ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಣಿಪುರದಲ್ಲಿನ ಪರಿಸ್ಥಿತಿಯ ಬಗ್ಗೆ ಲೋಕಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸುವ ಅಪೇಕ್ಷೆಯನ್ನು ಕೇಂದ್ರ ಸರಕಾರ ಸೋಮವಾರ ವ್ಯಕ್ತಪಡಿಸಿತು. ಅಲ್ಲದೆ ಮಣಿಪುರ ವಿಚಾರದಲ್ಲಿ ದೇಶಕ್ಕೆ ಸತ್ಯದ ದರ್ಶನವಾಗಬೇಕಿರುವುದು ಅತ್ಯಂತ ಅಗತ್ಯ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಒತ್ತಿ ಹೇಳಿದರು.
ಆದರೆ ವಿರೋಧಪಕ್ಷಗಳೇಕೆ ಮಣಿಪುರದಲ್ಲಿನ ವಿಷಮತೆ ಬಗ್ಗೆ ಚರ್ಚೆಗೆ ಸಿದ್ಧವಾಗಿಲ್ಲ ಎಂಬ ಬಗ್ಗೆ ಅವರು ಅಚ್ಚರಿ ವ್ಯಕ್ತಪಡಿಸಿದರು.
ಸೋಮವಾರ ಸಂಸತ್ ಕಲಾಪ ಆರಂಭವಾಗುತ್ತಿದ್ದಂತೆಯೇ, ವಿರೋಧಪಕ್ಷಗಳು ಮಣಿಪುರ ವಿಷಯವನ್ನು ಮುಂದಿಟ್ಟುಕೊಂಡು ಗಲಾಟೆ ಎಬ್ಬಿಸಿದರು. ಇದರಿಂದಾಗಿ ಕಲಾಪ ನಡೆಸಲಾಗದೆ ಮೂರು ಬಾರಿ ಕಲಾಪವನ್ನು ಮುಂದೂಡಲಾಯಿತು.
ಈ ಸಂದರ್ಭ ಮಾತನಾಡಿದ ಅಮಿತ್ ಶಾ ಅವರು, “ವಿರೋಧಪಕ್ಷಗಳು ಮಣಿಪುರದ ಬಗ್ಗೆ ಚರ್ಚೆ ನಡೆಸಲು ಅವಕಾಶ ನೀಡುತ್ತಿಲ್ಲ ಯಾಕೆ ಎಂಬುದೇ ಅರ್ಥವಾಗುತ್ತಿಲ್ಲ.ಮಣಿಪುರ ವಿಷಯದಲ್ಲಿ ದೇಶಕ್ಕೆ ಸತ್ಯ ಗೊತ್ತಾಗಬೇಕಾಗಿರುವುದು ಅತ್ಯಂತ ಅಗತ್ಯ “ಎಂದು ನುಡಿದರು.
ಉಗ್ರರು ಮತ್ತು ವಿದ್ರೋಹಿ ಶಕ್ತಿಗಳಿಂದ ಹಿಂಸಾಪೀಡಿತವಾಗಿರುವ ಮಣಿಪುರದಲ್ಲಿ ನಡೆದ ಕೆಲವು ಪ್ರಕರಣಗಳನ್ನಷ್ಟೇ ಮುಂದಿಟ್ಟುಕೊಂಡು ವಿರೋಧಪಕ್ಷಗಳು ಮತ್ತು ಸ್ಥಾಪಿತ ಹಿತಾಸಕ್ತಿಗಳು ಗುಲ್ಲೆಬ್ಬಿಸುತ್ತಿರುವ ಹಿನ್ನೆಲೆಯಲ್ಲಿ ಅಮಿತ್ ಶಾ ಅವರ ಹೇಳಿಕೆ ಮಹತ್ವ ಪಡೆದಿದೆ.
ಅಪರಾಹ್ನ 2.30ಕ್ಕೆ ಮತ್ತೆ ಕಲಾಪ ಸೇರಿದಾಗ ಮಾತನಾಡಿದ ಶಾ ಅವರು, ಸರಕಾರ ಮತ್ತು ವಿರೋಧಪಕ್ಷಗಳ ನಾಯಕರು ಮಣಿಪುರ ವಿಷಯದ ಬಗ್ಗೆ ಚರ್ಚೆ ನಡೆಸಲು ಬಯಸುತ್ತಿದ್ದಾರೆ . ಸರಕಾರ ಈ ಬಗ್ಗೆ ಸಮಗ್ರ ಚರ್ಚೆಗೆ ಸಿದ್ಧವಾಗಿದೆ. ಇದಕ್ಕೆ ಅವಕಾಶ ನೀಡಬೇಕು. ಆದರೆ ವಿಪಕ್ಷಗಳೇಕೆ ಈ ಕುರಿತಂತೆ ಚರ್ಚೆಗೆ ಹಿಂಜರಿಯುತ್ತಿವೆ ಎಂಬುದು ಅರ್ಥವಾಗುತ್ತಿಲ್ಲ ಎಂದು ನುಡಿದರು. ಆದರೆ ವಿರೋಧಪಕ್ಷಗಳು , ಪ್ರಧಾನಿ ಮೋದಿಯವರು ಹೇಳಿಕೆ ನೀಡಬೇಕೆಂದು ಪಟ್ಟು ಹಿಡಿದು ಗಲಾಟೆ ಮುಂದುವರಿಸಿದ್ದರಿಂದ ಸ್ಪೀಕರ್ ಓಂ ಪ್ರಕಾಶ್ ಬಿರ್ಲಾ ಅವರು ದಿನದ ಮಟ್ಟಿಗೆ ಕಲಾಪವನ್ನು ಮುಂದೂಡಿದರು.
ಪ್ರಧಾನಿಯವರು ಹೊರಗಡೆ ಹೇಳಿಕೆ ನೀಡಿದ್ದಾರೆ , ಒಳಗಡೆ ನೀಡಿಲ್ಲ ಎಂದು ವಿಪಕ್ಷ ನಾಯಕರು ಪ್ರಶ್ನಿಸಿದರು. ಆದರೆ ವಿರೋಧಪಕ್ಷಗಳು ಚರ್ಚೆಗೆ ಬೆನ್ನುಹಾಕಿ ಕಲಾಪವನ್ನು ಹಾಳುಗೆಡವುತ್ತಿರುವುದಕ್ಕೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತು.