ಹಿಂಸಾಚಾರಕ್ಕೆ ತಿರುಗಿದ ಮಣಿಪುರ: ಪರಿಸ್ಥಿತಿ ಅವಲೋಕಿಸಿದ ಅಮಿತ್‌ ಶಾ, ಸೇನೆ ನಿಯೋಜನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಣಿಪುರದಲ್ಲಿ ಬುಡಕಟ್ಟು ಜನರು ನಡೆಸುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರೊಂದಿಗೆ ಪರಿಸ್ಥಿತಿಯನ್ನು ಅವಲೋಕಿಸಿದರು.

ಬುಡಕಟ್ಟು ವಿದ್ಯಾರ್ಥಿಗಳ ಒಕ್ಕೂಟ ಮಣಿಪುರ (ATSUM) ಆಯೋಜಿಸಿದ್ದ ಸಾಮೂಹಿಕ ರ್ಯಾಲಿ ಹಿಂಸಾಚಾರಕ್ಕೆ ತಿರುಗಿದ್ದು, ಸರ್ಕಾರ ಹೆಚ್ಚಿನ ಜಿಲ್ಲೆಗಳಲ್ಲಿ ಕರ್ಫ್ಯೂ ವಿಧಿಸಿದೆ. ಮಂಗಳವಾರದಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ ಇಡೀ ರಾಜ್ಯದಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಐದು ದಿನಗಳವರೆಗೆ ಸ್ಥಗಿತಗೊಳಿಸಿದೆ.

ಏಪ್ರಿಲ್ 19 ರ ಮಣಿಪುರ ಹೈಕೋರ್ಟ್ ನಿರ್ದೇಶನದ ನಂತರ ರಾಜ್ಯದ ಮೈಟೆಯಿ ಸಮುದಾಯವನ್ನು ಪರಿಶಿಷ್ಟ ಪಂಗಡ (ಎಸ್‌ಟಿ) ವರ್ಗಕ್ಕೆ ಸೇರಿಸುವ ಬೇಡಿಕೆಯ ವಿರುದ್ಧ ಬುಡಕಟ್ಟು ಗುಂಪು ಪ್ರತಿಭಟನೆ ನಡೆಸುತ್ತಿದೆ. ಈ ಬೆಳವಣಿಗೆಯು ರಾಜ್ಯದಲ್ಲಿ ಮೈಟೆಯಿ ಸಮುದಾಯ ಮತ್ತು ಗುಡ್ಡಗಾಡು ಬುಡಕಟ್ಟು ಜನಾಂಗದವರ ನಡುವೆ ಹಳೆಯ ಜನಾಂಗೀಯ ದ್ವೇಷವನ್ನು ಪುನಃ ಹುಟ್ಟುಹಾಕಿದೆ.

ಬುಧವಾರ ರಾತ್ರಿ ಮಣಿಪುರದ ಹಲವು ಭಾಗಗಳಲ್ಲಿ ಹಿಂಸಾತ್ಮಕ ಘರ್ಷಣೆಗಳ ನಂತರ, ಮುಖ್ಯಮಂತ್ರಿ ಬಿರೇನ್ ಸಿಂಗ್ “ನಮ್ಮ ಎಲ್ಲ ಜನರ ಜೀವ ಮತ್ತು ಆಸ್ತಿಯನ್ನು ರಕ್ಷಿಸಲು ನಾವು ಬದ್ಧರಾಗಿದ್ದೇವೆ. ವಿವಿಧ ಸಮುದಾಯಗಳ ದೀರ್ಘಾವಧಿಯ ಕುಂದುಕೊರತೆಗಳನ್ನು ಜನರು ಮತ್ತು ಅವರ ಪ್ರತಿನಿಧಿಗಳೊಂದಿಗೆ ಸಮಾಲೋಚಿಸಿ ಸೂಕ್ತ ಸಮಯದಲ್ಲಿ ಸೂಕ್ತವಾಗಿ ಪರಿಹರಿಸಲಾಗುವುದು” ಎಂದು ವೀಡಿಯೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹಿಂಸಾಚಾರದ ನಂತರ, ಭಾರತೀಯ ಸೇನೆ ಮತ್ತು ಅಸ್ಸಾಂ ರೈಫಲ್ಸ್ ಬುಧವಾರ ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ಧ್ವಜ ಮೆರವಣಿಗೆ ನಡೆಸಿತು. ಘರ್ಷಣೆಗಳು ಭುಗಿಲೆದ್ದ ಕೂಡಲೇ ಬಿಷ್ಣುಪುರ ಮತ್ತು ಚುರಚಂದಪುರ ಜಿಲ್ಲೆಗಳ ಗಡಿ ಪ್ರದೇಶದಲ್ಲಿ ಮಿಲಿಟರಿ ಮತ್ತು ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ. ಪೀಡಿತ ಜನರನ್ನು ಸ್ಥಳಾಂತರಿಸಲು ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಪುನಃಸ್ಥಾಪಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಸೇನೆಯ ಹೇಳಿಕೆ ನೀಡಿದೆ.

ಸರಿಸುಮಾರು 4000 ಜನರಿಗೆ ವಿವಿಧ ಸ್ಥಳಗಳಲ್ಲಿ ಸೇನೆ/ಎಆರ್ ಸಿಒಬಿಗಳು ಮತ್ತು ರಾಜ್ಯ ಸರ್ಕಾರದ ಆವರಣದಲ್ಲಿ ಆಶ್ರಯ ನೀಡಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!