ಮನ್ ಕಿ ಬಾತ್‌ ಕಾರ್ಯಕ್ರಮವಲ್ಲ ಅದು ನನ್ನ ಪಾಲಿಗೆ ಪೂಜೆ, ವ್ರತ: ಅಂತರಾಳ ಬಿಚ್ಚಿಟ್ಟರು ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮನ್​ ಕೀ ಬಾತ್ ರೇಡಿಯೇ ಕಾರ್ಯಕ್ರಮದ 100ನೇ ಆವೃತ್ತಿ ಇಂದು ಪ್ರಸಾರವಾಗಿದ್ದು, ಇದೊಂದು ಕೇವಲ ಕಾರ್ಯಕ್ರಮವಲ್ಲ ಇಲ್ಲಿ ಜನರೇ ದೇವರು, ಇದೊಂದು ವ್ರತ ಇದ್ದಂತೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ವೇಳೆ ದೇಶದ ಜನತೆಗೆ ಪ್ರಧಾನಿ ಧನ್ಯವಾದಗಳನ್ನು ತಿಳಿಸಿದ್ದಾರೆ.

100ನೇ ಆವೃತ್ತಿಯ ಮನ್ ಕಿ ಬಾತ್ ನಲ್ಲಿ ಮಾತನಾಡಿದ ಮೋದಿಯವರು, ನಿಮ್ಮ ಪತ್ರಗಳನ್ನು ಕಂಡಾಗ ನಾನು ಭಾವುಕನಾಗಿದ್ದೇನೆ. ಮನ್‌ ಕಿ ಬಾತ್‌ ಕೋಟ್ಯಂತರ ಭಾರತೀಯರ ಮನದಾಳದ ಭಾವನೆಗಳ ಅಭಿವ್ಯಕ್ತಿಯಾಗಿದೆ. ಭಾರತೀಯರ ಸಕಾರಾತ್ಮಕ ಭಾವನೆಗಳ ದ್ಯೋತಕ ಇದಾಗಿದೆ. ಜನತೆಯ ಜತೆಗೆ ನಿಕಟ ಸಂವಹನ ನಡೆಸಲು ಮನ್ ಕಿ ಬಾತ್ ನಿಂದ ಮಾತ್ರ ಸಾಧ್ಯವಾಗಿದೆ. 2014ರಲ್ಲಿ ದೆಹಲಿಗೆ ಬಂದ ಬಳಿಕ ನನ್ನ ಕಾರ್ಯಚಟುವಟಿಕೆಗಳು ಅಗಾಧವಾಗಿ ಬದಲಾಗಿತ್ತು. ಅಂತಹ ಸಂದರ್ಭದಲ್ಲಿ ಜನ ಸಾಮಾನ್ಯರೊಡನೆ ಬೆರೆಯಲು, ಭಾವನೆಗಳನ್ನು ಹಂಚಿಕೊಳ್ಳಲು ಮನ್‌ ಕಿ ಬಾತ್‌ ಮೂಲಕ ಸಾಧ್ಯವಾಯಿತು ಎಂದು ತಿಳಿಸಿದ್ದಾರೆ.

ಮನ್‌ ಕಿ ಬಾತ್‌ ನನಗೆ ಒಂದು ವ್ರತ, ಪೂಜೆ ಆಗಿದೆ. ಈಶ್ವರ ರೂಪಿ ಜನರ ಜತೆ ಮಾತನಾಡಲು ಇದರಿಂದ ಸಾಧ್ಯವಾಗಿದೆ. ಇಂದು ನಾವು 100ನೇ ಸಂಚಿಕೆಗೆ ತಲುಪಿದ್ದೇವೆ. ಈ ಮನ್​​ ಕೀ ಬಾತ್​ನಲ್ಲಿ ನಾನು ಮಾತನಾಡುವಾಗ ಸಾಕಷ್ಟು ಬಾರಿ ಭಾವುಕನಾಗಿದ್ದೇನೆ. ಸಾಮಾಜದ ಅನೇಕ ರಿಯಲ್​ ಹೀರೋಗಳನ್ನು ನೆನೆಯಲು ಮನ್​​ ಕೀ ಬಾತ್​​ ಒಂದು ಉತ್ತಮ ವೇದಿಕೆಯಾಗಿದೆ ಎಂದರು.

ಮನ್​ ಕೀ ಬಾತ್​ ಮೂಲಕ ಬೇಟಿ ಬಚಾವೋ ಬೇಟಿ ಪಡಾವೋ​​ ಕಾರ್ಯಕ್ರಮಕ್ಕೆ ಉತ್ತೇಜನ ನೀಡಲಾಯಿತು. ಈ ಕಾರ್ಯಕ್ರಮದ​ ಮೂಲಕ ಸ್ವಸಹಾಯ ಮಹಿಳಾ ಸಂಘಗಳು, ಯುವ ಉದ್ಯಮಿಗಳ ಜತೆ ಸಂವಾದ ನಡೆಸಲಾಯಿತು. ಆತ್ಮನಿರ್ಭರ್​ ಯೋಜನೆ ಕುರಿತು ದೇಶದ ಯುವಕರಿಗೆ ಮಾಹಿತಿ ನೀಡಲಾಯಿತು. ಶಿಕ್ಷಣ, ವೈದ್ಯಕೀಯ ಸೌಲಭ್ಯ, ಜಲ ಸಂರಕ್ಷಣೆ, ಸರ್ಕಾರಿ ಯೋಜನೆಗಳ ಬಗ್ಗೆ ತಿಳಿಯಿತು. ಸ್ಥಳೀಯ ಉದ್ಯಮಿಗಳಿಗೆ ಉತ್ತೇಜನ ನೀಡಲಾಯಿತು. ಗೊಂಬೆಗಳ ತಯಾರಿಕೆ ಮತ್ತು ಆತ್ಮ ನಿರ್ಭರ ಭಾರತಕ್ಕೆ ಸಾಕಷ್ಟು ಪ್ರಚಾರ ದೊರೆಯಿತು. ಸ್ವಚ್ಛ ಭಾರತಕ್ಕೆ ಮೈಲಿಗಲ್ಲು ದೊರೆಯಿತು ಎಂದು ಹೇಳಿದರು.

ಪ್ರವಾಸೋದ್ಯಮ ಕೂಡ ಸಾಕಷ್ಟು ಅಭಿವೃದ್ದಿಯಾಯಿತು. ಹರಿಯಾಣದಲ್ಲಿ ಲಿಂಗಾನುಪಾತ ಪ್ರಮಾಣ ಸುಧಾರಣೆಯಾಗಿದೆ. ಮನ್​ ಕೀ ಬಾತ್​ನಿಂದ ಬೇರೆಯವರಿಂದ ಕಲಿಯಲು ಅನುಕೂಲವಾಯಿತು. ಈ​​ ಕಾರ್ಯಕ್ರಮ ಸಮಾಜಕ್ಕೆ ಪ್ರೇರಣೆಯಾಗಿದೆ. ವೋಕಲ್ ಫಾರ್ ಲೋಕಲ್ ಮತ್ತಷ್ಟು ದೃಢವಾಗಿದೆ ಎಂದರು.

ಯುನೆಸ್ಕೋ ಡಿಜಿ ಮನ್​​ ಕೀ ಬಾತ್​ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಭಾರತದ ಶಿಕ್ಷಣ ಮತ್ತು ಸಂಸ್ಕೃತಿ ಬಗ್ಗೆ ಧ್ವನಿ ಎತ್ತಿದರು. ಮನ್​ ಕೀ ಬಾತ್​ ಪ್ರೇಣಾದಾಯಕವಾಗಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಮೃತ ಕಾಲದಲ್ಲಿ, ಜಿ20 ಅಧ್ಯಕ್ಷತೆವಹಿಸಿದ ಸುಸಂದರ್ಭದಲ್ಲಿ ಎಲ್ಲರು ಒಟ್ಟಾಗಿ ದೇಶದ ಅಭಿವೃದ್ದಿಯತ್ತ ಸಾಗೋಣ ಮತ್ತು ನವಭಾರತ ನಿರ್ಮಾಣಕ್ಕಾಗಿ ಕೈ ಜೋಡಿಸೋಣ ಎಂದು ದೇಶದ ಜನತೆಗೆ ಕರೆ ನೀಡಿದರು.

ಮನ್​ ಕೀ ಬಾತ್​ಗಾಗಿ ತೆರೆ ಹಿಂದೆ ಕಾರ್ಯ ನಿರ್ವಹಿಸಿದ ಪ್ರಸಾರ ಭಾರತಿ ತಂತ್ರಜ್ಞ ತಂಡಕ್ಕೆ ಮತ್ತು ಬೇರೆ ಬೇರೆ ಭಾಷೆಗಳಿಗೆ ಅನುವಾದ ಮಾಡಿದ ಅನುವಾದಕರಿಗೆ ಧನ್ಯವಾದಗಳು. ಮನ್​​ ಕೀ ಬಾತ್​ ಅನ್ನು ಆಲಿಸಿದ ಶೋತೃಗಳಿಗೆ ಧನ್ಯವಾದಗಳು ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!