Tuesday, June 28, 2022

Latest Posts

ಮಲ್ಲಾಪುರ ಕೆರೆಯಲ್ಲಿ ರಾಶಿ ರಾಶಿ ಮೀನುಗಳ ಮಾರಣ ಹೋಮ

ಹೊಸ ದಿಗಂತ ವರದಿ, ಚಿತ್ರದುರ್ಗ:

ತಾಲ್ಲೂಕಿನ ಮಲ್ಲಾಪುರ ಕೆರೆಯಲ್ಲಿ ರಾಶಿ ರಾಶಿ ಮೀನುಗಳು ಮೃತಪಟ್ಟಿದ್ದು, ಕಣ್ಣು ಹಾಯಿಸಿದಷ್ಟು ದೂರ ಮೃತಪಟ್ಟ ಮೀನಿನ ರಾಶಿ ಕಾಣುತ್ತಿದೆ. ಇದರಿಂದಾಗಿ ಕೆರೆಯ ಸುತ್ತಮುತ್ತಲಿನ ಪ್ರದೇಶ ಕಲುಷಿತಗೊಂಡು ಉಸಿರುಗಟ್ಟಿಸುವ ವಾತಾವರಣ ನಿರ್ಮಾಣವಾಗಿದೆ.
ಕೆರೆಯಲ್ಲಿನ ಸಾವಿರಾರು ಮೀನುಗಳು ಇದ್ದಕ್ಕಿದ್ದಂತೆ ಸಾವನ್ನಪ್ಪಿದ್ದು, ಮಲ್ಲಾಪುರ ಗ್ರಾಮ ಹಾಗೂ ಸಮೀಪದ ಪಿಳ್ಳೆಕೇರನಹಳ್ಳಿಯವರೆಗೂ ಕೊಳಕು ವಾಸನೆ ಬೀರುತ್ತಿದೆ. ಕೆರೆ ಮಾರ್ಗದಿಂದ ನಗರಕ್ಕೆ ಬರುವವರು ಮೂಗು ಮುಚ್ಚಿಕೊಂಡು ಬರುವಂತಾಗಿದೆ.
ಸತ್ತು ಬಿದ್ದಿರುವ ಮೀನಿನ ರಾಶಿಯ ಚಿತ್ರಗಳು ಹಾಗೂ ವೀಡಿಯೋ ತುಣಕುಗಳು ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿದೆ. ರಾಶಿ ರಾಶಿ ಮೀನುಗಳು ಮೃತಪಟ್ಟಿರುವು ದೃಶ್ಯ ನೋಡುಗರ ಮನ ಕಲಕುವಂತಿದೆ. ರಾಶಿ ರಾಶಿ ಮೀನುಗಳ ಮಾರಣ ಹೋಮ ಕಂಡ ಅಕ್ಕಪಕ್ಕದ ಗ್ರಾಮಗಳ ಕೆಲವರು ಗಾಬರಿಗೊಂಡಿದ್ದಾರೆ. 2020ರ ಏಪ್ರಿಲ್ ಮೊದಲ ವಾರದಲ್ಲೂ ಇದೇ ರೀತಿ ಸಾವಿರಾರು ಮೀನುಗಳು ಕೆರೆಯಲ್ಲಿ ಮೃತಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.
ಮಲ್ಲಾಪುರ ಕೆರೆಗೆ ದಶಕಗಳಿಂದಲೂ ತ್ಯಾಜ್ಯದ ರಾಶಿ, ಮಲೀನ ನೀರು ಸೇರಿಕೊಂಡು ಬಹುತೇಕ ಕಲುಷಿತಗೊಂಡಿದೆ. ಮೀನುಗಳು ಸಾವನ್ನಪ್ಪಲು ಇದು ಕೂಡ ಕಾರಣವೇ ಎಂಬ ಸಂಶಯ ವ್ಯಕ್ತವಾಗುತ್ತಿದೆ. ಕೆರೆ ಕಲುಷಿತಗೊಂಡಿದ್ದರೂ ಮೀನು ಉತ್ಪಾದನೆ ಹಾಗೂ ಸಾಕಾಣಿಕೆಗೆ ಬಳಕೆಯಾಗುತ್ತಿದೆ. ಸತ್ತು ಬಿದ್ದ ಮೀನುಗಳನ್ನು ನೋಡಿ ಗುತ್ತಿಗೆ ಪಡೆದವರು ಆತಂಕಕ್ಕೆ ಒಳಗಾಗಿದ್ದಾರೆ.
ಕಲುಷಿತ ನೀರು, ವಿಷಕಾರಕ ಪದಾರ್ಥಗಳ ಜತೆಗೆ ಬುಧವಾರ ರಾತ್ರಿ ಸುರಿದ ಮಳೆಯಿಂದಾಗಿ ಜೀವವಾಯುವಿನ ಕೊರತೆ ಉಂಟಾಗಿದೆ. ಇದರಿಂದ ಉಸಿರಾಟದ ತೊಂದರೆಯಿಂದಲೂ ಮೃತಪಟ್ಟಿರಬಹುದು ಎಂದು ಗ್ರಾಮದ ಕೆಲವರು ಶಂಕೆ ವ್ಯಕ್ತಪಡಿಸಿದ್ದಾರೆ.
ಯಾವ ಕಾರಣಕ್ಕಾಗಿ ಮೀನು ಮೃತಪಟ್ಟಿವೆ ಎಂಬುದನ್ನು ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ಖಚಿತಪಡಿಸಬೇಕಿದೆ. ಇದು ಸಹ ಸಾಂಕ್ರಾಮಿಕ ರೋಗದ ಭೀತಿ ಉಂಟುಮಾಡಿದೆ. ಅದನ್ನು ತಪ್ಪಿಸಲು ಕೂಡಲೇ ಮೃತ ಮೀನುಗಳನ್ನು ಹೊರಗೆ ತೆಗೆಸಬೇಕು. ಆ ಮೂಲಕ ಇಲ್ಲಿನ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗದಂತೆ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss