ಹೊಸ ದಿಗಂತ ವರದಿ, ಶಿವಮೊಗ್ಗ:
ರಾಮ ಮಂದಿರ ನಿರ್ಮಾಣ ದೊಡ್ಡ ಸವಾಲೇ ಅಲ್ಲ. ಆದರೆ ಮಂದಿರವನ್ನು ಮಂದಿರವಾಗಿ ಉಳಿಸಿಕೊಳ್ಳುವುದೇ ನಮ್ಮ
ಮುಂದೆ ಇರುವ ದೊಡ್ಡ ಸವಾಲು ಎಂದು ರಾಮ ಮಂದಿರ ನಿರ್ಮಾಣ ಟ್ರಸ್ಟ್ ಸದಸ್ಯರೂ ಆಗಿರುವ ಉಡುಪಿ ಪೇಜಾವರ
ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.
ಜಿಲ್ಲಾ ಬ್ರಾಹ್ಮಣ ಮಹಾಸಭಾ ಆಯೋಜಿಸಿದ್ದ ಯಜುಸಂಹಿತಾ ಯಾಗದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದ ಅವರು,
ರಾಮ ಮಂದಿರ ನಿರ್ಮಾಣಕ್ಕೆ ಸಮಾಜ ದೊಡ್ಡ ಪ್ರಮಾಣದಲ್ಲಿ ದೇಣಿಗೆ ನೀಡಿದೆ. 2500 ಕೋಟಿ ರೂ.ಗಳಿಗೂ ಮಿಕ್ಕಿ ಹಣ
ಸಂಗ್ರಹ ಆಗಿದೆ. ಮಂದಿರ ನಿರ್ಮಾಣ ಕಾರ್ಯ ಆರಂಭವೂ ಆಗಿದೆ. ಸಂಪೂರ್ಣ ಜಿರ್ಣೋದ್ಧಾರ ಕಾರ್ಯ ನಡೆಯಲು ಇನ್ನು
ಮೂರೂವರೆ ವರ್ಷಗಳು ಬೇಕಾಗಬಹುದು. ಆದರೆ ಮಂದಿರ ನಿರ್ಮಾಣದ ನಂತರ ಹಿಂದೆ ಆದ ಹಾನಿ ಮತ್ತೆ ಆಗದಂತೆ ಹಿಂದೂ ಸಮಾಜ ಕಾರ್ಯಪ್ರವೃತ್ತ ಆಗಬೇಕಾಗಿದೆ ಎಂದು ಮಾರ್ಮಿಕವಾಗಿ ಎಚ್ಚರಿಸಿದರು.
ಹಿಂದುಗಳು ಉಳಿದರೆ, ಸನಾತನ ಧರ್ಮ, ಪರಂಪರೆ ಉಳಿದರೆ ಮಂದಿರ ಮಂದಿರವಾಗಿಯೇ ಉಳಿಯುತ್ತದೆ. ನಮ್ಮ ಸಮಾಜದ ಹೆಣ್ಣು ಮತ್ತು ಗಂಡು ಮಕ್ಕಳು ಪ್ರಲೋಭನೆಗೆ ಒಳಗಾಗಿ ಮತೀಯ ಪರಿವರ್ತನೆ ಆಗುತ್ತಿದ್ದಾರೆ. ಇವರುಗಳಿಂದಲೇ ಮುಂದೆ ಮಂದಿರಕ್ಕೆ ಹಾನಿ, ವಿರೂಪ ಆಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ ಎಂದರು.