ಆತನ ಮೇಲೆ ಪಾಕಿಗಳಿಗೆ ಅದೆಷ್ಟು ಸಿಟ್ಟಿತ್ತೆಂದರೆ.. ಶಿಲುಬೆಗೇರಿಸಿ, ಸತ್ತ ಮೇಲೂ 14 ಗುಂಡು ಹೊಡೆದರು.. ಅದಕ್ಕೂ ಮುನ್ನ ಆ ಯುವಕ ಕಾಶ್ಮೀರವನ್ನು ಕಾಪಾಡಿದ್ದ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ ( ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ವಿಶೇಷ)
ಮಕ್ಬೂಲ್ ಶೆರ್ವಾನಿ ಶ್ರೀನಗರ ಸಮೀಪದ ಬಾರಾಮುಲ್ಲಾದಲ್ಲಿ ಮುಸ್ಲಿಂ ಕುಟುಂಬದಲ್ಲಿ ಜನಿಸಿದರು. ಈ ಕುಟುಂಬವು ಸಣ್ಣ ಸಾಬೂನು ಕಾರ್ಖಾನೆಯನ್ನು ಹೊಂದಿತ್ತು. ಶೇರ್ವಾನಿ 1939 ರಲ್ಲಿ ರಾಷ್ಟ್ರೀಯ ಸಮ್ಮೇಳನಕ್ಕೆ ಸೇರಿದರು ಮತ್ತು ಬಾರಾಮುಲ್ಲಾದಲ್ಲಿ ಕಟ್ಟಾ ನ್ಯಾಷನಲ್ ಕಾನ್ಫರೆನ್ಸ್ ಕಾರ್ಯಕರ್ತ ಎಂದು ಗುರುತಿಕೊಂಡಿದ್ದರು. ಸೆಕ್ಯುಲರಿಸಮ್‌ ಅನ್ನು ವೈಯಕ್ತಿಕ ಸಿದ್ಧಾಂತವನ್ನಾಗಿಸಿಕೊಂಡಿದ್ದ ಶೆರ್ವಾನಿ ಅದರ ಆಚರಣೆಗೆ ಆಳವಾದ ಪ್ರಾಮುಖ್ಯತೆ ನೀಡಿದ್ದರು.
1944 ರ ಮೇ ನಲ್ಲಿ ಮೊಹಮ್ಮದ್ ಅಲಿ ಜಿನ್ನಾ ಕಾಶ್ಮೀರಕ್ಕೆ ಬಂದ. ಆತ ಬಾರಾಮುಲ್ಲಾದಲ್ಲಿ ನಡೆದ ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡುವಾಗ, ತನ್ನ ದ್ವಿ-ರಾಷ್ಟ್ರ ಸಿದ್ಧಾಂತವನ್ನು ಪ್ರಚಾರ ಮಾಡಿದ ಹಾಗೂ ಧರ್ಮದ ಹೆಸರಿನಲ್ಲಿ ಬೆಂಬಲಿಸುವಂತೆ ಕೋರಿದ. ಕೋಮು ರಾಜಕೀಯದ ವಿರೋಧಿಯಾಗಿದ್ದ ಶೆರ್ವಾನಿ ಇದರಿಂದ ಕುಪಿತರಾದರು, ಜಿನ್ನಾ ಕುತ್ತಿಗೆಗೆ ಪಾದರಕ್ಷೆಗಳ ಹಾರವನ್ನು ಹಾಕಲು ಯತ್ನಿಸಿದರು. ಆತನನ್ನು ವೇದಿಕೆಯಿಂದ ಕೆಳಗಿಳಿಯುವಂತೆ ಒತ್ತಾಯಿಸಿ ಭಾಷಣಕ್ಕೆ ಅಡ್ಡಿಪಡಿಸಿದರು.
ಆ ವೇಳೆ ಅವರು ಕೂಗಿದ್ದ ಘೋಷಣೆ ಪ್ರಸಿದ್ಧವಾಗಿದೆ…
“ಶೇರ್-ಇ- ಕಾಸ್ಮೀರ್ ಕಾ ಕ್ಯಾ ಇರ್ಷಾದ್? (ಕಾಶ್ಮೀರದ ಸಿಂಹಕ್ಕೆ ಏನು ಬೇಕು ಗೊತ್ತಾ?)
ಹಿಂದೂ, ಮುಸ್ಲಿಂ, ಸಿಖ್ ಇಥಾದ್”. (ಹಿಂದೂ, ಮುಸ್ಲಿಂ ಮತ್ತು ಸಿಖ್‌ರ ಏಕತೆ)…
ಮಕ್ಬೂಲ್ ಶೇರ್ವಾನಿಯ ಈ ದಿಟ್ಟ ಮತ್ತು ಅವಮಾನಕರ ಕ್ರಮವು ಜಿನ್ನಾರನ್ನು ವಿಚಲಿತರನ್ನಾಗಿ ಮಾಡಿತು ಮತ್ತು ಈ ಈ ಘಟನೆಯ ನಂತರ ಆತ ಕಾಶ್ಮೀರ ತೊರೆದ. ಅದರ ನಂತರ ಮತ್ತೆಂದೂ ಕಾಶ್ಮೀರದತ್ತ ಮುಖ ಮಾಡಿ ಸಹ ನೋಡಲಿಲ್ಲ. ಈ ಘಟನೆಯು ಶೇರ್ವಾನಿಯ ಕೆಚ್ಚೆದೆಯ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿತ್ತು. ಆ ವರೆಗೆ ಬೇರ್ಯಾವುದೇ ಕಾಶ್ಮೀರದ ನಾಯಕರು ಜಿನ್ನಾ ವಿರುದ್ಧ ನಿಲ್ಲುವ ಧೈರ್ಯ ಮಾಡಿರಲಿಲ್ಲ. ಈ ಸಭೆಯ ಸುದ್ದಿಯು ಭಾರತದಾದ್ಯಂತ ಹರಡಿತು. ರೊಚ್ಚಿಗೆದ್ದ ಮುಸ್ಲೀಂ ಲೀಗ್‌ ಅನುಯಾಯಿಗಳು ಶೆರ್ವಾನಿ ವಿರುದ್ಧ ಕಿಡಿಕಾರಿದರು.
26 ಅಕ್ಟೋಬರ್ 1947.. ಆ ದಿನ ಕಾಶ್ಮೀರಿ ಕಣಿವೆಯಲ್ಲಿ ಮಾಮೂಲಿ ದಿನವಾಗಿರಲಿಲ್ಲ.. ಪಾಕಿಸ್ತಾನಿ ಬುಡಕಟ್ಟು ಸೈನಿಕರು ಏಕಾಏಕಿ  ಬಾರಾಮುಲ್ಲಾ ನಗರದ ಮೇಲೆ ನುಗ್ಗಿದರು. ಬಾರಾಮುಲಾದಿಂದ ಕೇವಲ ಒಂದು ಗಂಟೆಯಷ್ಟು ದೂರದಲ್ಲಿರುವ ಶ್ರೀನಗರವನ್ನು ವಶಪಡಿಸಿಕೊಳ್ಳಲು ಮುಂದೆ ಸಾಗಿದರು. ಅದಕ್ಕೂ ಮುನ್ನ ಮೂರು ದಿನಗಳ ಕಾಲ ಕಣಿವೆಯಲ್ಲಿ ಬರ್ಬರ ಅನಾಗರಿಕತೆಯನ್ನು ಮೆರೆದರು. ಅತ್ಯಾಚಾರ ಮತ್ತು ದರೋಡೆ ಅವ್ಯಾಹತವಾಗಿ ಸಾಗಿತು… ಸಿಖ್ ಮತ್ತು ಹಿಂದೂ ಸಮುದಾಯಗಳ ಸದಸ್ಯರು ಈ ಸೈನಿಕರ ವಿಶೇಷ ಗುರಿಯಾಗಿದ್ದರು. ಅವರ ಆಸ್ತಿಗಳನ್ನು ಲೂಟಿ ಮಾಡಲಾಯಿತು, ಮನೆಗಳನ್ನು ಸುಡಲಾಯಿತು ಮತ್ತು ಅವರ ಮಹಿಳೆಯರನ್ನು ಅತ್ಯಾಚಾರ ಮಾಡಲಾಯಿತು.
ಏತನ್ಮಧ್ಯೆ, ದೇಶದ ರಕ್ಷಣೆಗೆ ತೆಡಗಲು ಸ್ಥಳೀಯ ಜನತೆಗೆ ಶೇಖ್ ಅಬ್ದುಲ್ಲಾ ನೀಡಿದ ಕರೆಗೆ ಪ್ರತಿಕ್ರಿಯೆಯಾಗಿ, ರಾಷ್ಟ್ರೀಯ ಸೇನೆಯನ್ನು ರಚಿಸಲಾಯಿತು. ಇದರಲ್ಲಿ ಸೇರುವುದು ಜೀವನದ ಸರ್ವಶ್ರೇಷ್ಠ ಕ್ಷಣವೆಂದು ಭಾವಿಸಿದ 22 ರ ಹರೆಯದ  ಶೇರ್ವಾನಿ ರಾಷ್ಟ್ರೀಯ ಸೇನೆಯಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡ. ಶತ್ರುಗಳನ್ನು ಹಿಂಬಾಲಿಸಿ ಅವರ ಚಲನವಲನಗಳನ್ನು ಗಮನಿಸಲು 22 ನ್ಯಾಷನಲ್ ಕಾನ್ಫರೆನ್ಸ್ ಸ್ವಯಂಸೇವಕರಿಗೆ ಸೂಚಿಸಲಾಗಿತ್ತು. ಶೆರ್ವಾನಿ ಭಯೋತ್ಪಾದಕರ ನಿಯಂತ್ರಣದಲ್ಲಿರುವ ಪ್ರದೇಶಗಳಿಗೆ ರಹಸ್ಯವಾಗಿ ಹೋದ. ತನ್ನ ಮೋಟಾರ್‌ ಬೈಕ್‌ ನಲ್ಲಿ ಹಳ್ಳಿ ಹಳ್ಳಿಗಳನ್ನು ಸುತ್ತಿ ಜನರಿಗೆ ಎಚ್ಚರಿಕೆ ನೀಡಿದ. ಆ ವೇಳೆಗೆ ಸೋಪೋರ್‌ ನಗರದ ಮೇಲೆ ಪಾಕಿಸ್ತಾನಿ ಬುಡಕಟ್ಟು ಪಡೆ ಆಕ್ರಮಣ ಆಕ್ರಮಣ ಮಾಡಿತು. ಈ ಸಂದರ್ಭದಲ್ಲಿ ಕಾಶ್ಮೀರಿ ಪಂಡಿತರನ್ನು ಉಳಿಸುವಲ್ಲಿ ಶೆರ್ವಾನಿ ಪಾತ್ರವು ದೇಶದ ಚರಿತ್ರೆಯಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಲ್ಪಟ್ಟಿದೆ.
ಕಾಶ್ಮೀರದ ಭದ್ರತೆ ಮತ್ತು ಸಮಗ್ರತೆಯನ್ನು ರಕ್ಷಿಸಲು ಶೇರ್ವಾನಿ ಮತ್ತು ಇತರ ಸ್ವಯಂಸೇವಕರು ಸಾಕಷ್ಟು ಜಾಗರೂಕತೆಯಿಂದ ಜನರಿಗೆ ಮಾರ್ಗದರ್ಶಿಗಳಾಗಿ ಕೆಲಸ ಮಾಡಿದರು. ಅವರು ಶ್ರೀನಗರದಿಂದ ಹಿಂತಿರುಗುತ್ತಿರುವಾಗ, ಶ್ರೀನಗರದತ್ತ ವಲಸೆ ಹೋಗುತ್ತಿದ್ದ ದೊಡ್ಡ ಸಿಖ್ ಜನ ಸಮೂಹವೊಂದು ಸಿಕ್ಕಿತು. ಆಗ ಶೆರ್ವಾನಿ, ಆ ರಸ್ತೆಯಲ್ಲಿ ಪಾಕಿಸ್ತಾನಿ ದಾಳಿಕೋರರ ಸಂಭಾವ್ಯ ಬೆದರಿಕೆಯಿದ್ದು ಹೆದ್ದಾರಿಯಲ್ಲಿ ಸಾಗದಂತೆ ಎಚ್ಚರಿಸಿದರು. ಆದರೆ ಆ ಜನರು ಅವರ ಸಲಹೆಯನ್ನು ನಿರ್ಲಕ್ಷಿಸಿದರು. ಪರಿಣಾಮ, 300 ಕ್ಕೂ ಹೆಚ್ಚು ಸಿಖ್ಖರನ್ನು ಚೂರಾ ಬಲ್ಗಾಮ್‌ನಲ್ಲಿ ನಡೆದ ಅಪಹರಿಸಿ ಕೊಲ್ಲಲಾಯಿತು.
ಈ ಘಟನೆ ಶೆರ್ವಾನಿಯನ್ನು ಕಂಗೆಡಿಸಿತು. ಆ ಬಳಿಕ ತನ್ನ ಸ್ವಂತ ಸುರಕ್ಷತೆಯ ಚಿಂತೆ ಬಿಟ್ಟ ಶೆರ್ವಾನಿ, ಶ್ರೀನಗರದ ಕಡೆಗೆ ಹೋಗಿ ದಾಳಿಕೋರ ವಿಶ್ವಾಸ ಸಂಪಾದಿಸಿ ಅವರನ್ನು ತಪ್ಪು ಮಾರ್ಗದಲ್ಲಿ ಸಂಚರಿಸುವಂತೆ ಮಾಡಿದ. ಶೆರ್ವಾನಿ ಹಂಚಿಕೆ ಫಲಪ್ರದವಾಯ್ತು. ಆತನ ಮಾಹಿತಿ ನಂಬಿದ ಪಾಕಿ ಸೈನಿಕರು ಸುಂಬಲ್ ಪ್ರದೇಶದಲ್ಲಿ ತಪ್ಪು ಮಾರ್ಗಗಳಲ್ಲಿ ಸಾಗಿ ಗೊತ್ತು ಗುರಿಯಿಲ್ಲದೆ ಅಲೆದಾಡಲಾರಂಭಿಸಿದರು. ಭಾರತೀಯ ಸೇನೆಯ ಸಿಖ್ ರೆಜಿಮೆಂಟ್‌ನ ಪಡೆಗಳು ಶ್ರೀನಗರದ ರಕ್ಷಣೆಗೆ ತಲುಪುವವರೆಗೆ ಪಾಕಿ ಸೈನಿಕರಿಗೆ ಶ್ರೀನಗರ ತಲುಪುವ ಮಾರ್ಗವೇ ಸಿಗಲಿಲ್ಲ. ಇದು ಅತ್ಯಂತ ಅಮೂಲ್ಯ ಸಮಯವಾಗಿತ್ತು. ಅಂದು ಶೆರ್ವಾನಿ ಪಾಕಿಗಳ ದಿಕ್ಕುತಪ್ಪಿಸದಿದ್ದರೆ, ಪಾಕಿಗಳು ಶ್ರೀನಗರ ವಿಮಾನ ನಿಲ್ದಾಣವನ್ನು ವಶಪಡಿಸಿಕೊಂಡು, ಭಾರತದೊಂದಿಗಿನ ಸಂಪರ್ಕವನ್ನೇ ಕಡಿತಗೊಳಿಸಿರುತ್ತಿದ್ದರು. ಭಾರತೀಯ ಸೈನಿಕರು ಸಹ ಶ್ರೀನಗರ ಪ್ರವೇಶಿಸುವುದು ಕಷ್ಟವಾಗುತ್ತಿತ್ತು.
ತಾವು ದಾರಿ ತಪ್ಪಿದ್ದನ್ನು ಅರಿತು ಭಯಭೀತರಾದ ದಾಳಿಕೋರರು ಬಾರಾಮುಲ್ಲಾದಿಂದ 35 ಕಿ.ಮೀ ದೂರದಲ್ಲಿ ಸುಂಬಲ್‌ನಲ್ಲಿದ್ದ ಶೇರ್ವಾನಿಯನ್ನು ಬೆನ್ನಟ್ಟಿ ಬಂದರು. ಉದ್ದೇಶಪೂರ್ವಕವಾಗಿ ತಮ್ಮ ದಾರಿ ತಪ್ಪಿಸಿದ ಆತನನ್ನು ಶಿಕ್ಷಿಸಲು ಮರಳಿ ಬಾರಾಮುಲ್ಲಾಕ್ಕೆ ಎಳೆದೊಯ್ದರು. ತಮ್ಮನ್ನು ದಾರಿ ತಪ್ಪಿಸಿದ್ದಕ್ಕಾಗಿ ಪಾಠ ಕಲಿಸಲು, ಮತ್ತು ಜನರ ಮನಸ್ಸಿನಲ್ಲಿ ಭಯಾನಕತೆಯನ್ನು ಸೃಷ್ಟಿಸಲು, ಶೆರ್ವಾನಿಯನ್ನು ಬಾರಾಮುಲಾದ ಕೇಂದ್ರ ಚೌಕದಲ್ಲಿ ಶಿಲುಬೆಗೇರಿಸಲಾಯಿತು.
ಶೆರ್ವಾನಿ ಮೇಲೆ ಪಾಕಿಗಳಿಗೆ ಎಷ್ಟು ಕಿಚ್ಚಿತ್ತೆಂದರೆ, ಆತನ ದೇಹದ ಗಾಯಗಳಿಂದ ಸೋರುತ್ತಿದ್ದ ರಕ್ತದಲ್ಲೇ ಆತನ ಅಂಗಿಯ ಮೇಲೆ ʼಕಾಫಿರ್ʼ ಎಂದು ಬರೆದರು. ಶೇರ್ವಾನಿ ತನ್ನ ದೇಶ ದ್ರೋಹಕ್ಕಿಂತ ಸಾವಿಗೆ ಆದ್ಯತೆ ನೀಡಿದ. ಇಂತಹ ಕ್ಷಣದಲ್ಲೂ ಶೆರ್ವಾನಿಯ ಮುಖದಲ್ಲಿ ದೇಶಕ್ಕಾಗಿ ಪ್ರಾಣನೀಡುತ್ತಿರುವ ಸಂತೃಪ್ತಿಯ ನಗುವಿತ್ತು. ದಾಳಿಕೋರರ ಮುಖಕ್ಕೆ ಉಗುಳಿ “ಹಿಂದೂ-ಮುಸ್ಲಿಂ-ಸಿಖ್ ಇತಿಹಾದ್, ಆಜಾದ್ ಹಿಂದೂಸ್ತಾನ್ ಜಿಂದಾಬಾದ್” ಎಂದು ಕೂಗಿದ.
ಇದು ದಾಳಿಕೋರರನ್ನು ಮತ್ತಷ್ಟು ಕೆರಳಿಸಿತು, ಅವರು ಕೋಪದ ಭರದಲ್ಲಿ, ಶೆರ್ವಾನಿ ಹೃದಯಕ್ಕೆ ಗುಂಡುಗಳನ್ನು ಹೊಡೆದರು. ಆತ ಸತ್ತನೆಂದು ಗೊತ್ತಾದ ನಂತರವೂ.. ಮೃತ ದೇಹಕ್ಕೆ ಹದಿನಾಲ್ಕು ಗುಂಡುಗಳನ್ನು ಹೊಡೆದರು. ಸಾವೇ ಎದುರಿಗಿದ್ದರೂ ಪಾಕಿ ಆಕ್ರಮಣಕಾರರ ಮುಂದೆ ತಲೆಬಾಗದ ಆತನ ದೃಢತೆ, ದೈರ್ಯ, ಅಪ್ರತಿಮ ದೇಶಭಕ್ತಿಯನ್ನು ಭಾರತದ ಯಾವ ದೇಶಭಕ್ತನೂ ಮರೆಯಲಾರ.
ಕಾಲಾನಂತರದಲ್ಲಿ, ಅವನ ಶಿಲುಬೆಗೇರಿಸುವಿಕೆಯು ಜನಪ್ರಿಯ ಕಥೆಯಾಗಿ ಮಾರ್ಪಟ್ಟಿತು ಮತ್ತು ಅವನ ರಾಷ್ಟ್ರಕ್ಕೆ ಅವನ ಅಚಲ ನಿಷ್ಠೆಗಾಗಿ ಕಣಿವೆಯಲ್ಲಿ ಕ್ರಮೇಣ ದಂತಕಥೆಯಾಯಿತು. ನಂತರದ ವರ್ಷಗಳಲ್ಲಿ, ಅವರ ವೀರತ್ವದ ಕಾರ್ಯವು ಕಾಶ್ಮೀರಿಗಳಿಗೆ- ಯುವಕರು ಮತ್ತು ಹಿರಿಯರಿಗೆ ಸ್ಫೂರ್ತಿ ನೀಡಿತು. ಅವರು ಸತ್ತರು ಆದರೆ ಅವರ ಆತ್ಮವು ಲಕ್ಷಾಂತರ ರಾಷ್ಟ್ರೀಯವಾದಿಗಳ ಹೃದಯದಲ್ಲಿ ವಾಸಿಸುತ್ತದೆ. “ಮುಜಾಹಿದ್ ಶೇರ್ವಾನಿ” ಹಾಗೂ ʼಬಾರಾಮುಲ್ಲಾದ ಸಿಂಹʼ ಎಂಬ ಬಿರುದುಗಳಿಂದ ಶೆರ್ವಾನಿ ಜನರ ಮನಸ್ಸಿನಲ್ಲಿ ಅಜರಾಮರ. ಹಿಂದೂ, ಮುಸ್ಲಿಂ, ಸಿಖ್, ಕ್ರಿಶ್ಚಿಯನ್ ಜಾತಿ ಬೇದವಿಲ್ಲದೆ ಶೆರ್ವಾನಿ ಭಾರತದ ಸೂಪರ್‌ ಹೀರೋ.. ಎಂದೆಂದಿಗೂ!.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!