ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………..
ಹೊಸದಿಗಂತ ವರದಿ, ಮಂಡ್ಯ :
ಸಚಿವರು ಬಂದಾಗ ಮಾತ್ರ ಎಲ್ಲ ವ್ಯವಸ್ಥೆ ಇರುತ್ತೆ. ಆಮೇಲೆ ಅಧಿಕಾರಿಗಳು ಇತ್ತ ಗಮನ ಹರಿಸುವುದೇ ಇಲ್ಲ. ಇಂಥ ಆರೋಪ ಮಂಡ್ಯ ಜಿಲ್ಲೆಯ ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರ್ನಲ್ಲಿ ಹಲವು ಬಾರಿ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣ ಗೌಡ ತಮ್ಮ ಕಚೇರಿಯ ಸಿಬ್ಬಂದಿಯನ್ನು ವಿಚಕ್ಷಣಾದಳದ ರೀತಿಯಲ್ಲಿ ಕಳುಹಿಸಿದ್ದಾರೆ.
ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣ ಗೌಡ, ಜಿಲ್ಲೆಯ ಎಲ್ಲ ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಜಿಲ್ಲೆಯಲ್ಲೇ ಮೊಕ್ಕಾಂ ಹೂಡಿರುವ ಸಚಿವರು ನಿರಂತರವಾಗಿ ಎಲ್ಲೆಡೆ ತೆರಳಿ ಪರಿಶೀಲಿಸುತ್ತಿದ್ದಾರೆ. ಆದರೆ ಕೆಲವು ಕಡೆಗಳಲ್ಲಿ ಸಚಿವರು ಭೇಟಿ ನೀಡಿದ ಸಂದರ್ಭ ಒಂದಷ್ಟು ಆರೋಪಗಳು ಕೇಳಿಬಂದಿತ್ತು. ನೀವು ಬರುವ ವಿಚಾರ ತಿಳಿದಾಗ ಮಾತ್ರ ಎಲ್ಲ ವ್ಯವಸ್ಥೆ ಮಾಡಿರುತ್ತಾರೆ. ನೀವು ತೆರಳಿದ ಬಳಿಕ ಎಲ್ಲ ಅವ್ಯವಸ್ಥೆಯ ಆಗರವಾಗಿರುತ್ತದೆ ಎಂದು ಕೆಲ ಕೋವಿಡ್ ಸೋಂಕಿತರು ದೂರಿದ್ದರು. ಇದನ್ನ ತುಂಬ ಗಂಭೀರವಾಗಿ ಪರಿಗಣಿಸಿರುವ ಸಚಿವರು, ಸಮಸ್ಯೆ ಪರಿಹಾರಕ್ಕಾಗಿ
ಸಚಿವರು ತಮ್ಮ ಕಚೇರಿಯ ಸಿಬ್ಬಂದಿಯನ್ನೇ ನೇಮಿಸಿದ್ದಾರೆ. ಜಿಲ್ಲೆಯ ಎಲ್ಲ ತಾಲೂಕಿನ ಆಸ್ಪತ್ರೆ ಹಾಗೂ ಕೋವಿಡ್ ಸೆಂಟರ್ ಗೆ ದಿಢೀರ್ ಭೇಟಿ ನೀಡಿ, ಅಲ್ಲಿನ ಸಮಸ್ಯೆ ಬಗ್ಗೆ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ. ಬೆಡ್ ಸಮಸ್ಯೆ, ಆಕ್ಸಿಜನ್ ಕೊರತೆ ಸೇರಿದಂತೆ ಏನೇ ವಿಚಾರ ಇದ್ದರು ಜಿಲ್ಲಾಡಳಿತಕ್ಕೆ ಹಾಗೂ ತಮ್ಮ ಗಮನಕ್ಕೆ ನೇರವಾಗಿ ತರುವಂತೆ ಸೂಚನೆ ನೀಡಿದ್ದಾರೆ.