ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಣಿಪುರ ಹಿಂಸಾಚಾರ ತಡೆಯುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಎಐಸಿಸಿ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ರಾಜ್ಯಸಭೆಯಲ್ಲಿ ಮಾತನಾಡಿರುವ ಖರ್ಗೆ, ‘ಮಣಿಪುರ ಹಿಂಸಾಚಾರದಲ್ಲಿ 260ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. 60,000ಕ್ಕೂ ಹೆಚ್ಚು ಮಂದಿ ನಿರಾಶ್ರಿತರಾಗಿದ್ದಾರೆ. 4,700 ಕ್ಕೂ ಹೆಚ್ಚು ಮನೆಗಳು ಸುಟ್ಟುಹೋಗಿವೆ ಮತ್ತು ಶಾಲೆಗಳು, ಆಸ್ಪತ್ರೆಗಳು ಹಾಗೂ ಪೂಜಾ ಸ್ಥಳಗಳು ಸೇರಿದಂತೆ 13,000ಕ್ಕೂ ಹೆಚ್ಚು ಕಟ್ಟಡಗಳು ನಾಶವಾಗಿವೆ. ಆದರೂ ಬಿಜೆಪಿ ಎಲ್ಲವನ್ನು ಮೌನವಾಗಿ ನೋಡುತ್ತಿತ್ತು’ ಎಂದು ಕಿಡಿಕಾರಿದ್ದಾರೆ.
ಈ ಎಲ್ಲಾ ಸಂದರ್ಭಗಳಲ್ಲಿಯೂ ಬಿಜೆಪಿ ಮಣಿಪುರವನ್ನು ಉಳಿಸುವ ಬದಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಉಳಿಸಲು ಕೆಲಸ ಮಾಡುತ್ತಿತ್ತು. ಆದ್ದರಿಂದಲೇ ಪ್ರಧಾನಿ ಮೋದಿ ಅವರು ಒಮ್ಮೆಯೂ ಮಣಿಪುರಕ್ಕೆ ಭೇಟಿ ನೀಡಲಿಲ್ಲ. ದೇಶದಾದ್ಯಂತ ಚುನಾವಣಾ ರ್‍ಯಾಲಿಗಳನ್ನು ನಡೆಸುತ್ತಾರೆ. ಆದರೆ, ಮಣಿಪುರಕ್ಕೆ ಹೋಗುವುದಿಲ್ಲ ಎಂದರು.