28 ವರ್ಷಗಳ ಬಳಿಕ ನಿರಪರಾಧಿ ಎಂದು ತೀರ್ಪು ಕೊಟ್ಟ ನ್ಯಾಯಾಲಯ: ಕಳೆದ ಹೋದ ಬದುಕಿಗೆ ಹೊಣೆ ಯಾರು..?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನೂರು ಜನ ಅಪರಾಧಿಗಳು ತಪ್ಪಿಸಿಕೊಂಡರೂ, ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು ಎಂಬುದು ಭಾರತ ನ್ಯಾಯಾಂಗದ ಸೂತ್ರ. ಆದರೆ ಈ ವ್ಯಕ್ತಿಯ ವಿಚಾರದಲ್ಲಿ ಅದು ತಪ್ಪಾಗಿದೆ. ಒಂದಲ್ಲಾ..ಎರಡಲ್ಲಾ ಬರೋಬ್ಬರಿ 28 ವರ್ಷಗಳು ಜೈಲು ಶಿಕ್ಷೆ ಅನುಭವಿಸಿದ ಮೇಲೆ ಆತ ನಿರಪರಾಧಿ ಎಂದು ಕೋರ್ಟ್‌ ಹೇಳಿದೆ. ನ್ಯಾಯಾಂಗದ ಆದೇಶ ಕೇಳಿ ಆ ವ್ಯಕ್ತಿ ಕಣ್ಣೀರು ಹಾಕಿದ್ದಾರೆ. ಮಾಡದ ತಪ್ಪಿಗೆ ಇಷ್ಟು ವರ್ಷ ಶಿಕ್ಷೆ ಅನುಭವಿಸಿದ್ದೇನೆ, ನನ್ನವರಿಂದ ದೂರವಾಗಿ ಕೊಲೆಗಡುಕ ಎಂಬ ಬಿರುದನ್ನು ಹೊತ್ತುಕೊಂಡು. ನನ್ನ ಅಮೂಲ್ಯವಾದ ಸಮಯವೆಲ್ಲಾ ನಾಲ್ಕು ಗೋಡೆಗಳ ಮಧ್ಯೆ ಕಳೆಯುವಂತೆ ಆಗಿದೆ ಎಂದು ಜಡ್ಜ್‌ ಮುಂದೆಯೇ ಗೋಳಾಡಿದ್ದಾರೆ.

ಈ ಘಟನೆ ನಡೆದಿರುವುದು ಉತ್ತರಪ್ರದೇಶದಲ್ಲಿ. ದೇವರಿಯಾ ಜಿಲ್ಲೆಯ ತಾಂಡ್ವಾ ಗ್ರಾಮದಲ್ಲಿ ವಾಸವಾಗಿದ್ದ ಬೀರ್ಬಲ್‌ ಭಗತ್‌ ಹಾಗೂ ಬಿಹಾರದ ಗೋಪಾಲ್‌ ಗಂಜ್‌ ಜಿಲ್ಲೆಯ ಸೂರ್ಯನಾರಾಯಣ ಇಬ್ಬರೂ ಪ್ರಾಣ ಸ್ನೇಹಿತರು. 1993 ಜೂನ್ 11ರಂದು ಇಬ್ಬರೂ ಆಚೆ ಹೋಗಿದ್ದಾರೆ. ಅಂದೇ ಸೂರ್ಯನಾರಾಯಣ ಕಾಣೆಯಾಗಿದ್ದಾನೆ. ಈ ಬಗ್ಗೆ ಅವರ ಪುತ್ರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನಿಖೆ ನಡೆಸಿದ ಪೊಲೀಸರು ಬೀರ್ಬಲ್‌ ತನ್ನ ಸ್ನೇಹಿತನನ್ನು ಕೊಲೆ ಮಾಡಿದ್ದಾನೆಂದು ಆರೋಪಿಸಿ ಜೈಲಿಗೆ ಕಳಿಸಿದ್ದಾರೆ.

28ವರ್ಷಗಳ ಬಳಿಕ ಮತ್ತೆ ವಿಚಾರಣೆ ನಡೆಸಿದ ಗೋಪಾಲಗಂಜ್ ಜಿಲ್ಲಾ ನ್ಯಾಯಾಲಯದ ನ್ಯಾಯಮೂರ್ತಿ ವಿಶ್ವಭೂತಿ ಗುಪ್ತಾ ಅವರು, ಆರೋಪಿ ವಿರುದ್ಧ ಪೊಲೀಸರು ಯಾವುದೇ ಆರೋಪಪಟ್ಟಿ ದಾಖಲಿಸಲು ಸಾಧ್ಯವಾಗಿಲ್ಲ, ಪ್ರಕರಣಕ್ಕೆ ಸೂಕ್ತ ಸಾಕ್ಷ್ಯಾಧಾರಗಳಿಲ್ಲ ಮತ್ತು ಶವದ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಹಾಗೂ ತನಿಖಾಧಿಕಾರಿ ನ್ಯಾಯಾಲಯಕ್ಕೆ ಹಾಜರಾಗಿಲ್ಲ ಎಂದು ನ್ಯಾಯಾಧೀಶರು ಪ್ರಕರಣವನ್ನು ತಳ್ಳಿಹಾಕಿದರು. ಜೊತೆಗೆ ಬೀರ್ಬಲ್ ನಿರಪರಾಧಿ ಎಂದು ತೀರ್ಪು ನೀಡಿದರು.

ತೀರ್ಪು ಕೇಳಿದ ತಕ್ಷಣ ಆನಂದದಿಂದ ಆತ ಕೋರ್ಟ್‌ ಕಟಕಟೆಯಲ್ಲೇ ಕಣ್ಣೀರು ಹಾಕಿದ್ದಾರೆ. ಜೈಲಿನಲ್ಲಿದ್ದಾಗಲೇ ಬೀರ್ಬಲ್‌ ತಂದೆ-ತಾಯಿಯನ್ನು ಕಳೆದುಕೊಂಡು, ನನ್ನವರು, ತನ್ನವರು ಎನ್ನದೆ ಇದೀಗ ಅನಾಥವಾಗಿ ಬದುಕಬೇಕು ಎಂದು ಅಳಲನ್ನು ತೋಡಿಕೊಂಡಿದ್ದಾನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!