ್ಯೆಗಳ ಕುರಿತು ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತದೆ ಎಂದರು.
ರಾಜ್ಯದಲ್ಲಿ ಈಗಾಗಲೇ ಜಾರಿಗೆ ಬಂದಿರುವ ಹೊಸ ಶಿಕ್ಷಣ ನೀತಿಯಲ್ಲಿ ಕನ್ನಡ ಭಾಷೆಯನ್ನು ವಿದ್ಯಾರ್ಥಿಗಳಿಗೆ ಕಲಿಸುವ ವಿಚಾರದಲ್ಲಿ ಹೈಕೋರ್ಟ್ ನೀಡಿದ ತೀರ್ಪಿನ ವಿಚಾರವಾಗಿ ನಿವೃತ್ತ ನ್ಯಾಯಾಧೀಶ ಅರಳಿ ನಾಗರಾಜ್ ಅವರಲ್ಲಿ ಮಾತುಕತೆ ನಡೆಸಲಾಗಿದೆ. ಈ ಕುರಿತಾಗಿ ವರದಿ ನೀಡುವಂತೆ ಅವರಲ್ಲಿ ಕೇಳಿಕೊಂಡಿದ್ದೇವೆ. ಈ ಬಳಿಕ ಸಾಧಕ ಬಾಧಕಗಳನ್ನು ನೋಡಿಕೊಂಡು ವರದಿಯನ್ನು ಆಧರಿಸಿಕೊಂಡು ಕಸಾಪ ಹೈಕೋರ್ಟ್‌ಗೆ ತೆರಳುವ ವಿಚಾರದಲ್ಲಿ ಚಿಂತನೆ ಮಾಡುತ್ತಿದೆ ಎಂದರು.

ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಒಟ್ಟು 3.40 ಲಕ್ಷ ಮಂದಿ ಸದಸ್ಯರು ಇದ್ದಾರೆ. ಇದನ್ನು ಐದು ವರ್ಷದ ಅವಧಿಯಲ್ಲಿ ಒಂದು ಕೋಟಿಗೆ ಏರಿಸುವ ಗುರಿ ಹೊಂದಲಾಗಿದೆ. ಈಗಾಗಲೇ ಪಟ್ಟಿಯಲ್ಲಿರುವ ಮೃತಪಟ್ಟವರ ಹೆಸರುಗಳನ್ನು ಕಸಾಪ ತೆಗೆಯುವ ಕಾರ್ಯ ಮಾಡಲಾಗುತ್ತದೆ. ಈಗಷ್ಟೇ ಜಿಲ್ಲೆಗೆ ಅಧ್ಯಕ್ಷರ ಆಯ್ಕೆ ನಡೆದಿದೆ ಇನ್ನು ಮುಂದೆ ತಾಲೂಕು ಅಧ್ಯಕ್ಷರ ಆಯ್ಕೆಯ ಬಳಿಕ ತಾಲೂಕು ಮಟ್ಟದಿಂದ ಸದಸ್ಯರ ಪಟ್ಟಿ ಪರಿಷ್ಕರಣೆ ನಡೆಯಲಿದೆ.
ಕಸಾಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಂ.ಪಿ. ಶ್ರೀನಾಥ್, ದ.ಕ.ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ, ಮೋಹನದಾಸ ಸುರತ್ಕಲ್ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss