ಹೊಸ ದಿಗಂತ ವರದಿ, ಮಂಗಳೂರು:
ಅನಧಿಕೃತ ದೇವಸ್ಥಾನಗಳಿದ್ದರೆ ಸರಕಾರ ಅದನ್ನು ಅಧಿಕೃತ ಮಾಡಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಹೇಳಿದರು.
ನಗರದಲ್ಲಿ ಶುಕ್ರವಾರ ಪೊಲೀಸ್ ಹುದ್ದೆ ಆಕಾಂಕ್ಷಿಗಳ ತರಬೇತಿ ಕಾರ್ಯಾಗಾರದ ಸಮಾರೋಪದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿದರು.
ಮೈಸೂರಿನ ನಂಜನಗೂಡು ದೇವಸ್ಥಾನ ಧ್ವಂಸ ಘಟನೆ ಹಿನ್ನೆಲೆಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ದೇವಸ್ಥಾನ ನಿರ್ಮಿಸುವಾಗ ಕಾನೂನು ಪ್ರಕಾರವೇ ನಿರ್ಮಾಣ ಮಾಡಬೇಕು. ಅನಧಿಕೃತ ರಚನೆಯಾಗಿದ್ದರೆ ಅದು ಯಾವಾಗಲೂ ಅಪಾಯ. ಅಂತಹ ದೇವಸ್ಥಾನಗಳಿದ್ದರೆ ಅದನ್ನು ಅಧಿಕೃತ ಮಾಡುವ ಬಗ್ಗೆ ಸರಕಾರ ಗಮನ ಹರಿಸಬೇಕು ಎಂದರು.
ದ.ಕ. ಜಿಲ್ಲೆಯಲ್ಲಿ ಯಾವುದೇ ಅನಧಿಕೃತ ದೇವಸ್ಥಾನಗಳಿಲ್ಲ. ಇರುವುದೆಲ್ಲವೂ ಅಧಿಕೃತ ದೇವಸ್ಥಾನ. ಒಂದು ವೇಳೆ ಅನಧಿಕೃತ ದೇವಸ್ಥಾನಗಳಿದ್ದರೂ, ಅದನ್ನು ಅಧಿಕೃತ ಮಾಡಬೇಕು ಎಂದು ಡಾ. ಹೆಗ್ಗಡೆ ಹೇಳಿದರು.