ಹೊಸದಿಗಂತ ವರದಿ, ಮೈಸೂರು:
ಗ್ರಾಮಸ್ಥರ ಬಹಿಷ್ಕಾರದಿಂದಾಗಿ ರದ್ದಾಗಿದ್ದ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕು ಹುಳಿಮಾವು ಗ್ರಾಮ ಪಂಚಾಯತ್ ನ ಸದಸ್ಯ ಸ್ಥಾನಗಳಿಗೆ ಮಾ.29ರಂದು ಚುನಾವಣೆಯನ್ನು ನಿಗದಿಪಡಿಸಲಾಗಿದೆ.
ಏಷಿಯನ್ ಪೇಂಟ್ಸ್ ಕಾರ್ಖಾನೆಗೆ ಭೂಮಿ ನೀಡಿದ್ದವರಿಗೆ ಉದ್ಯೋಗ ನೀಡುವಂತೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿದ್ದರು. ಜಿಲ್ಲಾಡಳಿತ ಹಾಗೂ ಕಾರ್ಖಾನೆಯ ಆಡಳಿತ ಮಂಡಳಿ ಬೇಡಿಕೆಗಳಿಗೆ ಸ್ಪಂದಿಸದ ಕಾರಣ ಗ್ರಾಪಂ ಚುನಾವಣೆಯನ್ನು ಬಹಿಷ್ಕರಿಸಿದ್ದರು. ರೈತರ ಪ್ರತಿಭಟನೆ ಕೊನೆಗೂ ಅಂತ್ಯ ಕಂಡಿದೆ. ತಹಶೀಲ್ದಾರ್ ಅವರು ಪ್ರತಿಭಟನಾ ಸ್ಥಳಕ್ಕೆ ತೆರಳಿ ರೈತರಿಗೆ ಉದ್ಯೋಗ ನೇಮಕಾತಿ ಪತ್ರ ನೀಡಿದರು. ಇದಾದ ಬಳಿಕ ಗ್ರಾಪಂ ಚುನಾವಣೆಯನ್ನು ನಿಗದಿಗೊಳಿಸಲಾಗಿದೆ.
ಚುನಾವಣೆಗೆ ನಾಮಪತ್ರ ಸಲ್ಲಿಸಲು ಮಾ.19 ಕೊನೆಯ ದಿನವಾಗಿದ್ದು, ಮಾ.20 ನಾಮಪತ್ರ ಪರಿಶೀಲನೆ ನಡೆಯಲಿದೆ. ಮಾ.22ರಂದು ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನವಾಗಿದ್ದು, ಮಾ.29 ಮತದಾನ ಅಗತ್ಯವಿದ್ದರೆ ನಡೆಯಲಿದೆ. ಮಾ.30 ಮರುಮತದಾನ ಅಗತ್ಯವಿದ್ದರೆ ನಡೆಯಲಿದೆ. ಮಾ.31 ಮತ ಎಣಿಕೆ ಕಾರ್ಯ ನಡೆಯಲಿದೆ.