Saturday, August 13, 2022

Latest Posts

ಮಲ್ಲೇಗೌಡ ಜಿಲ್ಲಾ ಆಸ್ಪತ್ರೆಯ ಆಕ್ಸಿಜನ್ ಉತ್ಪಾದನಾ ಘಟಕ ಪೂರ್ಣ ಸನ್ನದ್ಧ: ಶಾಸಕ ಸಿ.ಟಿ.ರವಿ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸ ದಿಗಂತ ವರದಿ, ಚಿಕ್ಕಮಗಳೂರು: 

ನಗರದ ಮಲ್ಲೇಗೌಡ ಜಿಲ್ಲಾ ಆಸ್ಪತ್ರೆಯ ಆಕ್ಸಿಜನ್ ಉತ್ಪಾದನಾ ಘಟಕ ಸಂಪೂರ್ಣ ಸನ್ನದ್ಧವಾಗಿದ್ದು, ಜಿಲ್ಲೆಯು ಈ ವಿಚಾರದಲ್ಲಿ ಸ್ವಾವಲಂಬಿಯಾಗಿದೆ ಎಂದು ಶಾಸಕ ಸಿ.ಟಿ.ರವಿ ತಿಳಿಸಿದರು.
ಅವರು ಭಾನುವಾರ ನೂತನವಾಗಿ ಆಕ್ಸಿಜನ್ ಪ್ಲಾಂಟ್ ಪರಿಶೀಲಿಸಿ ಮಾತನಾಡಿ, ಪಿಎಂ ಕೇರ್ ನಿಧಿಯ ಅನುದಾನದಿಂದ 1.22 ಕೋಟಿ ವೆಚ್ಚದಲ್ಲಿ ಪ್ಲಾಂಟ್ ನಿರ್ಮಿಸಲಾಗಿದೆ. ಜಿಲ್ಲಾಸ್ಪತ್ರೆಗೆ ಬೇಕಾದ ಆಕ್ಸಿಜನ್ ಇಲ್ಲಿ ಉತ್ಪಾದಿಸಲಾಗುತ್ತದೆ. ಈಗಾಗಲೇ ಪ್ರಾಯೋಗಿಕವಾಗಿ ಚಾಲನೆಯನ್ನೂ ನೀಡಲಾಗಿದೆ. ಇಂದು ನಮಗೆ ಒಂದು ನಿಮಿಷಕ್ಕೆ 560 ಲೀ ಬೇಡಿಕೆ ಇದೆ. ಆದರೆ ಇಲ್ಲಿ 960 ಲೀ ಆಕ್ಸಿಜನ್ ಉತ್ಪಾದನೆಯಾಗುತ್ತದೆ ಎಂದರು.
ಹೆಚ್ಚುವರಿ ಉತ್ಪಾದನೆಯಾಗುತ್ತಿರುವುದರಿಂದ ಇನ್ನೂ ಹೆಚ್ಚುವರಿಯಾಗಿ ಐಸಿಯುಬೆಡ್, ವೆಂಟಿಲೇಟರ್ ಹಾಕಲು ಸಾಧ್ಯವಾಗುತ್ತದೆ. ಹಾಗಾಗಿ ಸ್ವಾವಲಂಬನೆಯನ್ನು ಸಾಧಿಸಲಾಗಿದೆ ಎಂದು ಹೇಳಿದರು.
ದೇಶದಲ್ಲಿ 2ಸಾವಿರ ಯೂನಿಟ್‍ಗಳನ್ನು ನೀಡಲಾಗಿದ್ದು ಏಕ ಕಾಲದಲ್ಲಿ ಉದ್ಘಾಟನೆ ಮಾಡುತ್ತಾರೆಂಬ ನೀರೀಕ್ಷೆಯಿದೆ. ನಗರದಲ್ಲಿ ಲಿಕ್ವಿಡ್ ಆಕ್ಸಿಜನ್ ಮತ್ತು ಇಲ್ಲಿಯೇ ತಯಾರಿಸುವ ಯೂನಿಟ್ ಹಾಕಲಾಗಿದೆ. ಮುಂದೆ ಎಂದಿಗೂ ಜಿಲ್ಲಾಸ್ಪತ್ರೆಗೆ ಆಕ್ಸಿಜನ್ ಕೊರತೆ ಬರುವುದಿಲ್ಲ ಎಂದು ಹೇಳಿದರು.
ಜಿಲ್ಲೆಯಲ್ಲಿ ಐಸಿಯು, ವೆಂಟೆಲೇಟರ್ ಬೇಡಿಕೆಗನುಗುಣವಾಗಿ ಚಿಕ್ಕಮಗಳೂರು, ಕೊಪ್ಪ, ಕಡೂರು ತಾಲೂಕು ಕೇಂದ್ರದಲ್ಲಿ ಪ್ಲಾಂಟ್ ನಿರ್ಮಿಸಲಾಗುತ್ತಿದೆ. ಜಿಲ್ಲಾಸ್ಪತ್ರೆಯ ಪ್ಲಾಂಟ್ ಪೂರ್ಣ ಪ್ರಮಾಣದಲ್ಲಿ ಸರ್ವ ಸಿದ್ದವಾಗಿದೆ ಎಂದರು.
ಮೊದಲನೆ ಅಲೆಯಲ್ಲಿ ಎಲ್ಲೂ ಆಕ್ಸಿಜನ್ ಬೇಡಿಕೆ ಇರಲಿಲ್ಲ. ಎರಡನೆ ಅಲೆಯಲ್ಲಿ ಅಚಾನಕ್ಕಾಗಿ ದೇಶದ ಉದ್ದಗಲಕ್ಕೂ ಆಕ್ಸಿಜನ್‍ಗೆ ಬೇಡಿಕೆಯಾಯಿತು. ಆರಂಭದಲ್ಲಿ ದೇಶ ವಿದೇಶಗಳಿಂದ ಟ್ಯಾಂಕರ್‍ಗಳು, ರೈಲ್ವೆ, ಹಡಗುಗಳ ಮೂಲಕ ಆಮದು ಮಾಡಿಕೊಂಡು ರೋಗಿಗಳಿಗೆ ಪೂರೈಕೆ ಮಾಡುವ ಪ್ರಯತ್ನ ಮಾಡಲಾಯಿತು. ಮುಂದೆ ಎಂದೂ ಆಕ್ಸಿಜನ್ ಸಮಸ್ಯೆ ತಲೆದೂರಬಾರದೆಂದು ಕೇಂದ್ರ ಸರ್ಕಾರದ ಪಿಎಂ ಕೇರ್‍ನಿಂದ ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಉತ್ಪಾದನಾ ಪ್ಲಾಂಟನ್ನು ಅನುಷ್ಠಾನಕ್ಕೆ ಮಂಜೂರಾತಿ ನೀಡಲಾಯಿತು ಎಂದು ಹೇಳಿದರು.
ಜಿಲ್ಲಾ ಸರ್ಜನ್ ಡಾ.ಮೋಹನ್‍ಕುಮಾರ್ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss