ಮಂಗಳೂರು ಜಂ. ರೈಲು ನಿಲ್ದಾಣದಲ್ಲಿ 1,88,58,000 ರೂ. ಮೌಲ್ಯದ ನಗ-ನಗದು ವಶ, ಓರ್ವನ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ರೈಲಿನಲ್ಲಿ ದಾಖಲಾತಿ ಇಲ್ಲದ ನಗದು ₹ 1,48,58,000 ಮತ್ತು 800 ಗ್ರಾಂ ಚಿನ್ನಾಭರಣ ಕೊಂಡೊಯ್ಯುತ್ತಿದ್ದ ಆರೋಪಿಯನ್ನು ಬಂಧಿಸಿ, ನಗ-ನಗದನ್ನು ವಶಪಡಿಸಿಕೊಂಡ ಪ್ರಕರಣ ಮಂಗಳೂರು ರೈಲ್ವೇ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಅನುಮಾನಾಸ್ಪದ ವ್ಯಕ್ತಿ ಮತ್ತು ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವಂತೆ ಬೆಂಗಳೂರು ರೈಲ್ವೇಸ್ ಎ.ಡಿ.ಜಿ.ಪಿ. ನಿರ್ದೇಶನದಂತೆ, ಮಂಗಳೂರು ರೈಲ್ವೇ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮೋಹನ್ ಕೊಟ್ಟಾರಿ ಮತ್ತು ಠಾಣೆ ಸಿಬ್ಬಂದಿ ನಿಯಮಿತವಾಗಿ ಮಂಗಳೂರು ಜಂಕ್ಷನ್ ಮತ್ತು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ರೈಲುಗಾಡಿ ತಪಾಸಣೆ ಮಾಡುತ್ತಿದ್ದರು.

ಈ ವೇಳೆ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ (ರೈಲು ಸಂಖ್ಯೆ 12223) ದುರಂತ್ ಎಕ್ಸಪ್ರೆಸ್‌ನ ಎಸ್ -4 ಸೀಟ್ ನಂ. 35ರಲ್ಲಿದ್ದ ವ್ಯಕ್ತಿಯು ಪನ್ವೇಲ್ ರೈಲು ನಿಲ್ದಾಣದಿಂದ ಪ್ರಯಾಣ ಮಾಡುತ್ತಿದ್ದ. ಈತನ ಬಳಿಯಿದ್ದ ಒಂದು ಕಪ್ಪು ಬಣ್ಣದ ಬ್ಯಾಕ್‌ಪ್ಯಾಕ್ ಬ್ಯಾಗ್ ಅನ್ನು ತಪಾಸಣೆ ನಡೆಸಿದಾಗ, ಅದರಲ್ಲಿ ನಗದು ಹಣ ₹ 1,48,58,000 ಮತ್ತು ಸುಮಾರು ₹ 40ಲಕ್ಷ ಮೌಲ್ಯದ 800 ಗ್ರಾಂ ತೂಕ ಚಿನ್ನಾಭರಣ ಸೇರಿ ಒಟ್ಟು ₹ 1,88,58,000 ಮೌಲ್ಯದ ನಗ-ನಗದು ಇದ್ದವು. ಇವುಗಳ ಬಗ್ಗೆ ಯಾವುದೇ ದಾಖಲಾತಿಗಳು ಇಲ್ಲದಿರುವುದರಿಂದ ಮೇಲಾಧಿಕಾರಿಗಳ ಸೂಚನೆಯಂತೆ ನಗದು ಮತ್ತು ಚಿನ್ನಾಭರಣವನ್ನು ಮುಂದಿನ ಕ್ರಮಕ್ಕಾಗಿ ವಶಪಡಿಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗಿದೆ ಎಂದು ಬೆಂಗಳೂರು ರೈಲ್ವೇಸ್ ಪೊಲೀಸ್ ಅಧೀಕ್ಷಕರ ಪ್ರಕಟಣೆ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!