Sunday, April 11, 2021

Latest Posts

ಮಲ್ಲಾಪುರ ಕೆರೆ ಸ್ವಚ್ಛತಾ ಕಾರ್ಯಕ್ಕೆ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಚಾಲನೆ

ಹೊಸ ದಿಗಂತ ವರದಿ, ಚಿತ್ರದುರ್ಗ:

ತಾಲ್ಲೂಕಿನ ಮಲ್ಲಾಪುರದ ಕೆರೆಗೆ ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಹೆಚ್ಚಿನ ಅನುದಾನ ನೀಡುವ ಮೂಲಕ ಸ್ವಚ್ಚತಾ
ಕಾಮಗಾರಿ ನಡೆಸಬೇಕಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಈ ಕುರಿತು ಆಲೋಚನೆ ಮಾಡಲಾಗುವುದು ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ತಿಳಿಸಿದರು.
ತಾಲ್ಲೂಕಿನ ಮಲ್ಲಾಪುರ ಕೆರೆಯ ಬಳಿ ಮಳೆಗಾಲದಲ್ಲಿ ಕೆರೆ ಕೋಡಿ ಬಿದ್ದು ನೀರು ಹರಿದು ಗ್ರಾಮಕ್ಕೆ ತೊಂದರೆಯಾಗುವುದನ್ನು ತಪ್ಪಿಸುವ ಸಲುವಾಗಿ ಹಂಪಯ್ಯನ ಮಾಳಿಗೆ ಮತ್ತು ಮಲ್ಲಾಪುರ ಕೆರೆಯ ಬಳಿ ಪ್ರವಾಹ ನಿಯಂತ್ರಣ ಕೆರೆ ದುರಸ್ತಿ ಕಾಮಗಾರಿಗೆ ಬುಧವಾರ ಚಾಲನೆ ನೀಡಿ ಮಾತನಾಡಿದ ಅವರು, ಇಲ್ಲಿ ಬೃಹತ್ ಪ್ರಮಾಣದ ಕಾಮಗಾರಿ ನಡೆಸಬೇಕಿದೆ. ಹಾಗಾಗಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿಯಿಂದ ಕಾಮಗಾರಿ ನಡೆಸಲು ಆಗುವುದಿಲ್ಲ ಎಂದರು.
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿನ ಮಲ್ಲಾಪುರ, ಹಂಪಯ್ಯನ ಮಾಳಿಗೆ, ನಂದಿಪುರ ಹಾಗೂ ಹುಲ್ಲೂರು ಸಿಂಗಾಪುರ ಗ್ರಾಮಗಳಲ್ಲಿ ಕರೆ ನೀರಿನಿಂದ ಗ್ರಾಮಗಳು ಹಾಳಾಗದಂತೆ ತಡೆಗೋಡೆ ನಿರ್ಮಾಣ ಮಾಡಲು 2 ಕೋಟಿ ರೂ.ಗಳಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ಇದೇ ರೀತಿ ಹಂಪಯ್ಯನ ಮಾಳಿಗೆಯ ಬಳಿ ಸೇತುವೆಯೊಂದು ಶಿಥಿಲವಾಗಿದ್ದು, ಇದರಿಂದ ಸುತ್ತಮುತ್ತಲಿನ ಹಲವಾರು ಗ್ರಾಮಗಳ ಸಂಪರ್ಕಕ್ಕೆ ತೊಂದರೆಯಾಗಿದೆ. ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಮಲ್ಲಾಪುರದ ಕೆರೆಗೆ ಮಳೆ ನೀರು ಮಾತ್ರವಲ್ಲದೆ ನಗರದ ಚರಂಡಿಯ ನೀರು ಸಹ ಸೇರುತ್ತಿದೆ. ಇದರಿಂದ ನೀರು ಕಲುಷಿತವಾಗುತ್ತಿದೆ. ಇದನ್ನು ಸರಿಪಡಿಸಲು ಸ್ಥಳೀಯ ಸಂಸ್ಥೆಗಳಿಂದ ಸಾಧ್ಯವಿಲ್ಲ. ಇದಕ್ಕೆ ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಯಾವುದಾದರೂ ಬೃಹತ್ ಯೋಜನೆ ರೂಪಿಸಿ ಕಾಮಗಾರಿ ಪ್ರಾರಂಭಿಸಬೇಕು. ನಮ್ಮ ಇಂಜಿನಿಯರ್‌ಗಳು, ನಮ್ಮಲ್ಲಿನ ಯಂತ್ರಗಳಿಂದ ಸಾಧ್ಯವಿಲ್ಲ. ಇದರ ಸ್ವಚ್ಚತೆಗೆ ಆಧುನಿಕ ಯಂತ್ರ ಮತ್ತು ತಂತ್ರಜ್ಞಾನ ಬಳಕೆ ಮಾಡಬೇಕಿದೆ. ಇದರ ಬಗ್ಗೆಯೂ ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ತಾ.ಪಂ. ಮಾಜಿ ಅಧ್ಯಕ್ಷ ವೇಣುಗೋಪಾಲ್, ಗ್ರಾ.ಪಂ. ಮಾಜಿ ಸದಸ್ಯ ಕೃಷ್ಣಮೂರ್ತಿ, ಬೋಮ್ಮೇನಹಳ್ಳಿ ಪರಮೇಶಿ, ರೈತ ಮುಖಂಡ ಧನಂಜಯ, ತಿಪ್ಪೇಸ್ವಾಮಿ, ನಾಗರಾಜ್, ಕರಿಯಣ್ಣ, ಸತೀಶ್, ಗ್ರಾಮದ ಮುಖಂಡರಾದ ಜಯ್ಯಣ್ಣ, ಲಕ್ಷ್ಮೀದೇವಿ, ಸಾವಿತ್ರಮ್ಮ, ಗೀತಾ ಮತ್ತಿತರರು ಹಾಜರಿದ್ದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss