Thursday, June 30, 2022

Latest Posts

ಗಾಂಜಾ ಸಾಗಿಸುತ್ತಿದ್ದ ಐವರು ಆರೋಪಿಗಳ ಬಂಧನ: 1 ಕ್ವಿಂಟಾಲ್‍ ಒಣ ಗಾಂಜಾ ಸೊಪ್ಪು ವಶಕ್ಕೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸ ದಿಗಂತ ವರದಿ, ಚಿಕ್ಕಮಗಳೂರು:

ಗಾಂಜಾ ಸಾಗಿಸುತ್ತಿದ್ದ ಐವರು ಆರೋಪಿಗಳನ್ನು ಬಂಧಿಸಿರುವ ಅಪರಾಧ ಪತ್ತೆದಳದ ಸಿಬ್ಬಂದಿಗಳು 25 ಲಕ್ಷ ರೂ. ಬೆಲೆ ಬಾಳುವ 1 ಕ್ವಿಂಟಾಲ್‍ನಷ್ಟು ಒಣ ಗಾಂಜಾ ಸೊಪ್ಪನ್ನು ವಶಪಡಿಸಿಕೊಂಡಿದ್ದಾರೆ.
ಗೌರಿಬಿದನೂರಿನಿಂದ ಚಿಕ್ಕಮಗಳೂರು ನಗರಕ್ಕೆ ಕಾರಿನಲ್ಲಿ ಗಾಂಜ ಸಾಗಿಸಲಾಗುತ್ತಿತ್ತು. ಖಚಿತ ಸುಳಿವಿನ ಮೆರೆಗೆ ದಾಳಿ ನಡೆಸಿದ ಸಿಇಎನ್ ಪೊಲೀಸರು 101.20 ಕೆಜಿ ಗಾಂಜಾ, ಕಾರು ಹಾಗೂ ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಂಡಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಚ್.ಅಕ್ಷಯ್ ತಿಳಿಸಿದ್ದಾರೆ.
ಜಿಲ್ಲೆಯಲ್ಲೇ ಮೊದಲು ಇಷ್ಟು ದೊಡ್ಡ ಪ್ರಮಾಣದ ಗಾಂಜವನ್ನು ವಶಪಡಿಸಿಕೊಂಡಿರುವುದು ಜಿಲ್ಲೆಯಲ್ಲಿ ಇದೇ ಮೊದಲು ಎಂದು ಎಸ್ಪಿ ತಿಳಿಸಿದ್ದು, ಆಂಧ್ರಪ್ರದೇಶದ ವಿಶಾಖಪಟ್ಟಣಂನಿಂದ ಗಾಂಜಾವನ್ನು ತಲಾ ಒಂದು ಕೆಜಿ ಪ್ಲಾಸ್ಟಿಕ್ ಬ್ಯಾಗ್‍ನಲ್ಲಿ ಪ್ಯಾಕ್ ಮಾಡಿ ಸಾಗಿಸಲಾಗುತ್ತಿತ್ತು.
ಬಂಧಿತರಲ್ಲಿ ಇಬ್ಬರು ಮಹಿಳೆಯರು ಬಂಧಿತರಲ್ಲಿ ಇಬ್ಬರು ಮಹಿಳೆಯರು ಇದ್ದಾರೆ ಎಂದು ತಿಳಿದುಬಂದಿದೆ. ಓರ್ವ ಮಹಿಳೆಯ ಪತಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ. ಇವರೊಂದಿಗೆ ಚಿಕ್ಕಮಗಳೂರಿನ ಆಸೀಫ್, ಅತಿಕ್ ಅಹಮದ್ ಹಾಗೂ ಮಂಡ್ಯದ ಸುಹೇಲ್ ಪಾಶಾ ಬಂದಿತರಾಗಿದ್ದಾರೆ.
ಕಾರ್ಮಿಕರು, ವಿದ್ಯಾರ್ಥಿಗಳೇ ಟಾರ್ಗೆಟ್
ಕಾರ್ಮಿಕರು ಹಾಗೂ ವಿದ್ಯಾರ್ಥಿಗಳನ್ನು ಕೇಂದ್ರವಾಗಿಟ್ಟುಕೊಂಡು ಗಾಂಜಾವನ್ನು ತರಕಾರಿ ಗಾಡಿಗಳಲ್ಲಿ ಈ ತಂಡ ಮಾರಾಟ ಮಾಡುವಲ್ಲಿ ಯಶಸ್ವಿಯಾಗಿತ್ತು ಎಂದು ತಿಳಿದುಬಂದಿದೆ. ಹಿಂದೆ ಬಿಡಿ ಬಿಡಿಯಾಗಿ ಗಾಂಜಾ ಸೊಪ್ಪನ್ನು ಮಾರಾಟ ಮಾಡುತ್ತಿದ್ದ ಪ್ರಕರಣದಲ್ಲಿ ಬಂಧಿತರಾಗಿದ್ದವರಿಂದ ಈ ಬೃಹತ್ ಜಾಲದ ಆರೊಪಿಗಳ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದರು.
ಇದೇ ವರ್ಷ ಮೇ ತಿಂಗಳ 6 ರಂದು ಗೂಡ್ಸ್ ವಾಹನದಲ್ಲಿ ತರಕಾರಿ ಜೊತೆಗೆ 30 ಕೆ.ಜಿ. ಗಾಂಜಾವನ್ನು ಸಾಗಿಸುವಾಗ ಅಪರಾಧ ಪತ್ತೆದಳದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ 5 ಮಂದಿ ಆರೋಪಿಗಳನ್ನು ಬಂಧಿಸಿ ಗಾಂಜಾ ವಶಪಡಿಸಿಕೊಂಡಿದ್ದರು.
ಪ್ರಕರಣದ ಬೆನ್ನುಹತ್ತಿದ ಪೊಲೀಸರು ನಿರಂತರ ತನಿಖೆ ನಡೆಸಿ ಪ್ರಕರಣದ ಪ್ರಮುಖ ಆರೋಪಿಯ ಪತ್ತೆಗಾಗಿ ಸತತ ಪ್ರಯತ್ನ ನಡೆಸಿತ್ತು. ಇದರ ಫಲವಾಗಿ ಗಾಂಜಾ ಸಾಗಣೆ ಹಾಗೂ ಮಾರಾಟಗಾರರ ದೊಡ್ಡಮಟ್ಟದ ಜಾಲದ ಬಗ್ಗೆ ಖಚಿತ ಸುಳಿವು ಸಿಕ್ಕಿವೆ.
ಜೈಲಿನಿಂದಲೇ ಕಾರ್ಯಾಚರಣೆ
ಆರೋಪಿಗಳು ಆಂಧ್ರಪ್ರದೇಶದ ವಿಶಾಖಪಟ್ಟಣಂನಿಂದ ಕರ್ನಾಟಕ ಹಾಗು ಗೋವಾ ಇನ್ನಿತರೆ ರಾಜ್ಯಗಳಿಗೆ ದೊಡ್ಡ ಪ್ರಮಾಣದಲ್ಲಿ ಗಾಂಜಾ ಸರಬರಾಜು ಮಾಡುತ್ತಿದೆ ಎನ್ನುವ ಮಾಹಿತಿಗಳು ಸಿಇಎನ್ ಪೊಲೀಸರಿಗೆ ಲಭ್ಯವಾಗಿತ್ತು. ಈ ಜಾಲದ ಪ್ರಮುಖ ಸೂತ್ರದಾರ ಹಾಗೂ ಪ್ರಮುಖ ಆರೋಪಿ ಕಾರಾಗೃಹದಲ್ಲಿದ್ದುಕೊಂಡೇ ತನ್ನ ಅಪರಾಧಿ ಚಟುವಟಿಕೆಗಳನ್ನು ಮುಂದುವರಿಸಿದ್ದ ಎನ್ನುವುದ ತನಿಖೆಯಿಂದ ಗೊತ್ತಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ಈ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುವ ಸಿಬ್ಬಂದಿಗಳನ್ನು ಅವರು ಶ್ಲಾಘಿಸಿದ್ದಾರೆ. ಮಾದಕ ದ್ರವ್ಯದ ಹಾವಳಿ ವಿರುದ್ಧ ಪೊಲೀಸ್ ಇಲಾಖೆ ಹೋರಾಟ ಮುಂದುವರಿಯಲಿದ್ದು, ಸಾರ್ವಜನಿಕರು ಯಾವುದೇ ರೀತಿಯ ಮಾಹಿತಿಗಳನ್ನು ಇಲಾಖೆಯೊಂದಿಗೆ ಹಂಚಿಕೊಂಡು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.
ಭರ್ಜರಿ ಬೇಟೆ
ದಶಕಗಳ ಕಾಲದಿಂದಲೂ ನಗರ ಸೇರಿದಂತೆ ಜಿಲ್ಲೆಯ ಪ್ರಮುಖ ಪಟ್ಟಣ ಪ್ರದೇಶಗಳಲ್ಲಿ ಎಗ್ಗಿಲ್ಲದೆ ಗಾಂಜಾ ಮಾರಾಟವಾಗುತ್ತಿತ್ತು. ನೂರಾರು ಯುವಕರು ಹಾಗೂ ಅವರ ಕುಟುಂಬ ಇದರಿಂದ ಸಾಕಷ್ಟು ತೊಂದರೆ ಅನುಭವಿಸಿತ್ತು. ಕೇವಲ ಸ್ಥಳೀಯ ಪೂರೈಕೆದಾರರನ್ನು ಪದೇ ಪದೇ ಪೊಲೀಸರು ಬಂಧಿಸುತ್ತಿದ್ದರಾದರೂ ಜಾಮೀನಿನ ಮೇಲೆ ಹೊರ ಬರುವ ಆರೋಪಿಗಳು ಮತ್ತದೇ ದಂಧೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಈ ಹಿನ್ನೆಲೆಯಲ್ಲಿ ಜಾಲದ ಪ್ರಮುಖ ಕಿಂಗ್ ಪಿನ್‍ಗಳನ್ನು ಬಂಧಿಸಿ ಕಟ್ಟುನಿಟ್ಟಿನ ಕ್ರಮ ಜುರಗಿಸಬೇಕು ಎನ್ನುವ ಒತ್ತಾಯಗಳು ಕೇಳಿಬಂದಿದ್ದವು.
ಈ ಹಿನ್ನೆಲೆಯಲ್ಲಿ ವಿಶೇಷ ತಂಡಗಳನ್ನು ರಚಿಸಿದ್ದ ಪೊಲೀಸ್ ಇಲಾಖೆ ಕಳೆದ ಕೆಲವು ತಿಂಗಳಿನಿಂದ ಗಾಂಜಾ ದಂಧೆಯ ಕಡಿವಾಣಕ್ಕೆ ಕ್ರಮ ಕೈಗೊಂಡಿತ್ತು. ಹಲವರನ್ನು ವಿಚಾರಣಗೂ ಒಳಪಡಿಸಿತ್ತು.
ಇದೀಗ ಭರ್ಜರಿ ಬೇಟೆ ನಡೆಸಿರುವ ಪೊಲೀಸರು ಬೃಹತ್ ಪ್ರಮಾಣದ ಗಾಂಜಾ ಜೊತೆಗೆ ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಬಗ್ಗೆ ಪ್ರಶಂಸೆ ವ್ಯಕ್ತವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss