Sunday, August 14, 2022

Latest Posts

ಕೋವಿಡ್ ಸುರಕ್ಷತಾ ನಿಯಮವನ್ನು ಕಡ್ಡಾಯವಾಗಿ ಪಾಲಿಸಿ: ಶಾಸಕ ಮುದ್ನಾಳ

ಹೊಸದಿಗಂತ ವರದಿ, ಯಾದಗಿರಿ:

ಕೋವಿಡ್ ವಿರುದ್ಧ ಗೆಲುವು ಸಾಧಿಸಲು ಪ್ರತಿಯೊಬ್ಬರೂ ಲಸಿಕೆ ಪಡೆಯಬೇಕು. ಸಂಪೂರ್ಣವಾಗಿ ಕೋವಿಡ್ ಮುಕ್ತವಾಗುವವರೆಗೂ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಯಾದಗಿರಿ ಮತಕ್ಷೇತ್ರದ ಶಾಸಕ ವೆಂಕಟರಡ್ಡಿ ಗೌಡ ಮುದ್ನಾಳ ಅವರು ಹೇಳಿದರು.
ನಗರಕ್ಕೆ ಸಮೀಪವಿರುವ ಮುದ್ನಾಳ ಗ್ರಾಮದಲ್ಲಿ ಶುಕ್ರವಾರ ಪಂಚಾಯತ್ ಮಟ್ಟದಲ್ಲಿ ಹಿರಿಯ ನಾಗರಿಕರಿಗೆ ಕೋವಿಡ್- 19 ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೊರೊನಾ ಲಸಿಕೆ ಪಡೆಯುವ ಸಂದರ್ಭದಲ್ಲಿ ಯಾವುದೇ ತಪ್ಪು ಗ್ರಹಿಕೆ ಬೇಡ, ಎಲ್ಲಾ ಹಿರಿಯ ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಲಸಿಕೆ ಪಡೆಯಬೇಕೆಂದು ಹೇಳಿದರು.
ಮಹಾಮರಿ ಕೊರೋನಾ ಲಸಿಕೆಯನ್ನು ಸರ್ಕಾರವು ಉಚಿತವಾಗಿ ನೀಡುತ್ತಿದ್ದು, ತಪ್ಪದೆ ಎಲ್ಲಾ ಹಿರಿಯ ನಾಗರಿಕರು ಕೊರೋನಾ ಲಸಿಕೆಯನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿ ಆರಂಭಿಸಿರುವ ಲಸಿಕಾ ಕೇಂದ್ರ ಹಾಗೂ ನಿಗಾ ಘಟಕದ ಪ್ರಯೋಜನ ಪಡೆಯುವಂತೆ ತಿಳಿಸಿದರು.
ಜಿಲ್ಲಾಧಿಕಾರಿಗಳಾದ ಡಾ.ರಾಗಪ್ರಿಯಾ ಆರ್. ಅವರು ಮಾತನಾಡಿ, ಜಿಲ್ಲೆಯಲ್ಲಿ ಎಂಬತ್ತೆoದು ಸಾವಿರ ಮಂದಿ ಹಿರಿಯ ನಾಗರಿಕರಿಗೆ ಕೊರೊನಾ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಕೊರೋನಾ ಲಸಿಕೆ ನೀಡುವ ಅಭಿಯಾನ ಮೊದಲ ಹಂತದಲ್ಲಿ ಶೇ.90ರಷ್ಟು ಹಾಗೂ ಎರಡನೇ ಹಂತದಲ್ಲಿ ಶೇ.57.97 ರಷ್ಟು ಪೂರ್ಣಗೊಂಡಿದೆ. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ, ಎರಡನೇ ಹಂತದಲ್ಲಿ ಮುಂಚೂಣಿ ಕಾರ್ಯಕರ್ತಯರಿಗೆ ಲಸಿಕೆ ನೀಡಲಾಗಿದೆ ಎಂದರು.
ಮೂರನೇ ಹಂತದಲ್ಲಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಲಸಿಕೆ ನೀಡಲಾಗುತ್ತಿದೆ. ಮೊದಲ ಲಸಿಕೆ ಪಡೆದ 28 ದಿನಗಳ ಬಳಿಕ 2ನೇ ಲಸಿಕೆಯನ್ನು ತಪ್ಪದೇ ಪಡೆಯಬೇಕು. ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆಯದವರು ಈಗ ಲಸಿಕೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಇಂದುಮತಿ ಕಾಮಶೆಟ್ಟಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು ನೋಂದಾಯಿತ 56 ಆಸ್ಪತ್ರೆಗಳಲ್ಲಿ ಆನ್‌ಲೈನ್ ಮೂಲಕ ನೋಂದಣಿ ಮಾಡಬಹುದು. ಇಲ್ಲವೇ ನೇರವಾಗಿ ಆಸ್ಪತ್ರೆಗೆ ಭೇಟಿ ನೀಡಿ ಫೋಟೋ ಐಡಿಯೊಂದಿಗೆ ನೋಂದಣಿ ಮಾಡಿಕೊಂಡು ಲಸಿಕೆ ಪಡೆಯಬಹುದು. ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಲಸಿಕೆ ಪಡೆಯಬಹುದು. ಖಾಸಗಿ ಆಸ್ಪತ್ರೆಯಲ್ಲಿ ಒಂದು ಡೋಸ್‌ಗೆ 250 ರೂ. ಹಣ ನೀಡಿ ಲಸಿಕೆ ತೆಗೆದುಕೊಳ್ಳಬಹುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮುದ್ನಾಳ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಜಯಲಕ್ಷ್ಮಿ ಶರಣಪ್ಪ, ತಾ.ಪಂ ಸದಸ್ಯೆ ಗೊರಿಬಾಯಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಚಂಡ್ರಿಕಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ, ಆರ್.ಸಿ.ಎಚ್ ಅಧಿಕಾರಿ ಡಾ.ಸೂರ್ಯಪ್ರಕಾಶ ಕಂದಕೂರ, ಟಿ.ಎಚ್.ಒ ಡಾ.ಹಣಮಂತ, ಡಾ.ನಾಗೇಶ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss