ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ದಿಗಂತ ವರದಿ ಮಂಗಳೂರು:
ನಿಫಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ವ್ಯಕ್ತಿಯೊಬ್ಬರು ತಪಾಸಣೆಗೆ ಒಳಪಟ್ಟಿದ್ದು, ಯಾವುದೇ ಆತಂಕಪಡುವ ಅಗತ್ಯವಿಲ್ಲ. ಇದು ನಿಫಾ ಶಂಕಿತ ಪ್ರಕರಣವಲ್ಲ. ಜ್ವರ ಬಾಧಿತರಾಗಿರುವ ವ್ಯಕ್ತಿ ಅವರಾಗಿಯೇ ಸಂಶಯಪಟ್ಟು ನಿಫಾ ಸೋಂಕಿನ ಪರೀಕ್ಷೆಗೆ ಒಳಪಟ್ಟಿದ್ದಾರೆ ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.
ಜ್ವರ ಬಾಧಿತ ವ್ಯಕ್ತಿಯನ್ನು ಈಗಾಗಲೇ ಪರೀಕ್ಷೆಗೆ ಒಳಪಡಿಸಲಾಗಿದ್ದು, ಮುಂದಿನ 48 ಗಂಟೆಯೊಳಗೆ ವರದಿ ದೊರೆಯುವ ಸಾಧ್ಯತೆಯಿದೆ. ಆದರೂ, ಈ ವ್ಯಕ್ತಿಯನ್ನು ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಐಸೋಲೇಶನ್ ನಲ್ಲಿ ಇರಿಸಲಾಗಿದೆ ಎಂದು ಅವರು ಮಂಗಳವಾರ ತಿಳಿಸಿದ್ದಾರೆ.
ನಿಫಾ ವೈರಸ್ ಶಂಕಿತ ವ್ಯಕ್ತಿ ಗೋವಾ ಮೂಲದವರು. ಗೋವಾದಲ್ಲಿ ಆರ್ಟಿ-ಪಿಸಿಆರ್ ಕಿಟ್ ತಯಾರಿಸುವ ಲ್ಯಾಬ್ವೊಂದರಲ್ಲಿ ಮೈಕ್ರೋ ಬಯಾಲಜಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಎರಡು ದಿನಗಳ ಹಿಂದೆ ಜ್ವರ ಬಂದು ಗುಣಮುಖನಾಗಿದ್ದು, ನಿಫಾ ವೈರಸ್ ಬಂದಿರಬಹುದೆಂಬ ಶಂಕೆ ಹಿನ್ನೆಲೆ ಟೆಸ್ಟ್ ಮಾಡಿಸಿದ್ದಾರೆ. ಈ ವ್ಯಕ್ತಿ ಗೋವಾದಿಂದ ಕಾರವಾರಕ್ಕೆ ಬಂದು, ಅಲ್ಲಿಂದ ಮಣಿಪಾಲಕ್ಕೆ ತೆರಳಿ ಅಲ್ಲಿಂದ ಮಂಗಳೂರಿಗೆ ಬಂದಿದ್ದಾರೆ.
ನೆರೆಯ ಕೇರಳದಲ್ಲಿ ನಿಫಾ ವೈರಸ್ ಆತಂಕ ಮೂಡಿಸಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಈ ಬಗ್ಗೆ ಕಟ್ಟೆಚ್ಚರ ವಹಿಸಲಾಗಿದೆ.