ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಂದೆಡೆ ಜಡಿಮಳೆ…ಮಧ್ಯಾಹ್ನದ ಬಿಸಿ ಬಿಸಿ ಗಂಜಿಯೂಟಕ್ಕೆ ಈ ರೆಸಿಪಿ ಸೂಪರ್ ಟೇಸ್ಟ್ ನೀಡುತ್ತೆ. ಹಾಗಾದ್ರೆ ರೆಸಿಪಿ ಏನು? ಬನ್ನಿ ನೋಡೋಣ. ಮಾವಿನ ಸೀಸನ್ ಇನ್ನೂ ಮುಗಿದಿಲ್ಲ. ಮಳೆ ಬಂದರೂ ಮಾವಿನ ಮರದಿಂದ ಹಣ್ಣುಗಳು ಉದುರುತ್ತಲೇ ಇವೆ. ಈ ಹಣ್ಣುಗಳಿಂದ ರುಚಿರುಚಿಯ ಗೊಜ್ಜು ತಯಾರಿಸಬಹುದು. ಇದೊಂದು ವಿಭಿನ್ನ ರೀತಿಯ ಮಾವಿನ ಗೊಜ್ಜು. ನಾಲ್ಕು ಮಾವಿನ ಹಣ್ಣನ್ನು ತೊಳೆದು ರಸ ಹಿಂಡಿ ಪ್ರತ್ಯೇಕವಾಗಿರಿಸಿಕೊಳ್ಳಿ. ತೆಂಗಿನಕಾಯಿಯನ್ನು ತುರಿದಿಟ್ಟುಕೊಳ್ಳಿ. ಅರ್ಧ ಟೀಸ್ಪೂನ್ ಎಳ್ಳು ಹುರಿದಿಟ್ಟುಕೊಳ್ಳಿ. ಮೆಣಸಿನ ಪುಡಿ ಅರ್ಧ ಟೀ ಸ್ಪೂನ್, ರುಚಿಗೆ ಬೇಕಾದಷ್ಟು ಉಪ್ಪು.
ತುರಿದ ಕಾಯಿಯನ್ನು ಮಿಕ್ಸಿಗೆ ಹಾಕಿ. ಜೊತೆಗೆ ಎಳ್ಳು,ಮೆಣಸಿನ ಪುಡಿ, ಉಪ್ಪು ಸೇರಿಸಿ ಸರಿಯಾಗಿ ನುಣ್ಣಗೆ ರುಬ್ಬಿ. ಬಾಣಲೆಯನ್ನು ಒಲೆ ಮೇಲಿಟ್ಟು ಮಾವಿನ ಹಣ್ಣಿನ ರಸವನ್ನು ಕುದಿಯಲು ಇಡಿ. ರುಚಿಗೆ ಬೇಕಾದಷ್ಟು ಬೆಲ್ಲ ಸೇರಿಸಿ ಕುದಿಸಿ. ಚೆನ್ನಾಗಿ ಕುದಿದ ನಂತರ ರುಬ್ಬಿದ ಮಸಾಲೆ ಸೇರಿಸಿ ಒಂದು ಕುದಿ ಬರಿಸಿ. ಬೇವಿನೆಲೆ ಹಾಗೂ ಇಂಗು ಸೇರಿಸಿ ಒಗ್ಗರಣೆ ಕೊಡಿ. ಕುಚ್ಚಲಕ್ಕಿ ಗಂಜಿಯ ಜೊತೆಗೆ ಈ ಮಾವಿನ ಹಣ್ಣಿನ ಗೊಜ್ಜು ಸೂಪರ್.