Sunday, April 11, 2021

Latest Posts

ಭಾರತೀಯ ದಿನದರ್ಶಿಕೆ ರೂಪಿಸಿ ಹಂಚಿಕೆ: ಡಾ. ವಿನಾಯಕ ಭಟ್ ನೂತನ ಪ್ರಯತ್ನ

ದಿಗಂತ ವರದಿ, ಪುತ್ತೂರು

ಪಾಶ್ಚಿಮಾತ್ಯ ಸಂಸ್ಕೃತಿಯ ದಾಳಿಗೆ ಸಿಲುಕಿ ದೇಸೀಯ ಕಲ್ಪನೆಗಳು ಮರೆಯಾಗುತ್ತಿರುವ ಕುರಿತು ಸಾಕಷ್ಟು ಮಂದಿ ಕಳವಳ ವ್ಯಕ್ತಪಡಿಸುತ್ತಾರೆ. ಅಲ್ಲಿಲ್ಲಿ ಜಾಗೃತಿ ಮೂಡಿಸುವ ಪ್ರಯತ್ನಗಳನ್ನು ಕೆಲವರು ಮಾಡುವುದೂ ಇದೆ. ಆದರೆ ದೇಸೀಯವಾದ ವಿಚಾರವೊಂದಕ್ಕೆ ತನ್ನನ್ನು ತಾನು ಸಂಪೂರ್ಣವಾಗಿ ಒಪ್ಪಿಸಿಕೊಂಡು, ಆತ್ಮನಿರ್ಭರ ಭಾರತದ ಕನಸಿಗೆ ಅನುಗುಣವಾಗಿ ನಿರಂತರವಾಗಿ ಕಾರ‍್ಯನಿರ್ವಹಿಸುತ್ತಿರುವ ಕೆಲವೇ ಕೆಲವು ಮಂದಿಯಲ್ಲಿ ಪುತ್ತೂರಿನ ಡಾ. ವಿನಾಯಕ ಭಟ್ಟ ಗಾಳಿಮನೆ ಕೂಡ ಒಬ್ಬರು.

ಭಾರತೀಯ ದಿನದರ್ಶಿಕೆ
ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆ ಅಂಬಿಕಾ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ರಾಗಿರುವ ಇವರು ಭಾರತೀಯ ದಿನದರ್ಶಿಕೆಯನ್ನು (ತಾರೀಕು ಪಟ್ಟಿ) ರೂಪುಗೊಳಿಸಿ, ಸಾಮಾಜಿಕ ಮಾಧ್ಯಮದ ಮೂಲಕ ಪ್ರಸಾರ ಮಾಡುತ್ತಿದ್ದಾರೆ. ‘ಆಮ್ನಾಯಃ- ಭಾರತೀಯ ದಿನದರ್ಶಿಕಾ – ಗನ್ದವಹಸದನಮ್’ (ಗಾಳಿಮನೆ) ಹೆಸರಿನಲ್ಲಿ ಪ್ರತಿದಿನವೂ ತಪ್ಪದೆ ಆಯಾ ದಿನದ ದೇಸೀ ಕಲ್ಪನೆಯ ದಿನದರ್ಶಿಕೆಯನ್ನು ರೂಪಿಸಿ ಪಸರಿಸುತ್ತಿದ್ದಾರೆ.

ನಿರಂತರ ಕ್ರಮ
9 ತಿಂಗಳುಗಳಿಂದ ನಿರಂತರವಾಗಿ ಒಂದು ದಿನವೂ ದಿನವೂ ತಪ್ಪದಂತೆ ಡಾ. ವಿನಾಯಕ ಭಟ್ಟ ಈ ದಿನದರ್ಶಿಕೆಯನ್ನು ರೂಪಿಸುತ್ತಿದ್ದಾರೆ. ಹಾಗೆ ತಯಾರು ಮಾಡಿದ್ದನ್ನು ತನ್ನ ಪರಿಚಯಸ್ಥರ, ಸಂಬಂಧಿಗಳ, ವಿದ್ಯಾರ್ಥಿಗಳ ವಾಟ್ಸ್ ಆಪ್ ಗುಂಪಿನಲ್ಲಿ ಹಾಗೂ ಫೇಸ್‌ಬುಕ್‌ನಲ್ಲಿ ಪ್ರಕಟಿಸುವುದರ ಮೂಲಕ ದೇಸೀ ಕಲ್ಪನೆಯ ದಿನದರ್ಶಿಕೆಯೆಡೆಗೆ ಆಸಕ್ತಿ ಮೂಡಿಸುತ್ತಿದ್ದಾರೆ. ಪ್ರತಿದಿನ ಈ ದಿನದರ್ಶಿಕೆ ಕನಿಷ್ಠ ಎರಡು ಸಾವಿರದಷ್ಟು ಮಂದಿಗೆ ತಲಪುತ್ತಿದೆ ಎಂಬುದು ಗಮನಾರ್ಹ. ಜತೆಗೆ ಅನೇಕರು ತಮಗೆ ದೊರಕುತ್ತಿರುವ ಈ ಭಾರತೀಯ ದಿನದರ್ಶಿಕೆಯನ್ನು ತಮ್ಮ ವಲಯದಲ್ಲೂ ಹಂಚಿ ಡಾ. ವಿನಾಯಕ ಭಟ್ಟ ಅವರಿಗೆ ಬೆಂಬಲ ಸೂಚಿಸುತ್ತಿದ್ದಾರೆ. ತನ್ನ ದಿನದರ್ಶಿಕೆಯಲ್ಲಿ ಆಯಾ ದಿನವನ್ನು ಯಾವ ತಾರೀಕಿನೊಂದಿಗೆ ಗುರುತಿಸಲಾಗುತ್ತದೆ ಎಂಬ ಆಧುನಿಕ ಕ್ಯಾಲೆಂಡರ್‌ನ ದಿನಾಂಕವನ್ನೂ ನಮೂದಿಸುವುದರಿಂದ ಜನರಿಗೆ ಸುಲಭಕ್ಕೆ ಅರ್ಥ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿದೆ. ಹಾಗೆಯೇ ಭಾರತೀಯ ದಿನದರ್ಶಿಕೆಯನ್ನು ಕರಗತ ಮಾಡಿಕೊಳ್ಳುವುದಕ್ಕೂ ಇದು ಸಹಾಯ ಮಾಡುತ್ತಿದೆ.

ಯುಗಾದಿ ನಮ್ಮ ಹೊಸವರ್ಷ..
ಯುಗಾದಿ ನಮ್ಮ ಹೊಸವರ್ಷ ಎಂಬ ಅಭಿಯಾನವನ್ನೂ ಈ ದಿನದರ್ಶಿಕೆಯ ಮೂಲಕ ನಡೆಸಿಕೊಂಡು ಬರಲಾಗುತ್ತಿದೆ. ಜನವರಿ 1ರಂದು ಆಚರಿಸಲ್ಪಡುತ್ತಿರುವ ಹೊಸವರ್ಷದ ಕಲ್ಪನೆಯನ್ನು ನಮ್ಮ ಚಿಂತನೆಯಡಿ ಯುಗಾದಿಯಂದು ಆಚರಿಸಬೇಕೆನ್ನುವ ಉದ್ದೇಶದೊಂದಿಗೆ ಈ ಅಭಿಯಾನ ನಡೆಯುತ್ತಿದೆ. ತನ್ನ ಈ ಪ್ರಯತ್ನಕ್ಕೆ ಅವರ ಹೆತ್ತವರು, ಮಡದಿ, ಮಗಳು, ಗುರುವೃಂದ ಹಾಗೂ ಅಂಬಿಕಾ ಸಮೂಹ ಸಂಸ್ಥೆಗಳ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ಹಾಗೂ ಕೋಶಾಧಿಕಾರಿ ರಾಜಶ್ರೀ ನಟ್ಟೋಜ ನಿರಂತರ ಪ್ರೋತ್ಸಾಹ ನೀಡುತ್ತಿದ್ದಾರೆ ಎಂಬುದನ್ನು ಡಾ.ವಿನಾಯಕ ಭಟ್ಟ ನೆನಪಿಸಿಕೊಳ್ಳುತ್ತಾರೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss