ಹೊಸದಿಗಂತ ವರದಿ ಅಂಕೋಲಾ:
ಅಂಕೋಲಾ ತಾಲೂಕಿನ ಮಂಜಗುಣಿ ಬಳಿ ಗಂಗಾವಳಿ ನದಿಗೆ ಗೋಕರ್ಣ ಸಂಪರ್ಕ ಸೇತುವೆ ನಿರ್ಮಾಣ ಕಾಮಗಾರಿ ಅಪೂರ್ಣವಾಗಿರುವ ಹಿನ್ನೆಲೆಯಲ್ಲಿ ಸೇತುವೆ ಶೀಘ್ರ ಪೂರ್ಣಗೊಳಿಸುವಂತೆ ಸ್ಥಳೀಯರು ತಹಶೀಲ್ಧಾರ ಮತ್ತು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಕಾರ್ಯನಿರ್ವಾಹಕ ಅಭಿಯಂತರರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ನಾಗರಿಕ ವೇದಿಕೆ ಅಧ್ಯಕ್ಷ ಶ್ರೀಪಾದ ನಾಯ್ಕ ಮಾತನಾಡಿ, ಸೇತುವೆ ಕಾಮಗಾರಿಗೆ ಭೂಮಿ ಪೂಜೆ ನಡೆದು 5 ವರ್ಷಗಳು ಕಳೆದರೂ ಇದುವರೆಗೆ ಕಾಮಗಾರಿ ಪೂರ್ಣಗೊಂಡಿಲ್ಲ. ಕಾರ್ಮಿಕರ ಕೊರತೆಯ ನೆಪ ಹೇಳಲಾಗುತ್ತಿದೆ, ಕಾಮಗಾರಿಗೆಂದು ರಸ್ತೆ ಅಗೆದು ಹಾಕಲಾಗಿದ್ದು, ಮಳೆಗಾಲ ಸಮೀಪಿಸುತ್ತಿರುವುದರಿಂದ ಹಾನಿಯಾಗುವ ಸಾಧ್ಯತೆ ಇದೆ ಎಂದರು.
ಸ್ಥಳೀಯ ಪ್ರಮುಖರಾದ ನಾಗರಾಜ ಮಂಜಗುಣಿ ಮಾತನಾಡಿ, ಕಾಮಗಾರಿ ವಿಳಂಬದಿಂದ ಸ್ಥಳೀಯರು ಸಾಕಷ್ಟು ಸಮಸ್ಯೆ ಎದುರಿಸುವಂತಾಗಿದೆ. ಸುತ್ತು ಬಳಸಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ, ಇದೀಗ ಚುನಾವಣೆ ನೀತಿ ಸಂಹಿತೆ ಇರುವುದರಿಂದ ಪ್ರತಿಭಟನೆ ಕೈಬಿಡಲಾಗಿದೆ. ಕಾಮಗಾರಿ ಮುಗಿಸದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ಅನಿವಾರ್ಯವೆಂದು ಹೇಳಿದರು.
ರೈತ ಮುಖಂಡ ಶಾಂತಾರಾಮ ನಾಯಕ ಮಾತನಾಡಿ, ಸೇತುವೆ ಕಾಮಗಾರಿಯಿಂದ ನದಿ ಪಾತ್ರದ ಜನರು ಸಾಕಷ್ಟು ಸಂಕಷ್ಟ ಎದುರಿಸಿದ್ದಾರೆ. ನದಿಯಲ್ಲಿ ಮಣ್ಣು ತುಂಬಿದ ಕಾರಣ ಸತತ ಮೂರು ವರ್ಷಗಳ ಕಾಲ ಕೃತಕ ಪ್ರವಾಹ ಸೃಷ್ಟಿಯಾಗಿ ಹಾನಿ ಸಂಭವಿಸಿದೆ ಎಂದು ತಿಳಿಸಿದರು.
ತಹಶೀಲ್ಧಾರ ಪ್ರವೀಣ ಹುಚ್ಚಣ್ಣನವರ್ ಮನವಿ ಸ್ವೀಕರಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.