ಹೊಸದಿಗಂತ ವರದಿ, ಮೈಸೂರು:
ಮನೆ ಬಿಟ್ಟು ಹೋಗುತ್ತೇನೆ ಎಂದಿದ್ದಕ್ಕೆ ತನ್ನ ಜೊತೆ ವಾಸಿಸುತ್ತಿದ್ದ ಪ್ರಿಯತಮೆಯನ್ನು ಆಕೆಯ ಪ್ರಿಯಕರ ವ್ಯಕ್ತಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಬೆಳವಾಡಿ ಗ್ರಾಮದಲ್ಲಿ ನಡೆದಿದೆ.
ಪ್ರೇಮಕುಮಾರಿ (25) ಕೊಲೆಯಾದ ಮಹಿಳೆ. ಕೊಲೆ ಆರೋಪಿ ಕಿರಣ್ (27)ನನ್ನು ಬಂಧಿಸಲಾಗಿದೆ.
ಎಚ್.ಡಿ.ಕೋಟೆ ತಾಲ್ಲೂಕಿನ ಕ್ಯಾತನಹಳ್ಳಿ ಗ್ರಾಮದ ಪ್ರೇಮಕುಮಾರಿ ಪತಿಯನ್ನು ಬಿಟ್ಟು ತನ್ನ ಮೂವರು ಮಕ್ಕಳೊಂದಿಗೆ ತವರಿಗೆ ಬಂದು ನೆಲೆಸಿದ್ದರು. ನಂತರ ತನ್ನ ಅತ್ತೆಯ ಮಗನೊಂದಿಗೆ ಬೆಳವಾಡಿಯಲ್ಲಿ 8 ತಿಂಗಳು ವಾಸವಾಗಿದ್ದಳು. ಕೂಲಿ ಮಾಡಿಕೊಂಡಿದ್ದ ಕಿರಣ್ ನಿತ್ಯ ಕುಡಿದುಕೊಂಡು ಬಂದು ಪ್ರೇಮಕುಮಾರಿ ಮತ್ತು ಮಕ್ಕಳಿಗೆ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತಿದ್ದ ಮಹಿಳೆ ಮನೆ ಬಿಟ್ಟು ಹೋಗುತ್ತೇನೆ ಎಂದಿದ್ದಾರೆ. ಇದರಿಂದ ಕೋಪಗೊಂಡು ಕಿರಣ್ ಮಚ್ಚಿನಿಂದ ಆಕೆಯ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ.
ರಕ್ತದ ಮಡುವಿನಲ್ಲಿ ನರಳುತ್ತಿದ್ದ ಪ್ರೇಮಕುಮಾರಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸಿದೇ ಮೃತಪಟ್ಟಿದ್ದಾಳೆ.
ವಿಷಯ ತಿಳಿದು ತನಿಖೆ ಆರಂಭಿಸಿದ ಮೈಸೂರಿನ ವಿಜಯನಗರ ಠಾಣೆ ಪೊಲೀಸರು, ಕೇವಲ 6 ಗಂಟೆಯಲ್ಲಿ ಆರೋಪಿ ಕಿರಣ್ನನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.